ಗುರುವಾರ , ಮಾರ್ಚ್ 30, 2023
24 °C

ಪಿಂಚಣಿ ಕೊಡದಿದ್ದರೆ ದಯಾಮರಣ ಅನುಮತಿಗೆ ನಿವೃತ್ತ ಶಿಕ್ಷಕನಿಂದ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಉಪಜೀವನ ನಡೆಸುವುದಕ್ಕೆ ಸಂಕಷ್ಟ ಅನುಭವಿಸುತ್ತಿದ್ದು, ಪಿಂಚಣಿ ವ್ಯವಸ್ಥೆ ಕಲ್ಪಿಸಬೇಕು ಇಲ್ಲದಿದ್ದರೆ ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ಕೋರಿ ಅನುದಾನಿತ ನಗರದ ಎನ್‍ಜಿಒ ಶಾಲೆಯ ನಿವೃತ್ತ ಶಿಕ್ಷಕ ಸಂಗಯ್ಯ ಸೊಪ್ಪಿಮಠ ಅವರು ರಾಷ್ಟ್ರಪತಿಗೆ ಪತ್ರ ಬರೆದು ಅಂಚೆ ಮೂಲಕ ಕಳುಹಿಸಿದ್ದಾರೆ.

1988ರ ಜೂನ್‌ 1 ರಂದು ಪ್ರಾಥಮಿಕ ಶಾಲಾ ಶಿಕ್ಷಕನಾಗಿ ನೇಮಕನಾಗಿದ್ದೇನೆ. ಶಾಲೆ ಆರಂಭವಾದ 7ವರ್ಷಗಳವರೆಗೆ ಅನುದಾನ ಪಡೆಯುತ್ತಿಲ್ಲ ಎಂದು ಉಲ್ಲೇಖವಿದೆ. ಆದೇಶ ಮತ್ತು ಷರತ್ತಿನ ಅನುಸಾರವೇ ನೇಮಕ ಮಾಡಲಾಗಿದೆ. ನಿಯಮಾವಳಿ ಪ್ರಕಾರ 1992ರ ಜ.31ರಂದು ಶಿಕ್ಷಣ ಇಲಾಖೆ ಸಹಾಯಕ ಶಿಕ್ಷಣಾಕಾರಿಗಳು ನೇಮಕಾತಿಗೆ ಅನುಮೋದನೆ ಆದೇಶ ನೀಡಿದ್ದಾರೆ. ಆದರೆ ಸರ್ಕಾರ ಕೇವಲ ಪರಿಶಿಷ್ಟ ಜಾತಿ, ವರ್ಗದ ಆಡಳಿತ ಮಂಡಳಿ ಶಾಲೆಗಳಿಗೆ 1994ರ ಜನವರಿ 30ರಂದು ವೇತನಾನುದಾನಕ್ಕೆ ಒಳಪಡಿಸಿರುತ್ತದೆ. ಆದರೆ, ಇತರೆ ಹಿಂದುಳಿದ ವರ್ಗದ ಶಾಲೆಗಳಿಗೆ 2008ರಿಂದ ಅನುದಾನ ನೀಡಲು ಪ್ರಾರಂಭಿಸಿತು. ಇದರ ಪ್ರಕಾರ ನನ್ನ ಹುದ್ದೆಗೆ ಸರ್ಕಾರದಿಂದ 2011ರ ಡಿಸೆಂಬರ್‌ 30ಕ್ಕೆ ಅನುದಾನ ಲಭಿಸಿದೆ. ಯಾವುದೇ ವರ್ಗದ ಶಾಲೆಗಳಲ್ಲಿ ಮೀಸಲಾತಿ ಪ್ರಕಾರ ನೇಮಕಾತಿಗಳು ನಡೆದಿರುತ್ತವೆ.

ಕೇವಲ ಪರಿಶಿಷ್ಟ ಜಾತಿ, ವರ್ಗದ ಆಡಳಿತ ಮಂಡಳಿ ಶಾಲೆಗಳಿಗೆ ಅನುದಾನ ನೀಡಿದ 13 ವರ್ಷಗಳ ನಂತರ ಇತರೆ ಹಿಂದುಳಿದ ವರ್ಗದ ಶಾಲೆಗಳಿಗೆ ಅನುದಾನ ನೀಡಿದ್ದಾರೆ. ನಾನು ಇದ್ದ ಶಾಲೆಯ ಪರಿಶಿಷ್ಟ ಜಾತಿ ಮತ್ತು ವರ್ಗದ ಹಿಂದುಳಿದ ವರ್ಗಗಳ ಮೀಸಲಾತಿಗೆ ಸಂವಿಧಾನದಲ್ಲಿ ಬೆಲೆಯಿಲ್ಲವೆ ಎಂದು ಪ್ರಶ್ನಿಸಿದ್ದಾರೆ.

ಪ್ರಸಕ್ತ ವರ್ಷ ಮೇ 31ರಂದು ನಿವೃತ್ತಿಯಾಗಿದ್ದು, ಸಾಮಾಜಿಕ ನ್ಯಾಯದಿಂದ ಪಿಂಚಣಿ ಸಿಗದೆ ವಂಚಿತನಾಗಿದ್ದೇನೆ. ಪಿಂಚಣಿ ಇಲ್ಲದೆ ಕುಟುಂಬ ನಡೆಸುವುದು ದುಸ್ತರವಾಗಿದೆ. ಪಿಂಚಣಿ ಕೊಡಿಸಿ ಇಲ್ಲವೇ ದಯಾಮರಣಕ್ಕೆ ಅನುಮತಿ ನೀಡಿ ಎಂದು ಪತ್ರದಲ್ಲಿ ರಾಷ್ಟ್ರಪತಿಯನ್ನು ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.