ಗುರುವಾರ , ಆಗಸ್ಟ್ 5, 2021
29 °C
ಜನಪ್ರತಿನಿಧಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

ಸಮಗ್ರ ಪರಿಹಾರ ಪ್ಯಾಕೇಜ್ ಘೋಷಣೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಸಂಕಷ್ಟಕ್ಕೊಳಗಾಗಿರುವ ದುಡಿಯುವ ವರ್ಗಕ್ಕೆ ಸಮಗ್ರ ಪರಿಹಾರ ಪ್ಯಾಕೇಜ್ ಘೋಷಣೆಗೆ ಆಗ್ರಹಿಸಿ ಶಾಸಕರು ಹಾಗೂ ಸಂಸದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಕರ್ನಾಟಕ ಜನಶಕ್ತಿ ಸಂಘಟನೆ ಕಾರ್ಯಕರ್ತರು ಖಾಲಿ ಕೈ ಚೀಲಕ್ಕೆ ಬೆಂಕಿ ಹಚ್ಚಿ ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಕೇವಲ ಕಾರ್ಮಿಕ ವರ್ಗಕ್ಕೆ ₹ 3 ಸಾವಿರ ಲಾಕ್‌ಡೌನ್ ಪ್ಯಾಕೇಜ್ ನೀಡುತ್ತಿದೆ. ಈ ಪರಿಹಾರ ಯಾವುದಕ್ಕೂ ಸಾಕಾಗುವುದಿಲ್ಲ. ಕನಿಷ್ಠ ಪಕ್ಷ ₹ 10 ಸಾವಿರ ಪರಿಹಾರ ನೀಡಬೇಕು ಮತ್ತು ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ ₹ 10 ಲಕ್ಷ ಪರಿಹಾರ ಘೋಷಣೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ವಕೀಲ ಶ್ರೀನಾಥ್ ಪೂಜಾರಿ ಮಾತನಾಡಿ, ದುಡಿಯುವ ವರ್ಗ ಕೋವಿಡ್ ಸಂಕಷ್ಟ ಕಾಲದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸರ್ಕಾರ ಘೋಷಿಸಿರುವ ಅರೆಬರೆ ಪರಿಹಾರ ಮತ್ತು ಆಶ್ವಾಶನೆಗಳು ನಾಡಿನ ಜನರನ್ನು ಇನ್ನಷ್ಟು ಕಂಗಾಲಾಗಿಸಿವೆ. ದುಡಿಯುವ ವರ್ಗ ಕೈಯಲ್ಲಿ ಕೆಲಸ, ಹಣ ಇಲ್ಲದೆ ದಿಕ್ಕು ತೊಚದಂತಾಗಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರ ಕೂಡಲೇ ಜನರ ಸಮಸ್ಯೆಗೆ ಸ್ಪಂದಿಸಿ ಸಮಗ್ರ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಜನರು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು ಕುರ್ಚಿಗಾಗಿ ಕಿತ್ತಾಡುತ್ತಾ ಜನರ ಜೀವನದೊಂದಿಗೆ ಆಟವಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೋಮು ಸೌಹಾರ್ದ ವೇದಿಕೆ ಕಾರ್ಯಕರ್ತರಾದ ಸದಾನಂದ ಮೊದಿ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮಹಾಂತೇಶ ಕಟ್ಟಿಮನಿ, ಕಾನೂನು ಪದವಿಧರರ ವೇದಿಕೆಯ ಹಸನ್ ಪಟೇಲ್, ದಲಿತ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಅಕ್ಷಯ್ ಕುಮಾರ್, ಭೀಮ್ ಆರ್ಮಿ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲು ಜಾಲಗೇರಿ, ರೈತ ಮುಖಂಡ ಶರಣು ಅರಳಗೂಂಡಗಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು