ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿಗೆ ₹3 ಲಕ್ಷ ಕೋಟಿ ಮೀಸಲು: ಎಚ್‌ಡಿಕೆ ಭರವಸೆ

ಜನತಾ ಜಲಧಾರೆ ಸಂಕಲ್ಪ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌ಡಿಕೆ ಭರವಸೆ
Last Updated 16 ಏಪ್ರಿಲ್ 2022, 13:12 IST
ಅಕ್ಷರ ಗಾತ್ರ

ಆಲಮಟ್ಟಿ: ನಾಡಿನ ನೀರಾವರಿ ಯೋಜನೆಗಳ ಅನುಷ್ಠಾನದ ಸಂಕಲ್ಪಕ್ಕಾಗಿ ಜೆಡಿಎಸ್‌ ಜನತಾ ಜಲಧಾರೆ ಸಂಕಲ್ಪ ಸಮಾವೇಶಕ್ಕೆ ಆಲಮಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶನಿವಾರ ಚಾಲನೆ ನೀಡಿ, ಅಧಿಕಾರಕ್ಕೆ ಬಂದರೆ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಸಂಕಲ್ಪ ಮಾಡಿದರು.

ಜೆಡಿಎಸ್ ಮತ್ತೊಂದು ಪಕ್ಷದ ಹಂಗಿನಲ್ಲಿ ಅಧಿಕಾರ ನಡೆಸಿದೆ. ಒಂದು ವೇಳೆ ಜೆಡಿಎಸ್‌ಗೆ ಸಂಪೂರ್ಣ ಬಹುಮತ ನೀಡಿದರೇ ರಾಜ್ಯದ ಎಲ್ಲಾ ನದಿಗಳಿಂದಲೂ ನೀರಾವರಿ ಯೋಜನೆಗಳನ್ನು ರೂಪಿಸಿ ಐದು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು, ನೀರಾವರಿಗಾಗಿಯೇ ₹ 3 ಲಕ್ಷ ಕೋಟಿ ಮೀಸಲಿರಿಸಲಾಗುವುದು ಎಂದುಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಜಾತಿಯ ಹೆಸರಲ್ಲಿ ಮತ ನೀಡದೇ ರಾಜ್ಯಕ್ಕೆ ಜೆಡಿಎಸ್ ಪಕ್ಷದ ಕಾಣಿಕೆ ನೋಡಿ ಮತ ನೀಡಿ. ಜೆಡಿಎಸ್ ಅಭ್ಯರ್ಥಿಗೆ ನೀಡಿದ ಮತ ಕುಮಾರಸ್ವಾಮಿಗೆ ನೀಡಿದ ಮತ ಎಂದು ತಿಳಿಯಿರಿ ಎಂದರು.

ಯುಕೆಪಿಗೆ ಹೆಚ್ಚಿನ ಆದ್ಯತೆ:

ಯುಕೆಪಿಗೆ ಜೆಡಿಎಸ್ ಮೊದಲಿನಿಂದಲೂ ಹೆಚ್ಚಿನ ಆದ್ಯತೆ ನೀಡಿದೆ. ಚಿಮ್ಮಲಗಿ ಏತ ನೀರಾವರಿ ಯೋಜನೆ ಜಾರಿಗೊಳಿಸಿದ್ದು ನಮ್ಮ ಸರ್ಕಾರದ ಅವಧಿಯಲ್ಲಿ. ಕೆರೆ ತುಂಬುವ ಯೋಜನೆಯ ಮೊದಲ ಹಂತಕ್ಕೂ ನಾವೇ ಅನುಮತಿ ನೀಡಿದ್ದು ಎಂದು ಕುಮಾರಸ್ವಾಮಿ ಹೇಳಿದರು.

₹ 17,600 ಕೋಟಿ ಇದ್ದ ಯುಕೆಪಿಯ ಮೂರನೇ ಹಂತದ ವೆಚ್ಚ ಈಗ ₹ 53 ಸಾವಿರ ಕೋಟಿಗೆ ಏರಿದೆ. ಸರ್ಕಾರದ ನಿರ್ಲಕ್ಷದ ಪರಿಣಾಮ, ಅನುದಾನ ನೀಡದ ಪರಿಣಾಮ, ಬೆಲೆ ಏರಿಕೆ ಮುಂದೆ ₹1.5 ಲಕ್ಷ ಕೋಟಿರೂ ಏರಿದರೂ ಅಚ್ಚರಿಯಿಲ್ಲ ಎಂದರು.

ಭರವಸೆ:

ಮುಖ್ಯಮಂತ್ರಿಯಾಗಿದ್ದಾಗ ಘೋಷಿಸಿದ್ದ ಪ್ರತಿ ಗ್ರಾಮ ಪಂಚಾಯ್ತಿಗೊಂದು ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿ ವರೆಗೆ ಉಚಿತ, ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂಭ ಮಾಡಿ, ಅವುಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು, ಇದರಿಂದ ಗ್ರಾಮೀಣ ಬಡಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಲಾಗುವುದು ಎಂದರು.

ರಾಜ್ಯದ 6000 ಗ್ರಾಮ ಪಂಚಾಯ್ತಿಗೆ ಒಂದರಂತೆ 30 ಹಾಸಿಗೆ ಸಾಮಾರ್ಥ್ಯದ ಸುಸಜ್ಜಿತ ಆಸ್ಪತ್ರೆ ಆರಂಭಿಸಲಾಗುವುದು. ಕ್ಯಾನ್ಸರ್ ಸೇರಿ ಗಂಭೀರ ಕಾಯಿಲೆಗೆ ಉಚಿತ ಚಿಕಿತ್ಸೆ ಒದಗಿಸಲಾಗುವುದು ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ಬೆಳೆದ ಬೆಳೆಗಳನ್ನು ಗ್ರಾಮ ಪಂಚಾಯ್ತಿ ಮಟ್ಟದಲ್ಲಿಯೇ ಮಾರುಕಟ್ಟೆ ವ್ಯವಸ್ಥೆ, ಸೂಕ್ತ ಬೆಂಬಲ ಬೆಲೆ ನಿರ್ಧರಿಸಿ ಖರೀದಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ವಿಜಯಪುರ ಸೇರಿ ನಾನಾ ಕಡೆಯಿಂದ ಉದ್ಯೋಗ ಆರಿಸಿ ಗುಳೆ ಹೋಗುವುದನ್ನು ತಪ್ಪಿಸಲಾಗುವುದು ಎಂದರು.

ಒಂದು ವೇಳೆ ಇವೆಲ್ಲ ಭರವಸೆ ಈಡೇರದಿದ್ದರೇ ಇಡೀ ಜೆಡಿಎಸ್ ಪಕ್ಷವನ್ನೇ ವಿಸರ್ಜಿಸುತ್ತೇನೆ ಎಂದು ಸವಾಲು ಹಾಕಿದರು.

ಭಾಷಣದಲ್ಲಿಯೇ ಮತದಾರರನ್ನು ಮರಳು ಮಾಡುವ ಪ್ರಧಾನಿ ಮೋದಿ ರಾಜ್ಯದ ಜನತೆಗೆ ನೀಡಿದ ಕೊಡುಗೆಯಾದರೂ ಏನು? ಎಲ್‌ಪಿಜಿ ಗ್ಯಾಸ್‌, ಪೆಟ್ರೋಲ್, ಡೀಸೆಲ್‌, ಅಡುಗೆ ಎಣ್ಣೆ, ರಸಗೊಬ್ಬರ ಸೇರಿ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದು ಬಡವ, ಮಧ್ಯಮ ವರ್ಗದ ಜನತೆ ಹಾಗೂ ರೈತರು ಬದುಕು ಸಾಗಿಸಲು ಪರದಾಡುತ್ತಿದ್ದಾರೆ ಎಂದು ಆರೋಪಿಸಿದರು.

ಶಾಸಕ ದೇವಾನಂದ ಚವ್ಹಾಣ, ಸುನಿತಾ ಚವ್ಹಾಣ, ಜೆಡಿಎಸ್ ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತ ಮಾವಿನಮರದ, ಬಿ.ಜಿ. ಪಾಟೀಲ (ಹಲಸಂಗಿ), ಬಿ.ಡಿ. ಪಾಟೀಲ, ಮಲ್ಲಿಕಾರ್ಜುನ ಯಂಡಿಗೇರಿ, ಸ್ನೇಹಲತಾ ಶೆಟ್ಟಿ, ರಾಜುಗೌಡ ಪಾಟೀಲ, ಮಂಗಳಾದೇವಿ ಬಿರಾದಾರ, ಬಸನಗೌಡ ಮಾಡಗಿ, ಸಿದ್ದು ಬಂಡಿ, ಸಲೀಂ ಮೋಮಿನ್ ಇದ್ದರು.

***

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕೋಮು ಘರ್ಷಣೆಗೆ ಅವಕಾಶ ನೀಡದೇ ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು

ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT