ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸಿ, ಎಸ್ಟಿ ಫಲಾನುಭವಿಗಳಿಗೆ ಸಾಲ ಸೌಲಭ್ಯ ಒದಗಿಸಿ

ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ಸೂಚನೆ
Last Updated 24 ಸೆಪ್ಟೆಂಬರ್ 2020, 14:21 IST
ಅಕ್ಷರ ಗಾತ್ರ

ವಿಜಯಪುರ: ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸಾಲ, ಸಹಾಯಧನ ಸೌಲಭ್ಯವನ್ನು ಸಕಾಲಕ್ಕೆ ದೊರಕಿಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ಅವರು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಸ್ಸಿ, ಎಸ್ಟಿ ಅರ್ಹ ಫಲಾನುಭವಿಗಳಿಗೆ ಸರ್ಕಾರ ಕೊಡಮಾಡಿದ ಸಾಲ ಮತ್ತು ಸಹಾಯಧನ ಸೌಲಭ್ಯವನ್ನು ಸಕಾಲಕ್ಕೆ ದೊರಕಿಸಬೇಕು. ಸಾಲ ನೀಡಲು ಮುಂಗಡ ಠೇವಣಿ ಹಣ ಪಡೆಯದಂತೆ ಅವರು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪರಿಶಿಷ್ಟ ಜಾತಿ ಹಾಗೂ ಪಂಗಡದ ಎಂ.ಟೆಕ್, ಎಂ.ಬಿ.ಬಿ.ಎಸ್ ಹಾಗೂ ವಿವಿಧ ಕೋರ್ಸ್ ಮಾಡಿದ ವಿದ್ಯಾರ್ಥಿಗಳಿಗೆ ಸಹಾಯಧನ ಹಾಗೂ ಪದವಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‍ಟಾಪ್ ನೀಡಲು ಕ್ರೀಯಾ ಯೋಜನೆ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹೆಚ್ಚಿನ ಅಂಕಗಳ ಆಧಾರದ ಮೇಲೆ ಅರ್ಹರಿಗೆ ಈ ಸೌಲಭ್ಯ ದೊರಕಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಕೋವಿಡ್-19 ಲಾಕ್‍ಡೌನ್ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟ ಎದುರಿಸುತ್ತಿರುವ ಪರಿಶಿಷ್ಟ ಜಾತಿಯ ಚಲವಾದಿ, ಸಿಂಗೆ ಜನಾಂಗಗಳಿಗೂ ಸರ್ಕಾರದಿಂದ ಸಹಾಯಧನ ಸೌಲಭ್ಯ ದೊರಕಿಸಿಕೊಡುವಂತೆ ಸಮಿತಿ ಸದಸ್ಯ ಅಡಿವೆಪ್ಪ ಸಾಲಗಲ್ ಮನವಿ ಮಾಡಿದ ಮೇರೆಗೆ, ಈ ಕುರಿತು ಅರ್ಹ ಫಲಾನುಭವಿಗಳನ್ನು ಗುರುತಿಸಿ ಪಟ್ಟಿ ಸಿದ್ದಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ದೌರ್ಜನ್ಯದಿಂದ ನೊಂದ ಸಂತ್ರಸ್ತರಿಗೆ ಸಕಾಲಕ್ಕೆ ಪರಿಹಾರ ದೊರೆಯಬೇಕು. ಪರಿಹಾರ ನೀಡುತ್ತಿರುವುದು ಸೇರಿದಂತೆ ಪ್ರಗತಿ ಹಂತದ ಬಗ್ಗೆ ಕಾಲಕಾಲಕ್ಕೆ ಮಾಹಿತಿ ಸಹ ತಪ್ಪದೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ತೊರವಿ ಗ್ರಾಮದ ಅಂಗನವಾಡಿ ಕಟ್ಟಡಕ್ಕೆ ಸಂಬಂಧಿಸಿದಂತೆ ಅನುದಾನ ಪ್ರಸ್ತಾವನೆ ಸಲ್ಲಿಸಬೇಕು. ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತ ಪುನರ್ ನವೀಕರಣಕ್ಕೆ ಸಂಬಂಧಿಸಿದಂತೆ ತಾವೂ ಖುದ್ದಾಗಿ ಭೇಟಿ ಪರಿಶೀಲಿಸಿದ ಬಳಿಕ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಅತಾಲಟ್ಟಿ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ನೀಗಿಸಬೇಕು. ಕೆಸರಟ್ಟಿ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು. ತೊರವಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಮುಸಕಿನಾಳ ಗ್ರಾಮದಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿ ಹುದ್ದೆಯನ್ನು ಭರ್ತಿ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್‌,ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಗೆ ಎಲ್ಲ ರೀತಿಯ ಸಹಕಾರ ನೀಡಿದ ಸಮಿತಿ ಸದಸ್ಯರಿಗೆ ಹಾಗೂ ಸಮುದಾಯದವರಿಗೆ ಅಭಿನಂದನೆ ಸಲ್ಲಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ,ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ, ಸಮಿತಿ ಸದಸ್ಯರಾದ ಸುರೇಶ ಮಣ್ಣೂರ, ಅರವಿಂದ ಸಾಲವಾಡಗಿ, ಶಿವಾನಂದ ಪಟ್ಟೇದ, ರಾಜಶೇಖರ ಕುಚಬಾಳ, ವಿನಾಯಕ ಗುಣಸಾಗರ, ಪರಶುರಾಮ ಮಾದರ, ಮುತ್ತಣ್ಣ ಸಾಸನೂರ, ಬಸವರಾಜ ಪೂಜಾರಿ, ಮನೋಹರ ಕಾಂಬಳೆ, ಗಣಪತಿ ಬಾಣಿಕೋಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT