ಬುಧವಾರ, ಅಕ್ಟೋಬರ್ 21, 2020
26 °C

ನಿರಂತರ ಮಳೆಗೆ ಕೊಳೆಯುತ್ತಿದೆ ಬೆಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊರ್ತಿ: ಗ್ರಾಮ ಹಾಗೂ ಇಂಚಗೇರಿಯಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಹೊಲದಲ್ಲಿ ನೀರು ನಿಂಲ್ಲುತ್ತಿದ್ದು, ರೈತ ಸಮೂಹ ಆತಂಕಕ್ಕಿಡಾಗಿದೆ.

ರೈತರು ಜಮೀನು ಹದ ಮಾಡಲು, ಬೀಜ, ಗೊಬ್ಬರ ಸೇರಿದಂತೆ ಕಳೆ ತೆಗೆಸಲು  ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಸಜ್ಜೆ, ಮೆಕ್ಕೆ ಜೋಳ ಸೇರಿದಂತೆ ವಿವಿಧ ಬೆಳೆಗಳ ರಾಶಿಯ ನಂತರ ಖರ್ಚು ಕಳೆದು ಹಣ ಉಳಿಯುವುದು ಕಷ್ಟ. ಈ ಮಧ್ಯೆ ಮಳೆ ಹೆಚ್ಚುತ್ತಿರುವುದು ಮತ್ತಷ್ಟು ಆತಂಕಕ್ಕೆ ದೂಡಿದೆ. 

‘ಸಜ್ಜೆ ಕಟಾವು ಮಾಡಿ ಕೆಲ ದಿನಗಳ ಆರಿಕೆ ನಂತರ ರಾಶಿ ಮಾಡಬೇಕೆಂದರೆ ಮಳೆಯು ಬಿಡುವು ನೀಡದೇ ಸುರಿಯುತ್ತಿದೆ. ಸಜ್ಜೆ ತೆನೆಗಳು ಒಣಗುತ್ತಿಲ್ಲ’ ಎಂದು ಇಂಚಗೇರಿ-ಜಿಗಜೇವಣಿಯ ರೈತ ಸಿದ್ಧಣ್ಣ ಕುಂಬಾರ ಹೇಳಿದರು.

ಇಂಚಗೇರಿಯ ದಗಡು ರಾಮಸಿಂಗ್ ರಾಠೋಡ ಎಂಬುವರ 3 ಎಕರೆ ಜಮೀನಿನಲ್ಲಿ ಸಜ್ಜೆ, ಮೆಕ್ಕೆಜೋಳ ನಿರಂತರ ಮಳೆಗೆ ಕೊಳೆತಿವೆ. ಟೊಮೆಟೊ, ಹೀರೆ, ಹಾಗಲ ಮೊದಲಾದ  ತರಕಾರಿ ಬೆಳೆಗಳು ಸಹ  ಕೊಳೆಯುತ್ತಿವೆ.

‘ಮುಂಗಾರು ಬೆಳೆಯಿಂದ ಪ್ರತಿ ವರ್ಷ ₹2ಲಕ್ಷ ಹಣ ಕೈ ಸೇರುತಿತ್ತು. ಈ ವರ್ಷ ಉತ್ತಮ ಬೆಳೆ ಬರುವ ನಿರೀಕ್ಷೆ ಇತ್ತು. ಆದರೆ, ಹೆಚ್ಚಿನ ಮಳೆಯಿಂದಾಗಿ ಬೆಳೆಯಲ್ಲಿ ನೀರು ನಿಂತುಕೊಂಡಿದೆ. ಹಾಕಿದ ಬಂಡವಾಳ ಸಿಗುವ ಅನುಮಾನ ಕಾಡುತ್ತಿದೆ’ ಎಂದು ರೈತ ಶಿವಾನಂದ ರಾಠೊಡ ಹೇಳಿದರು. 

ಮಳೆಯಿಂದಾಗಿ ರೈತರಿಗೆ ಹಾನಿಯಾಗಿರುವ ಕುರಿತು ಸರ್ವೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಸಹಾಯಕ ಕೃಷಿ ಇಲಾಖೆ ಅಧಿಕಾರಿ ಮಹದೇವಪ್ಪ ಏವೂರ ತಿಳಿಸಿದರು.

ಹೊರ್ತಿ, ಸಾವಳಸಂಗ, ಇಂಚಗೇರಿ, ಹಳಗುಣಕಿ ಸೇರಿದಂತೆ ವಿವಿಧ ಬೆಳೆ ಮತ್ತು ವಿವಿಧ ತರಕಾರಿ ಬೆಳೆಗಳು ನಾಶವಾಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾವುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದರು.

ಮಳೆಯಿಂದಾಗಿ ಬೆಳೆಗಳು ಕೊಳೆತು ಹೋಗಿದ್ದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ರೈತರ ಬೆಳೆ ಸಮೀಕ್ಷೆ ಮಾಡಿ ರೈತರಿಗೆ ಪರಿಹಾರ ನೀಡಲು ಮುಂದಾಗಬೇಕು ಇಂಚಗೇರಿಯ ರೈತರಾದ ಅಪ್ಪು ಚವ್ಹಾಣ, ಶಿವಾನಂದ ರಾಠೋಡ, ರೇವಣಸಿದ್ಧ ಹರಿಜನ, ಕಲ್ಲಪ್ಪ ಆರವತ್ತಿ, ಅದೀಲ ವಾಲಿಕಾರ, ಅನೀಲ ಕುಲಕರ್ಣಿ, ರುಕ್ಮುದ್ಧೀನ್ ಬಾಬಾನಗರ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.