ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನೇ ಅಸಮಾಧಾನ ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕು: ರಮೇಶ ಜಿಗಜಿಣಗಿ

Last Updated 15 ಜನವರಿ 2021, 14:15 IST
ಅಕ್ಷರ ಗಾತ್ರ

ವಿಜಯಪುರ: ‘ಸಚಿವ ಸ್ಥಾನ ಸಿಕ್ಕಿಲ್ಲಂತ ರಸ್ತೆಯಲ್ಲಿ ಒದರಾಡಿಕೊಂಡು ತಿರುಗಾಡಿದ ಜನ ತಲೆ ಕೆಟ್ಟಿದೆ ಅಂತಾರೆ’ ಎಂದು ಸಂಸದ ರಮೇಶ ಜಿಗಜಿಣಗಿ ಅವರು ಶಾಸಕ ಯತ್ನಾಳರನ್ನು ಕುಟುಕಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಏನೇ ಅಸಮಾಧಾನ ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕು. ಹೊಟ್ಟೆಯೊಳಗಿನ ಸಿಟ್ಟು ವರಿಷ್ಠರ ಮುಂದೆ ಕಾರಕೋಬೇಕು. ಅದನ್ನು ಬಿಟ್ಟು ಬಾಯಿಗೆ ಹದ್ದಿಲ್ಲದಂಗ ಯದ್ವಾತದ್ವಾ ಮಾತಾಡಬಾರದು’ ಎಂದರು.

‘ಇಂಥವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಡಿ. ಸೇರಿಸಿಕೊಳ್ಳುವುದರಿಂದ ನಮಗೇನು ಸಮಸ್ಯೆ ಇಲ್ಲ. ಆಮೇಲೆ ನೀವೇ ಅನುಭವಿಸುತ್ತೀರಿ ನೋಡಿ ಎಂದು ಈ ಹಿಂದೆ ಯಡಿಯೂರಪ್ಪನವರಿಗೆ ಸಲಹೆ ನೀಡಿದ್ದೆ. ನನ್ನ ಮಾತು ಕೇಳಿಸಿಕೊಂಡಿರಲಿಲ್ಲ. ಪರಿಣಾಮ ಈಗ ಅನುಭವಿಸುವಂತಾಗಿದೆ’ ಎಂದು ಹೇಳಿದರು.

‘ಮಂತ್ರಿ ಮಾಡಿಲ್ಲವೆಂದು ಯಡಿಯೂರಪ್ಪ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನಾಡಬಾರದು. ನಾನೂ ಕೇಂದ್ರದ ಮಂತ್ರಿಯಾಗಿದ್ದೆ. ಆ ಬಳಿಕ ವರಿಷ್ಟರ ತೀರ್ಮಾನಕ್ಕೆ ತಲೆ ಬಾಗಿ ಸಂಸದನಾಗಿ ಮಾತ್ರ ಉಳಿದಿದ್ದೇನೆ. ಹಾಗಂತ ನಾನೇನು ನಾಯಿಯಂತೆ ಬೊಗಳಿಕೊಂಡು ತಿರುಗಾಡಿದೆನಾ?’ ಎಂದರು.

‘ಯಡಿಯೂರಪ್ಪ ಹಿರಿಯ ರಾಜಕಾರಣಿ. ಸಾಕಷ್ಟು ಅನುಭವ ಇದೆ. ನಾವೆಲ್ಲ ಅವರಿಗೆ ಸಾಕಷ್ಟು ಗೌರವ ಕೊಡುತ್ತೇವೆ. ಅಂಥ ಮನುಷ್ಯನ ಬಗ್ಗೆ ಮಾತಾಡೋದು ಸರಿಯಲ್ಲ’ ಎಂದು ಬುದ್ದಿಮಾತು ಹೇಳಿದರು.

‘ಶಾಸಕ ಯತ್ನಾಳ ಒಬ್ಬರೇ ಅಂತಲ್ಲ, ಯಾರೆಲ್ಲ ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೋ ಅವರೆಲ್ಲರನ್ನೂ ಸೇರಿಸಿ ಒಟ್ಟಾರೆಯಾಗಿ ಹೇಳುತ್ತಿದ್ದೇನೆ’ ಎಂದರು.

ದಲಿತ ಸಿಎಂ ಖಚಿತ:
‘ರಾಜ್ಯದಲ್ಲಿ ದಲಿತ ಸಿಎಂ ಕಟ್ಟಿಟ್ಟ ಬುತ್ತಿ. ಎಲ್ಲ ಸಮುದಾಯದವರೂ ಸಿಎಂ ಆಗಿದ್ದಾರೆ. ಕಡಿಮೆ ಜನಸಂಖ್ಯೆಯುಳ್ಳ ದಲಿತರೂ ಸಿಎಂ ಆಗುತ್ತಾರೆ. ಅದರಲ್ಲಿ ಎರಡು ಮಾತಿಲ್ಲ. ಯಾವಾಗ ಆಗಲಿದ್ದಾರೆಂದು ನಾನು ಹೇಳಲಾರೆ. ಒಟ್ಟಿನಲ್ಲಿ ಸಿಎಂ ಆಗೋದಂತೂ ಖಚಿತ. ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT