ಗುರುವಾರ , ಜುಲೈ 7, 2022
23 °C

ಕರುನಾಡ ಸೌಹಾರ್ದತೆಗೆ ದುಷ್ಟಶಕ್ತಿಗಳಿಂದ ದಕ್ಕೆ- ಶಾಸಕ ಡಾ.ಎಂ.ಬಿ. ಪಾಟೀಲ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಸರ್ವಜನಾಂಗದ ಶಾಂತಿಯ ತೋಟವಾಗಿರುವ ಕನ್ನಡ ನಾಡನ್ನು ಕೆಲವು ದುಷ್ಟಶಕ್ತಿಗಳು ರಾಜಕೀಯ ಆಸೆಗಾಗಿ ಹಾಳು ಮಾಡುವ ಕೆಲಸದಲ್ಲಿ ತೊಡಗಿವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಶಾಸಕ ಡಾ.ಎಂ.ಬಿ. ಪಾಟೀಲ ವಿಷಾದಿಸಿದರು.

ನಗರದ ಕೆ.ಸಿ. ಮಾರುಕಟ್ಟೆ ಪ್ರಾಂಗಣದಲ್ಲಿ ಕಾಂಗ್ರೆಸ್ ಮುಖಂಡ ಅಬ್ದುಲ್‍ ಹಮೀದ್ ಮುಶ್ರೀಫ್ ನೇತೃತ್ವದಲ್ಲಿ ರಂಜಾನ್‌ ಅಂಗವಾಗಿ ಆಯೋಜಿಸಲಾಗಿದ್ದ ಇಫ್ತಿರ್‌ ಕೂಟ ಹಾಗೂ ಸೌಹಾರ್ದತಾ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲ ಜನಾಂಗಗಳ ಶಾಂತಿಯ ನೆಲೆಬೀಡಾಗಿದ್ದ ಕನ್ನಡ ನಾಡನ್ನು ಕುವೆಂಪು ಅವರು ಶಾಂತಿಯ ತೋಟ ಎಂದು ಬಣ್ಣಿಸಿದ್ದಾರೆ. ಆದರೆ, ಕೆಲವು ಸಮಾಜಘಾತುಕ ವ್ಯಕ್ತಿಗಳು ಈ ಶಾಂತಿಯ ತೋಟದ ಸೌಂದರ್ಯವನ್ನು ಹಾಗೂ ಸೌಹಾರ್ದತೆಯನ್ನು ಹಾಳುಗೆಡುವುತ್ತಿದ್ದಾರೆ ಎಂದರು.

ರಂಜಾನ್ ಮಾಸ ಆತ್ಮಶುದ್ಧಿ, ಮನಶುದ್ಧಿ ಮಾಡಿಕೊಳ್ಳುವ ಮಹತ್ವದ ಪವಿತ್ರ ಮಾಸವಾಗಿದೆ. ನಮ್ಮ ಧರ್ಮವನ್ನು ಪ್ರೀತಿಸುವ ಜೊತೆಗೆ ಉಳಿದ ಧರ್ಮವನ್ನೂ ಗೌರವಿಸೋಣ, ಸೌಹಾರ್ದತೆ, ಸಹೋದರತೆಯಿಂದ ಜೀವಿಸೋಣ, ನಮ್ಮ ಏಕತೆ ಛೀದ್ರ ಮಾಡುವ ಶಕ್ತಿಗಳಿಗೆ ತಕ್ಕ ಪಾಠ ಕಲಿಸೋಣ ಎಂದರು.

ಸಾನ್ನಿಧ್ಯ ವಹಿಸಿದ್ದ ಕರ್ನಾಟಕ ಅಹಲೆ ಸುನ್ನತ್‌ ಜಮಾತ್ ಅಧ್ಯಕ್ಷ ಹಜರತ್ ಸೈಯ್ಯದ್ ತನ್ವೀರ್‌ ಪೀರಾ ಹಾಶ್ಮೀ ಮಾತನಾಡಿ, ಇಸ್ಲಾಂ ಧರ್ಮ ಎಂದರೆ ಶಾಂತಿಯ ಇನ್ನೊಂದು ಪದ, ಪ್ರವಾದಿ ಮೊಹ್ಮದ್ ಪೈಗಂಬರ್ ಅವರು ಮಾನವೀಯತೆ, ದಯೆ ಗುಣಗಳನ್ನು ಬೋಧಿಸಿದ್ದಾರೆ. ನಾವೆಲ್ಲರೂ ಭಾರತೀಯರು, ನಾವೆಲ್ಲರೂ ಸಹೋದರರು, ದುಷ್ಟಶಕ್ತಿಗಳು ದ್ವೇಷ ಹರಡುವ ಕೆಲಸ ಮಾಡುತ್ತಿದ್ದಾರೆ. ಈ ದ್ವೇಷದ ಕಾರ್ಯಕ್ಕೆ ಯಾರೂ ಬಲಿಯಾಗಬಾರದು, ಸಹೋದರರಂತೆ ಜೀವಿಸಬೇಕು ಎಂದರು.

