ಶುಕ್ರವಾರ, ಮೇ 14, 2021
32 °C
ಜಿಲ್ಲೆಯ ಸರ್ಕಾರಿ, ಖಾಸಗಿ ವೈದ್ಯರಿಗೆ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌ ಸೂಚನೆ

ಕೋವಿಡ್ ಪೀಡಿತರ ಸಾವಿನ ಪ್ರಮಾಣ ತಗ್ಗಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಾವಿನ ಪ್ರಮಾಣ ತಗ್ಗಿಸುವ ದಿಸೆಯಲ್ಲಿ ಸಂಬಂಧಪಟ್ಟ ಆಸ್ಪತ್ರೆಗಳ ವೈದ್ಯರು ವಿಶೇಷ ಗಮನ ನೀಡುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕೋವಿಡ್ -19 ನಿಯಂತ್ರಣ ಕುರಿತು ವಿಡಿಯೊ ಸಂವಾದದ ಮೂಲಕ ನಡೆದ ಜಿಲ್ಲಾ ಜಾಗೃತಾ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಪರಿಣಾಮಕಾರಿ ಚಿಕಿತ್ಸೆ ಒದಗಿಸಬೇಕು. ಯಾವುದೇ ಪರಿಸ್ಥಿತಿಯಲ್ಲಿ ಹೆಚ್ಚಿನ ಸಾವು ಆಗದಂತೆ ನೋಡಿಕೊಳ್ಳಲು ವಿಶೇಷ ಗಮನ ನೀಡುವಂತೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲಾ ಕೇಂದ್ರದಲ್ಲಿರುವ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಹಾಗೂ ರೆಮಿಡಿಸಿವಿರ್ ಲಸಿಕೆಯ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಇದರ ಸಮರ್ಪಕ ನಿರ್ವಹಣೆಗಾಗಿ ಔಷಧ ನಿಯಂತ್ರಕ ಡಾ.ಔದ್ರಾಮ್ ಮತ್ತು ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಅಡತಡೆಗಳನ್ನು ನಿವಾರಿಸಬೇಕು ಎಂದರು.

ಪ್ರಸ್ತುತ ಜಿಲ್ಲೆಯಲ್ಲಿರುವ ಪರಿಸ್ಥಿತಿಯನ್ನು ಅರಿತು ವಾಸ್ತವಾಂಶ ಆಧಾರದ ಮೇಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ವೆಂಟಿಲೇಟರ್‌ಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಕೊಳ್ಳಬೇಕು. ಐಸಿಯು ನಿರ್ವಹಣಾ ತಂತ್ರಜ್ಞರನ್ನು ಜಿಲ್ಲಾ ಆಸ್ಪತ್ರೆಗೆ ಪಡೆದುಕೊಳ್ಳಬೇಕು. ಅವಶ್ಯಕ ಸಂದರ್ಭಗಳಲ್ಲಿ ಖಾಸಗಿ ಆಸ್ಪತ್ರೆಗಳ ಸಹಕಾರದ ಜೊತೆಗೆ ಸಮರ್ಪಕ ಸಿಬ್ಬಂದಿ ಇರುವಂತೆ ನೋಡಿಕೊಂಡು ಐಸಿಯು ಘಟಕ ನಿರ್ವಹಿಸಲು ಅವರು ಸೂಚನೆ ನೀಡಿದರು.

ರಾಜ್ಯ ಸರ್ಕಾರದ ನಿರ್ದೇಶನದಂತೆ ಗುತ್ತಿಗೆ ಆಧಾರದ ಮೇಲೆ ನರ್ಸ್‌, ಲ್ಯಾಬ್ ಟೆಕ್ನಿಸಿಯನ್ ಹಾಗೂ ಅವಶ್ಯಕ ಸಿಬ್ಬಂದಿಯನ್ನು ಪಾರದರ್ಶಕವಾಗಿ ನೇಮಕಾತಿ ಮಾಡಿಕೊಳ್ಳಬೇಕು. ಕೆಳಹಂತದ ಸಿಬ್ಬಂದಿಯನ್ನು ಇನ್ನಷ್ಟು ಚುರುಕಾಗಿ ಕಾರ್ಯನಿರ್ವಹಿಸಲು ಕ್ರಮಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಮ ಅರಿಸಿದ್ದಿ, ಜಿಲ್ಲಾಸ್ಪತ್ರೆ ಸರ್ಜನ್‌ ಶರಣಪ್ಪ ಕಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಕುಮಾರ ಯರಗಲ್, ಡಾ.ಲಕ್ಕಣ್ಣನವರ, ವಿವಿಧ ಖಾಸಗಿ ಆಸ್ಪತ್ರೆಗಳ ವೈದ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

****

ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಗೊಳಿಸಿ:ಸಿಇಒ

ವಿಜಯಪುರ: ರಾತ್ರಿ 9 ರಿಂದ ಬೆಳಿಗ್ಗೆ 6 ರ ವರೆಗೆ ಜಾರಿಗೊಳಿಸಲಾಗಿರುವ ಕರ್ಫ್ಯೂವನ್ನು ಎಲ್ಲ ತಹಶೀಲ್ದಾರ್‌ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಶಸ್ವಿಗೊಳಿಸುವ ಮೂಲಕ ಕೋವಿಡ್ ನಿಯಂತ್ರಣ ಮಾಡಲು ಆದ್ಯತೆ ನೀಡಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರೆಡ್ಡಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ಕೋವಿಡ್-19ರ ಕುರಿತು  ಆದೇಶದಲ್ಲಿನ ಮಾರ್ಗಸೂಚಿ ಅನುಷ್ಠಾನ ಕುರಿತು ವಿಡಿಯೊ ಸಂವಾದದಲ್ಲಿ ಅವರು ಮಾತನಾಡಿದರು.

ಬಾರ್‌ಗಳು ಇನ್ನು ಮುಂದೆ ವಾರದ ಐದು ದಿನ ಮಾತ್ರ ತೆರೆಯಲಾಗುತ್ತದೆ. ಶನಿವಾರ ಮತ್ತು ಭಾನುವಾರ ಬಂದ್ ಆಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ದೇವಾಲಯಗಳಿಗೆ ಭಕ್ತರ ಪ್ರವೇಶವಿಲ್ಲ ಎಂಬ ಸೂಚನಾಫಲಕ ಹಾಕಬೇಕು. ಕಲ್ಯಾಣ ಮಂಟಪದಲ್ಲಿ 50 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಎಂದು ನೋಟಿಸ್ ನೀಡಬೇಕು ಎಂದರು.

ವಾರಾಂತ್ಯದ ಕಫ್ರ‍್ಯೂ ಪ್ರತಿ ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಿಗ್ಗೆ 6ರವರೆಗೆ ಇದ್ದು ಸಾರ್ವಜನಿಕರಿಗೆ ನಿಯಮಗಳ ಬಗ್ಗೆ ತಿಳಿವಳಿಕೆ ನೀಡುವಂತೆ ಸೂಚಿಸಿದರು.

ಕೋಚಿಂಗ್ ಸೆಂಟರ್‌, ವಸತಿ ನಿಲಯ, ಶಾಲಾ-ಕಾಲೇಜುಗಳನ್ನು ಮುಚ್ಚುಲು ಕ್ರಮಕೈಗೊಳ್ಳಬೇಕು  ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ್ ಕಳಸದ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಮ್ ಅರಿಸಿದ್ದಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು