ಮಂಗಳವಾರ, ಆಗಸ್ಟ್ 16, 2022
29 °C
ಹಳ್ಳಿಗಳಲ್ಲಿ ರೈತ-ಕೃಷಿ ಕಾರ್ಮಿಕರ ಸಂಘಟನೆಯಿಂದ ಪ್ರತಿಭಟನೆ 

ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರದ್ದಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ರೈತ ವಿರೋಧಿ, ಕಾರ್ಪೊರೇಟ್ ಕಂಪನಿಗಳ ಪರವಾಗಿ ಜಾರಿಯಾದ ನೂತನ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ರೈತ ಕೃಷಿ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಹಳ್ಳಿಗಳಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಸರ್ಕಾರ ಭೂಸುಧಾರಣೆ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ರೈತರ ಬೆನ್ನಿಗೆ ಚೂರಿ ಹಾಕಿದೆ. ರೈತರ ಮೇಲೆ ಆಣೆ, ಪ್ರಮಾಣ ಮಾಡುವ ಮೂಲಕ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತ ಬಂದಿವೆ ಎಂದು ಆರೋಪಿಸಿದರು.

ನೂತನ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯಿಂದ ಇದ್ದ ಭೂಮಿಯನ್ನು ರೈತರ ಕೈಯಿಂದ ಕಸಿದುಕೊಂಡು ಈ ದೇಶದ ಕಾರ್ಪೊರೇಟ್ ಕಂಪನಿಗಳಿಗೆ ಧಾರೆಯೆರೆಯುವ ಕಾನೂನಾಗಿದೆ ಎಂದು ದೂರಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ಈ ಕಾಯ್ದೆಗಳ ತಿದ್ದುಪಡಿ ಮಾಡುವ ಮೂಲಕ ರೈತರ ಮರಣಶಾಸನವನ್ನು ಬರೆದಿವೆ. ಬಿಜೆಪಿ ಮತ್ತು ಜೆಡಿಎಸ್ ತಮ್ಮ ರಾಜಕೀಯ ಹಿತಾಸಕ್ತಿಗಾಗಿ ರೈತರನ್ನು ಬಲಿಕೊಟ್ಟು ವಿಧಾನಸಭೆಯಲ್ಲಿ ಕಾಯ್ದೆ ಪರವಾಗಿ ಮತ ಹಾಕುವ ಮೂಲಕ ಆ ಪಕ್ಷಗಳು ಜನತೆಯ ಮುಂದೆ ಬೆತ್ತಲೆಯಾಗಿವೆ ಎಂದರು.

ಮಣ್ಣಿನ ಮಕ್ಕಳ ಪಕ್ಷ ಎಂದು ಹೇಳಿಕೊಳ್ಳುವ ಜೆಡಿಎಸ್ ಡೋಂಗಿತನವನ್ನು ಪ್ರದರ್ಶನ ಮಾಡಿದೆ. ಸದನದಲ್ಲಿ ಮತ ಚಲಾಯಿಸಿ ಹೊರಗಡೆ ರೈತರ ಕಣ್ಣೀರು ಒರೆಸುವ ನಾಟಕವಾಡುತ್ತಿದೆ. ಕಾಂಗ್ರೆಸ್ ಮುಖಂಡರು ಸದನದಲ್ಲಿ ತಮ್ಮ ಸಂಪೂರ್ಣ ಬೆಂಬಲದೊಂದಿಗೆ ಈ ಕಾನೂನು ವಿರೋಧಿಸುವಲ್ಲಿ ವಿಫಲವಾಗಿದ್ದಾರೆ ಎಂದು ಆರೋಪಿಸಿದರು.

ಈ ಕಾಯ್ದೆ ಜಾರಿಯಿಂದ ಇನ್ನು ಮುಂದೆ ಯಾವುದೇ ನಿಯಂತ್ರಣವಿಲ್ಲದೆ ಕಾರ್ಪೊರೇಟ್ ಕಂಪನಿಗಳು ಎಲ್ಲಿ ಬೇಕಾದರೂ, ಎಷ್ಟು ಬೇಕಾದರೂ, ಯಾವುದಕ್ಕೆ ಬೇಕಾದರೂ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಲು ಅವಕಾಶ ಮಾಡಿಕೊಡಲು ಸಜ್ಜಾಗಿವೆ ಎಂದು ದೂರಿದರು.

ಜಿಲ್ಲೆಯ ತಾಜಪೂರ, ಸೋಮದೇವರ ಹಟ್ಟಿ, ಕವಲಗಿ, ಹೊನ್ನುಟಗಿ, ಕುಮಟಗಿ, ಕಗ್ಗೊಡ, ಹಡಲಗಿ ಗ್ರಾಮಗಳಲ್ಲಿ ರೈತರು ಸಭೆ ನಡೆಸಿ, ಈ ಕಾಯ್ದೆ ಪ್ರತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ಭರತಕುಮಾರ ಎಚ್ ಟಿ, ಸಿದ್ದಲಿಂಗ ಬಾಗೇವಾಡಿ, ಮಲ್ಲಿಕಾರ್ಜುನ ಎಚ್ ಟಿ, ಬಾಳೂ ಜೇವೂರ, ಸುನಿಲ ಸಿದ್ರಾಮಶೆಟ್ಟಿ, ಆಕಾಶ ರಾಮತೀರ್ಥ, ಶೋಭಾ ಯರಗುದ್ರಿ, ಕಾವೇರಿ ರಜಪೂತ, ದುಂಡೇಶ ಬಿರಾದಾರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.