ಕಾಂಗ್ರೆಸ್‌ ಮುಖಂಡ ಅಬ್ದುಲ್‍ ಹಮೀದ್ ಮುಶ್ರೀಫ್ ಮಾತನಾಡಿ, ರಂಜಾನ್ ಹಬ್ಬ ಪರೋಪಕಾರ, ದಾನದ ಮಹತ್ವ, ಹಸಿವಿನ ಮಹತ್ವ ತಿಳಿಸುತ್ತದೆ. ಉಪವಾಸ ಆಚರಿಸಿ, ದಾನ-ಧರ್ಮ ಮಾಡಿ ಪುಣ್ಯ ಸಂಪಾದಿಸೋಣ, ಸಹೋದರತೆಯಿಂದ ಜೀವಿಸಿ ಈ ಭವ್ಯ ಭಾರತವನ್ನು ಇನ್ನಷ್ಟೂ ಬಲಿಷ್ಠಗೊಳಿಸೋಣ ಎಂದರು.

ಸಿದ್ಧಲಿಂಗ ಸ್ವಾಮೀಜಿ, ಶಂಭುಲಿಂಗ ಸ್ವಾಮೀಜಿ, ಧನಸಿಂಗ ಮಹಾರಾಜರು, ಫಾ.ಜೀವನ್ ಸಾನಿಧ್ಯ ವಹಿಸಿದ್ದರು.

ಮುಖಂಡರಾದ ಮೊಹ್ಮದ್‍ರಫೀಕ್ ಟಪಾಲ್, ವೈಜನಾಥ ಕರ್ಪೂರಮಠ, ಭೀಮಶಿ ಕಲಾದಗಿ, ಅರುಣಸಿಂಗ್ ಪರದೇಶಿ, ಡಾ.ಗಂಗಾಧರ ಸಂಬಣ್ಣಿ, ಅಣ್ಣಾರಾಯ ಈಳಿಗೇರ, ಸುಭಾಸ ಛಾಯಾಗೋಳ, ಎಸ್.ಎಂ. ಪಾಟೀಲ ಗಣಿಹಾರ, ರವಿ ಬಿರಾದಾರ, ಉಸ್ಮಾನ್‌ ಪಟೇಲ, ಶರಣಪ್ಪ ಯಕ್ಕುಂಡಿ, ಇರ್ಫಾನ್ ಶೇಖ್, ವಕೀಲರಾದ ಇಂಡೀಕರ, ನಾಗರಾಜ ಲಂಬು, ಸಂತೋಷ ಶಹಾಪುರ, ಶ್ರೀನಾಥ ಪೂಜಾರಿ, ಚಾಂದಸಾಬ ಗಡಗಲಗಾವ, ಅಕ್ರಂ ಮಾಶ್ಯಾಳಕರ, ಶಹನವಾಜ್ ಮುಲ್ಲಾ, ರವಿಂದ್ರ ಜಾಧವ, ಯಲ್ಲಪ್ಪ ಪಾರಶೆಟ್ಟಿ, ಇದ್ರಸ್ ಬಕ್ಷಿ, ಜಮೀರ ಬಾಂಗಿ, ಶಫೀಕ್ ಬಗದಾದಿ, ಆಫ್ತಾಬ ಖಾದ್ರಿ, ಮೈನು ಬೀಳಗಿ, ಈರಪ್ಪ ಕುಂಬಾರ, ಅಲ್ತಾಫ ಅಸ್ಕಿ, ಗೌಸ್‍ಪೀರಾಂ ಪೀರಜಾದ, ರಾಜು ಖಂಡಗಾಳೆ, ಅಬ್ದುಲ್ ಹಮೀದ್ ಬಾಂಗಿ, ಅಲ್ತಾಫ್ ಇನಾಮದಾರ, ರಫೀಕ್ ಪೀರಜಾದೆ, ಇರ್ಷಾದ್ ಪೀರಜಾದೆ, ಫಾರೂಕ್ ಇಂಡಿ, ಜಮೀರ ಉಸ್ತಾದ್, ಅಬ್ಬಾಸ್ ಅಲಿ, ಇಸ್ಮಾಯಿಲ್ ಪೀರಜಾದೆ, ಮುದಸ್ಸರ್ ಮುಲ್ಲಾ, ರಫಿಕ್ ಬೀಳಗಿ ಇದ್ದರು.

***

ಬಸವ ಜಯಂತಿ ಹಾಗೂ ರಂಜಾನ್ ಹಬ್ಬ ಈ ಬಾರಿ ಒಂದೇ ದಿನ ಬಂದಿರುವುದು ಹಬ್ಬದ ಸಂಭ್ರಮ ಮತ್ತಷ್ಟು ಇಮ್ಮಡಿಗೊಂಡಿದೆ

–ಎಂ.ಬಿ. ಪಾಟೀಲ,ಶಾಸಕ  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು