ಗುರುವಾರ , ಜನವರಿ 21, 2021
16 °C

ವಿಜಯಪುರ| ಸತ್ತ ಕುರಿಗಳಿಗೆ ಪರಿಹಾರ ನೀಡಲು ಆಗ್ರಹ: ಕುರಿಗಾರರ ಸಂಘದಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಪ್ರವಾಹ, ಮಳೆ ಹಾಗೂ ವಾಹನ ಡಿಕ್ಕಿ ಹೊಡೆದು ಸಾವಿಗೀಡಾಗಿರುವ ಆಡು, ಕುರಿಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಕುರಿಗಾರರ ಸಂಘ ಹಾಗೂ ಕರ್ನಾಟಕ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಳದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಕನಕದಾಸ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಮಹಾ ಮಂಡಳದ ಅಧ್ಯಕ್ಷ ಪಂಡಿತ್‌ ರಾವ್‌ ಚಿದ್ರಿ ಮಾತನಾಡಿ, ಹಿಂದಿನ ಸರ್ಕಾರ ಸತ್ತ ಕುರಿಗಳಿಗೆ ₹ 5 ಸಾವಿರ ಪರಿಹಾರ ನೀಡುತ್ತಿದ್ದ ‘ಅನುಗ್ರಹ’ ಯೋಜನೆಯನ್ನು ಈಗಿನ ಸರ್ಕಾರ ನಿಲ್ಲಿಸಿದ್ದು, ಇದರಿಂದ ಕುರಿಗಾರರಿಗೆ ಆರ್ಥಿಕ ತೊಂದರೆ ಉಂಟಾಗಿದೆ. ಈ ಯೋಜನೆಯನ್ನು ಮತ್ತೆ ಮುಂದುವರೆಸಿ ಸತ್ತ ಕುರಿಗಳಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಕುರಿಗಾರರ ಸಂಘದ ಅದ್ಯಕ್ಷರಾದ ಭೀರಪ್ಪ ಜುಮನಾಳ, ಜಿಲ್ಲೆಯಲ್ಲಿ ಮಳೆ, ಪ್ರವಾಹದಿಂದ ಹಾಗೂ ಅಪಘಾತದಿಂದ ಸುಮಾರು 500ಕ್ಕೂ ಹೆಚ್ಚು ಕುರಿ ಮತ್ತು ಆಡುಗಳು ಸಾವಿಗೀಡಾಗಿವೆ. ಇದಕ್ಕೆ ಸಂಬಂಧಿಸಿದಂತೆ ₹ 29 ಲಕ್ಷ ಪರಿಹಾರ ಬರುವುದು ಬಾಕಿ ಇದ್ದು, ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಕುರಿಗಳನ್ನು ಅರಣ್ಯದಲ್ಲಿ ಮೇಯಿಸಲು ಅನುಕೂಲ ಮಾಡಿಕೊಡಬೇಕು. ಕುರಿಗಾರರ ಪತ್ತಿನ ಸಹಕಾರ ಸಂಸ್ಥೆಗಳಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಬೇಕು. ಜಿಲ್ಲೆಯಲ್ಲಿ ಗೋಮಾಳ ಜಮೀನು ಒತ್ತುವರಿಯಾಗುತ್ತಿದ್ದು, ಇದನ್ನು ತಡೆಯಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ ಮಾತನಾಡಿ, ಕುರಿಗಾರರಿಗೆ ಸಂಪೂರ್ಣವಾಗ ಉಚಿತವಾಗಿ ಟೆಂಟ್ ಹಾಗೂ ಕುರಿಗಾರರ ಮಕ್ಕಳಿಗೆ ಶಿಕ್ಷಣ ನೀಡಬೇಕು ಆಗ್ರಹಿಸಿದರು.

ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ಜಿಲ್ಲೆಯಲ್ಲಿರುವ ಗೋಮಾಳ ಮತ್ತು ಹುಲ್ಲುಗಾವಲು ಪ್ರದೇಶಗಳನ್ನು ಸಂರಕ್ಷಣೆ ಮಾಡಿ ಕುರಿಗಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದರು.

ತಿಕೋಟಾ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರಭಾವತಿ ನಾಟೀಕಾರ ಮಾತನಾಡಿ, ಕುರಿಗಾರರ ಹೆಣ್ಣು ಮಕ್ಕಳಿಗೆ ಶಿಕ್ಷಣ ಮತ್ತು ರಕ್ಷಣೆ ಮತ್ತು ಅರಣ್ಯ ಪ್ರದೇಶದಲ್ಲಿ ಕುರಿಗಳಿಗೆ ಮೇಯಿಸಲಿಕ್ಕೆ ಅನುಮತಿ ನೀಡಬೇಕೆಂದು ಆಗ್ರಹಿಸಿದರು.

ಮುಖಂಡರಾದ ಶೇಷರಾವ್‌ ಮಾನೆ, ದೇವಕಾಂತ ಬಿಜ್ಜರಗಿ, ಸತೀಶ ಅಡವಿ, ಮಲ್ಲು ಬಿದರಿ, ರಾಜು ಕಗ್ಗೋಡ, ಶೇಖರ ತೋಳಮಟ್ಟಿ, ಭಿಮಾಂಕರ ಸಾಹುಕಾರ, ರವಿ ಕಿತ್ತೂರ, ಶ್ರೀಕಾಂತ ಸಂಗೋಗಿ, ಸುರೇಶ ಡೊಂಬಳೆ, ಅಮೋಘಸಿದ್ದ ಸಗಾಯಿ, ಮಹಾಮಂಡಳದ ನಿರ್ದೇಶಕರಾದ ಸಂಗು ವಾಲಿಕಾರ, ಸುರೇಖಾ ರಜಪೂತ, ಲಕ್ಷ್ಮಣ ಹಂದ್ರಾಳ, ಯಶವಂತ ಕೋಳೂರ, ಸಂಜು ಪಾಂಡ್ರೆ, ಪರಮಾನಂದ ಶ್ರೀ, ನಗರ ಕುರುಬರ ಸಂಘದ ಅಧ್ಯಕ್ಷ ರಾಜು ಕಗ್ಗೋಡ, ಲಕ್ಷ್ಮಣ ಪೂಜಾರಿ, ಅಟಲ್ ಕಳ್ಳಿಮನಿ, ಧರ್ಮಣ್ಣ ತೊಂಡಾಪೂರ, ಯಲ್ಲಪ್ಪ ಯಂಭತ್ನಾಳ, ಲಕ್ಷ್ಮಣ ಕರಾತ, ಪಾಂಡು ಕರಾತ, ಸಿದ್ದು ಹುಡೇದ, ರಾಜು ಯಂಟಮಾನ, ಇಟ್ಟಂಗಿಹಾಳ ದೊಡ್ಡಿ, ಹಡಗಲಿ ದೊಡ್ಡಿ, ಖರಾಡ ದೊಡ್ಡಿ, ಪಾಂಡ್ರೇನ ದೊಡ್ಡನ, ಕರಿಬೀರಪ್ಪನ ದೊಡ್ಡಿ, ತೊರವಿ, ದರ್ಗಾ ಭಾಗವಹಿಸಿದ್ದರು.

****

ಕರ್ನಾಟಕ ಸಹಕಾರಿ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಳಕ್ಕೆ ಎರಡು ವರ್ಷಗಳಿಂದ ಸೂಕ್ತ ಅನುದಾನ ನೀಡಿಲ್ಲ. ತಕ್ಷಣ ಮಹಾಮಂಡಳಕ್ಕೆ ಅನುದಾನ ನೀಡಬೇಕು 
ಪಂಡಿತ್‌ ರಾವ್‌ ಚಿದ್ರಿ, ಅಧ್ಯಕ್ಷ, 
ಕರ್ನಾಟಕ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ  ಮಹಾಮಂಡಳ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.