ಭಾನುವಾರ, ಜೂನ್ 20, 2021
25 °C

ಕೋವಿಡ್ ಪೀಡಿತ ಹಳ್ಳಿಗರಿಗೆ ತಕ್ಷಣ ಚಿಕಿತ್ಸೆ ಒದಗಿಸಿ: ಗೋವಿಂದ ಕಾರಜೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿದ್ದು, ಲಕ್ಷಣ ಕಂಡು ಬಂದ ತಕ್ಷಣ ಅಂತವರನ್ನು ಚಿಕಿತ್ಸೆಗೆ ಒಳಪಡಿಸಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ನೂತನ ಪ್ರವಾಸಿ ಮಂದಿರದಲ್ಲಿ ಶನಿವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣಪುಟ್ಟ ಮನೆಗಳಲ್ಲಿ ಜನರು ವಾಸಿಸುತ್ತಿರುವುದರಿಂದ ಕುಟುಂಬದ ಸದಸ್ಯರಲ್ಲಿ ಕೋವಿಡ್ ವೇಗವಾಗಿ ಹರಡಲು ಕಾರಣವಾಗುತ್ತಿದೆ. ಕಾರಣ ಕೋವಿಡ್ ಲಕ್ಷಣಗಳು ಕಂಡುಬಂದ ತಕ್ಷಣ ಅವರನ್ನು ಕೋವಿಡ್ ಕೇರ್ ಸೆಂಟರ್‌, ನಿಗದಿತ ಆಸ್ಪತ್ರೆ, ಕ್ವಾರಂಟೇನ್ ಕೇಂದ್ರಕ್ಕೆ ಸೇರಿಸುವಂತೆ ಸೂಚನೆ ನೀಡಿದರು.

ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಲಕ್ಷಣವುಳ್ಳವರಿಗೆ ಆರ್.ಎಂ.ಪಿ ವೈದ್ಯರು ಚಿಕಿತ್ಸೆ ಒದಗಿಸುವ, ವಿನಾಕಾರಣ ಕಾಲಹರಣ ಮಾಡುವುದನ್ನು ತಪ್ಪಿಸಬೇಕು. ತೀವ್ರ ಉಸಿರಾಟ ತೊಂದರೆ, ತೀವ್ರತರ ಕೋವಿಡ್ ಲಕ್ಷಣಗಳವರಿಗೆ ಈ ವೈದ್ಯರು ಚಿಕಿತ್ಸೆ ಮಾಡದಂತೆ ಆರೋಗ್ಯ ಇಲಾಖೆಯಿಂದ ತಿಳಿಹೇಳಬೇಕು ಎಂದರು.

ಕೋವಿಡ್ ಲಕ್ಷಣಗಳಿಗೆ ಗ್ರಾಮಸ್ಥರು ಸ್ಥಳೀಯ ಔಷಧ ಬಳಸದೇ ನಿಗದಿತ ಔಷಧ, ಮಾತ್ರೆಗಳನ್ನು ಮಾತ್ರ ಬಳಸಲು ಮನವರಿಕೆ ಮಾಡಬೇಕು. ಕೋವಿಡ್ ನಿವಾರಣೆಗಾಗಿ ಇರುವಂತಹ ನಿಗದಿತ ಔಷಧಿಯನ್ನು ಪೂರೈಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಜಿಲ್ಲಾ ಆಸ್ಪತ್ರೆ ಮೇಲಿನ ಒತ್ತಡ ಕಡಿತಗೊಳಿಸಲು ಆಯಾ ತಾಲ್ಲೂಕು ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಕ್ಸಿಜನ್ ಮತ್ತು ಇತರೆ ಸೌಲಭ್ಯವಿರುವಂತೆ ನೋಡಿಕೊಳ್ಳಲು ಸಲಹೆ ನೀಡಿದರು.

ವಿಜಯಪುರಕ್ಕೆ 40 ಆಕ್ಸಿಜನ್ ಕಾನ್ಸಂಟ್ರೇಟರ್ ಹಂಚಿಕೆ ಸಹ ಮಾಡಲಾಗಿದೆ. ಕೇಂದ್ರ ಸರ್ಕಾರವು ಬೆಳಗಾವಿ, ಹುಬ್ಬಳ್ಳಿ ಮತ್ತು ಇತರೆ ಜಿಲ್ಲೆಗಾಗಿ ಆಕ್ಸಿಜನ್ ಪೂರೈಕೆ ಆರು ಟ್ಯಾಂಕರ್‌ಗಳನ್ನು ನೀಡಿದ್ದು, ವಿಜಯಪುರ ಜಿಲ್ಲೆಯ ನೆರವಿಗಾಗಿ ಬೆಳಗಾವಿ ಜಿಲ್ಲಾಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಆಕ್ಸಿಜನ್ ಟ್ಯಾಂಕರ್‌ ನೆರವು ಪಡೆಯುವಂತೆ ಅವರು ಸೂಚನೆ ನೀಡಿದರು.

ಕೋವಿಡ್ ರೋಗಿಗಳಿಗೆ ನಿಗದಿತ ಔಷಧಿಯನ್ನು ಒಳಗೊಂಡಂತೆ ಔಷಧ ಕಿಟ್‌ಗಳನ್ನು ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಲಕ್ಷಣ ಕಂಡು ಬಂದವರಿಗೆ ಒದಗಿಸಬೇಕು. ಈಗಾಗಲೇ ಗ್ರಾಮೀಣ ಭಾಗದಲ್ಲಿ ಕಾರ್ಯಪಡೆಗಳು ಕಾರ್ಯನಿರ್ವಹಿಸುತ್ತಿದ್ದು, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳನ್ನು ಇನ್ನಷ್ಟು ಚುರುಕುಗೊಳಿಸಲು ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 1,300ಕ್ಕೂ ಹೆಚ್ಚು ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಬೇರೆ ಬೇರೆ ಜಿಲ್ಲೆಗಳಿಂದ ಸುಮಾರು 100 ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗಾಗಿ ಬೇರೆ ಜಿಲ್ಲೆಯಿಂದ ರೋಗಗಳು ಬರುತ್ತಿರುವುದರಿಂದ ಆಕ್ಸಿಜನ್ ಬೇಡಿಕೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಇಳಿಮುಖವಾಗುತ್ತಿದೆ. ಗ್ರಾಮಾಂತರ ಪ್ರದೇಶಕ್ಕೆ ಹೆಚ್ಚಿನ ಗಮನ ನೀಡಲಾಗಿದೆ. ವಿನೂತನ ತಂತ್ರಾಂಶದ ಮೂಲಕ ಬೆಡ್ ನಿರ್ವಹಣೆ ನಡೆದಿದ್ದು, ಇತರೆ ಜಿಲ್ಲೆಗಳಿಗೆ ಈ ತಂತ್ರಾಂಶ ಮಾದರಿಯಾಗಿದೆ ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ರೋಗಿಗಳ ಪತ್ತೆಹಚ್ಚಲು ಕಾರ್ಯ ಪಡೆಗಳು ಸಕ್ರಿಯವಾಗಿವೆ ಎಂದು ಹೇಳಿದರು.

ಕೋವಿಡ್‌ ಲಕ್ಷಣ ಉಳ್ಳವರಿಗೆ ನಿಗದಿತ ಔಷಧ, ಮಾತ್ರೆಗಳನ್ನು ಪೂರೈಸಲಾಗುತ್ತಿದೆ. ಈವರೆಗೆ 328 ಕೋವಿಡ್ ಪಾಸಿಟಿವ್ ರೋಗಿಗಳನ್ನು ಗುರುತಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಮೀಪದಲ್ಲಿಯೇ ವಸತಿ ನಿಲಯಗಳಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗಿದೆ. ಕೋವಿಡ್ ರೋಗಿಗಳಿಗೆ ಟಂಟಂ, ಕ್ರೂಜರ್, ಆಂಬುಲೆನ್ಸ್  ಮೂಲಕ ಆಸ್ಪತ್ರೆಗಳಿಗೆ ರವಾನಿಸಲು ಆಯಾ ಪಿಡಿಒಗಳಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮಹೇಂದ್ರ ಕಾಪಸೆ, ಡಾ.ಮುಕುಂದ ಗಲಗಲಿ. ಜಿಲ್ಲಾ ಆಸ್ಪತ್ರೆ ಸರ್ಜನ್  ಡಾ.ಶರಣಪ್ಪ ಕಟ್ಟಿ, ಡಾ. ಲಕ್ಕಣ್ಣವರ್, ಡಾ.ಬಿರಾದಾರ, ಡಾ. ಮಹೇಶ್ ನಾಗರಬೆಟ್ಟ ಉಪಸ್ಥಿತರಿದ್ದರು.

***

ವಿಜಯಪುರದ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಆರು ಕೆ.ಎಲ್ ಸಾಮಾರ್ಥ್ಯದ ಆಕ್ಸಿಜನ್ ಟ್ಯಾಂಕ್ ಅಳವಡಿಸಲು ಪ್ರಸ್ತಾವನೆ ಸಲ್ಲಿಸಿದರೆ ಮಂಜೂರು ಮಾಡಿಸಲಾಗುವುದು
–ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು