ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಸಂಖ್ಯಾತರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸಿ- ಧನ್ಯಕುಮಾರ್ ಜಿನಪ್ಪ ಗುಂಡೆ

ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದ ಸದಸ್ಯ
Last Updated 5 ಜನವರಿ 2022, 13:28 IST
ಅಕ್ಷರ ಗಾತ್ರ

ವಿಜಯಪುರ: ಅಲ್ಪಸಂಖ್ಯಾತರ ಫಲಾನುಭವಿಗಳ ಅನುಕೂಲಕ್ಕಾಗಿ ಇರುವ ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳಡಿ ಸೌಲಭ್ಯಗಳನ್ನು ಸಕಾಲಕ್ಕೆ ಕಲ್ಪಿಸುವ ಜೊತೆಗೆ ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಗಮನ ನೀಡುವಂತೆ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದ ಸದಸ್ಯ ಧನ್ಯಕುಮಾರ್ ಜಿನಪ್ಪ ಗುಂಡೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಅಲ್ಪಸಂಖ್ಯಾತರ ಸಬಲೀಕರಣಕ್ಕಾಗಿ ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಜಾರಿಯಲ್ಲಿದ್ದು, ಇದರ ಪರಿಣಾಮಕಾರಿ ಅನುಷ್ಠಾನಕ್ಕೆ ಗಮನ ನೀಡಬೇಕು. ಜೊತೆಗೆ ಅರ್ಹ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗದಂತೆ ವಿಶೇಷ ಗಮನ ನೀಡಬೇಕು ಎಂದರು.

ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ವಿಷಯಗಳ ಬಗ್ಗೆ ಪರಿಶೀಲನೆ ನಡೆಸಿದ ಅವರು, ಅರ್ಹ ಫಲಾನುಭವಿಗಳಿಗೆ ತೋಟಗಾರಿಕೆ ಮತ್ತು ಕೃಷಿ ಇಲಾಖೆ ವ್ಯಾಪ್ತಿಯ ಸೌಲಭ್ಯಗಳು ಹೆಚ್ಚು ಹೆಚ್ಚು ಅಲ್ಪಸಂಖ್ಯಾತರ ಫಲಾನುಭವಿಗಳಿಗೆ ದೊರೆಯಲು ಅನುಕೂಲವಾಗುವಂತೆ ಸೂಕ್ತ ಅರಿವು ಮೂಡಿಸಬೇಕು ಎಂದರು.

ಜಿಲ್ಲೆಯ ಉರ್ದು ಶಾಲೆಗಳು ಮತ್ತು ಮದರಸಾಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಆದ್ಯತೆ ನೀಡಬೇಕು. ಆಯಾ ಶಾಲೆಗಳ ವ್ಯಾಪ್ತಿಯಲ್ಲಿ ಶಿಕ್ಷಕರ ಗೈರು ಹಾಜರಾತಿ ಬಗ್ಗೆ ನಿಗಾ ಇಡಬೇಕು. ಶಾಲಾ ಕಟ್ಟಡಗಳ ಅತ್ಯುತ್ತಮ ನಿರ್ವಹಣೆ ಹಾಗೂ ಶಿಕ್ಷಕರ ಕೊರತೆಯಾಗದಂತೆ ವಿಶೇಷ ಗಮನ ನೀಡಬೇಕು ಎಂದು ಅವರು ಸೂಚಿಸಿದರು.

