ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟ: ಸಿಎಂ ನಿವಾಸದ ಎದುರು ಪ್ರತಿಭಟನೆ ಜೂ.27ಕ್ಕೆ

Last Updated 9 ಜೂನ್ 2022, 14:03 IST
ಅಕ್ಷರ ಗಾತ್ರ

ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2 ಎ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಜೂನ್‌ 27ರಂದು ಶಿಗ್ಗಾಂವ್‌ನಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯಸ್ವಾಮಿ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಕೊಡಲು ಸಾಧ್ಯವೋ ಅಥವಾ ನಿಮ್ಮಿಂದ ಸಾಧ್ಯವಿಲ್ಲವೋ ಎಂಬುದನ್ನು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಬೇಕು. ವಿನಾಕಾರಣ ವಿಳಂಬ ನೀತಿ ಅನುಸರಿಸಬಾರದು ಎಂದರು.

ಶೇ 80ರಷ್ಟು ಪಂಚಮಸಾಲಿ ಸಮುದಾಯದ‌ ಜನತೆ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಈ ಸಮುದಾಯ ನ್ಯಾಯ ಕೇಳುತ್ತಿದೆ, ಮುಖ್ಯಮಂತ್ರಿ ಗಾದಿ ಕೇಳುತ್ತಿಲ್ಲ. ಸಮಾಜದ ಬಡ ಜನರಿಗೆ ಅನುಕೂಲವಾಗಲು ಮೀಸಲಾತಿ ಕೇಳುತ್ತಿದ್ದೇವೆ, ಇದು ನ್ಯಾಯಯುತವಾದ ಹಕ್ಕೊತ್ತಾಯ ಎಂದರು.

ಬೊಮ್ಮಾಯಿ ಮಾತು ಕೊಟ್ಟ ಹಿನ್ನೆಲೆಯಲ್ಲಿ ಅವರ ಮೇಲೆ ನಂಬಿಕೆ ಇರಿಸಿ ಹೋರಾಟವನ್ನು ಮೊಟಕುಗೊಳಿಸಿದ್ದೆವು. ಆದರೆ, ಅವರು ನುಡಿದಂತೆ ನಡೆಯಲಿಲ್ಲ, ಪಂಚಮಸಾಲಿ ಸಮಾಜದವರಿಗೆ ನೋವಾಗಿದೆ, ತಾಳ್ಮೆ ಪರೀಕ್ಷೆಗೆ ಮಿತಿ ಇದೆ. ಇನ್ನಾದರೂ ಸರ್ಕಾರ ತನ್ನ ನಿಲುವು ಸ್ಪಷ್ಟವಾಗಿ ತಿಳಿಸಬೇಕು ಆಗ್ರಹಿಸಿದರು.

ಸರಿಸುಮಾರು 25 ಲಕ್ಷ ಸಮಾಜ ಬಾಂಧವರು ಸೇರಿಸಿ ಬೃಹತ್ ಧರಣಿ ನಡೆಸುವ ಚಿಂತನೆ ನಡೆದಿದೆ. ಮೀಸಲಾತಿ ದೊರಕಿದರೆ ಬೃಹತ್ ಜನಸಮೂಹದಲ್ಲಿ ಸರ್ಕಾರಕ್ಕೆ ಸನ್ಮಾನ ಮಾಡಲಾಗುವುದು, ಮುಖ್ಯಮಂತ್ರಿಗಳಿಗೆ ಶೇಂಗಾ ಹೋಳಿಗೆ ತಿನ್ನಿಸಿ, ಕಲ್ಲು ಸಕ್ಕರೆ ತುಲಾಭಾರ ನೆರವೇರಿಸಿಲಾಗುವುದು, ಇಲ್ಲವೇ ಹೋರಾಟ ಮುಂದುವರೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಬಿ.ಎಂ. ಪಾಟೀಲ, ಎಂ.ಎಸ್. ರುದ್ರಗೌಡರ, ಶಂಕರಗೌಡ ಬಿರಾದಾರ, ನಿಂಗನಗೌಡ ಸೊಲಾಪೂರ, ಶೋಭಾ ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT