ಶುಕ್ರವಾರ, ಅಕ್ಟೋಬರ್ 29, 2021
20 °C

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಗರದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ಮತ್ತು ಜಿಲ್ಲೆಯ ಎಲ್ಲ ಹಳ್ಳಿಗಳಿಗೆ ಬಸ್ ಸೌಲಭ್ಯ ಒದಗಿಸಲು ಆಗ್ರಹಿಸಿ ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.

ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆ ಸುರೇಖಾ ಕಡಪಟ್ಟಿ ಮಾತನಾಡಿ, ಹಿಂದಿನ ವರ್ಷದ ವಿದ್ಯಾರ್ಥಿ ಬಸ್ ಪಾಸ್‍ನ ವಿಸ್ತರಣೆಯ ಅವಧಿ ಮುಗಿದಿದೆ. ಆದರೆ, ಇನ್ನೂ ಕೆಲವು ಕೋರ್ಸ್ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿವೆ. ಮತ್ತೆ ಕೆಲವು ಕೋರ್ಸ್ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗಿದೆ. ವಿದ್ಯಾರ್ಥಿಗಳು ಈಗ ತಮ್ಮ ಹಳ್ಳಿ – ಊರುಗಳಿಂದ ಶಾಲಾ-ಕಾಲೇಜಿಗೆ ಬರಬೇಕಾದರೆ ಬಸ್ ಟಿಕೆಟ್‍ನ ದರ ಪಾವತಿಸಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ ಟಿಕೆಟ್ ದರ ಹೊರೆಯಾಗಿ ಪರಿಣಮಿಸಿದೆ ಎಂದರು.

ಕಳೆದ ವರ್ಷ ವಿದ್ಯಾರ್ಥಿಗಳು ಪಡೆದಿದ್ದ ವಾರ್ಷಿಕ ಬಸ್‍ಪಾಸ್ ಸಂಪೂರ್ಣವಾಗಿ ಉಪಯೋಗವಾಗಿಲ್ಲ. ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆದ ಪರಿಣಾಮ ಬಹುಪಾಲು ಶಾಲಾ-ಕಾಲೇಜಿಗೆ ರಜೆ ಘೋಷಣೆಯಾಗಿದ್ದು, ಆಫ್‍ಲೈನ್ ತರಗತಿಗಳು ನಡೆದಿಲ್ಲ. ಈ ಕಾರಣದಿಂದಾಗಿ  ವರ್ಷದ ಮೊದಲಲ್ಲೇ ಸಂಪೂರ್ಣ ಬಸ್‍ಪಾಸ್ ದರ ಪಾವತಿಸಿದ್ದರೂ, ವಾರ್ಷಿಕ ಬಸ್‍ಪಾಸ್ ಸುಮಾರು ಅರ್ಧ ವರ್ಷಕ್ಕೂ ಹೆಚ್ಚಾಗಿ ಬಳಕೆ ಆಗಿಲ್ಲ. ಈಗ ಮತ್ತೊಮ್ಮೆ ವಿದ್ಯಾರ್ಥಿಗಳು ವಾರ್ಷಿಕ ಬಸ್‍ಪಾಸ್‍ನ ಸಂಪೂರ್ಣ ವೆಚ್ಚ ಭರಿಸಿ ಪಡೆಯಬೇಕಾದಲ್ಲಿ ಅವರ ಮೇಲೆ ಹೊರೆ ಬೀಳುತ್ತದೆ. ಈಗಾಗಲೇ ಆರ್ಥಿಕವಾಗಿ ಕುಗ್ಗಿರುವ ಕುಟುಂಬಗಳಿಗೆ ಈ ವೆಚ್ಚ ಮತ್ತಷ್ಟು ಹೊರೆಯನ್ನು ತರುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ವಿದ್ಯಾರ್ಥಿಗಳ ವಿದ್ಯಾಭ್ಯಾಸವನ್ನು ಮತ್ತು ಅವರ ಆರ್ಥಿಕ ಸ್ಥಿತಿಗತಿಗಳನ್ನು ಗಮನದಲ್ಲಿ ಇರಿಸಿಕೊಂಡು, ಪ್ರಸ್ತುತ ವರ್ಷದ ಬಸ್‍ಪಾಸ್‍ನ್ನು ಉಚಿತವಾಗಿ ನೀಡಬೇಕು ಎಂದು ಹೆಳಿದರು.

ಈ ಪ್ರತಿಭಟನೆಯಲ್ಲಿ ಸುಸ್ಮಿತಾ, ಪೂಜಾ ವಾಲಿಕಾರ, ತನುಶ್ರೀ, ಶರಣು ವಾಲಿಕಾರ, ಖೇದರ್, ಶಾಹೀದ್, ರಮೇಶ ಗಲಗಲಿ, ವಿಜಯಲಕ್ಷ್ಮಿ, ಅರ್ಚನಾ, ಕಾವೇರಿ ರಜಪೂತ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.