ಜಿಲ್ಲೆಯಲ್ಲಿ 5 ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಅಲ್ಪಸಂಖ್ಯಾತರ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ತಾತ್ಕಾಲಿಕ ಶಾಲೆಗಳಲ್ಲಿ ಕಲಿಯುತ್ತಿರುವ ಶಾಲೆಗಳಿಗೆ ಶಾಶ್ವತ ಪರಿಹಾರ ನೀಡಲು ಶಾಶ್ವತ ಶಾಲಾ ಕಟ್ಟಡದಲ್ಲಿ ಸ್ಥಳಾಂತರಿಸಿ ಗುಣಮಟ್ಟದ ಶಿಕ್ಷಣ ಒದಗಿಸಲು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಲ್ಪ ಸಂಖ್ಯಾತರಿಗಾಗಿ ಇರುವಂತಹ ವಸತಿ ಯೋಜನೆಗಳಲ್ಲಿ ವಿಶೇಷವಾಗಿ ಕೊಳಚೆ ಪ್ರದೇಶದ ಫಲಾನುಭವಗಳಿಗೆ ಅನುಪಾತದ ಆಧಾರದಲ್ಲಿ ಸೌಲಭ್ಯ ಕಲ್ಪಿಸುವಂತೆ ಮತ್ತು ಅರ್ಹರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಲು ತಿಳಿಸಿದರು.

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯಾಪ್ತಿಯಲ್ಲಿ ಶ್ರಮ ಶಕ್ತಿ, ಕೊಳವೆ ಬಾವಿಗಳ ಸೌಲಭ್ಯ ಹಾಗೂ ವಿವಿಧ ಸಾಲಸೌಲಭ್ಯಗಳನ್ನು ಆದ್ಯತೆ ಮೇಲೆ ದೊರಕಿಸಬೇಕು. ಈ ಯೋಜನೆಯಡಿ ಹೆಚ್ಚಿನ ಫಲಾನುಭವಿಗಳಿಗೆ ಸೌಲಭ್ಯ ದೊರೆಯಲು ಅನುಕೂಲವಾಗುವಂತೆ ಹೆಚ್ಚಿನ ಗುರಿ ನಿಗದಿಪಡಿಸುವ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಹ ಕಳುಹಿಸಿಕೊಡುವಂತೆ ಅವರು ಸೂಚನೆ ನೀಡಿದರು.

ಕೋವಿಡ್‌ ಮೂರನೇ ಅಲೆಯ ಸಂಭಾವ್ಯ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚು ಜಾಗೃತರಾಗಿ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯಲ್ಲಿ ಮಕ್ಕಳ ಅಪೌಷ್ಠಿಕತೆ ನಿವಾರಣೆಯ ಬಗ್ಗೆ ವಿಶೇಷ ಗಮನ ನೀಡುವಂತೆ ಸೂಚಿಸಿದರು.

ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಮತ್ತು ಅರ್ಹ ಫಲಾನುಭವಿಗಳ ಕೌಶಲ ಅಭಿವೃದ್ಧಿಗೆ ವಿಶೇಷ ಗಮನ ನೀಡಬೇಕು ಎಂದರು.

ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌, ಜಿ.ಪಂ ಸಿಇಒ ಗೋವಿಂದ ರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಸಿದ್ಧಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಯಲ್ಲಮ್ಮ ಪಡೇಸೂರು, ಜಿ.ಪಂ. ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಅಲ್ಪಸಂಖ್ಯಾತರ ಸಮಿತಿಯ ಸದಸ್ಯರಾದ ರಫೀಕ ಭಂಡಾರಿ, ಅಶೋಕ ಮಿರಜಕರ, ಅಲ್ಲಾಭಕ್ಷ ಬಿಜಾಪುರ, ಹೊರ್ತಿ, ಬಾಗೇವಾಡಿ, ಕಾಳೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

***

ಸರ್ಕಾರದಿಂದ ಮಂಜೂರಾದ ಅನುದಾನ ಸಮರ್ಪಕವಾಗಿ ಬಳಕೆಯಾಗುವ ಜೊತೆಗೆ ಅನುದಾನ ಮರಳಿ ಹೋಗದಂತೆ ಗಮನ ನೀಡಬೇಕು

–ಧನ್ಯಕುಮಾರ್ ಜಿನಪ್ಪ ಗುಂಡೆ, ಸದಸ್ಯ

ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT