ಬುಧವಾರ, ಆಗಸ್ಟ್ 10, 2022
20 °C
ಪರಿಶಿಷ್ಟ ಸಮುದಾಯದ ಕುಂದು ಕೊರತೆ ಆಲಿಸಿದ ಕೆಪಿಸಿಸಿ ಅಧ್ಯಕ್ಷ

ಸದಾಶಿವ ವರದಿ; ಭಾವನಾತ್ಮಕ ತೀರ್ಮಾನ ಬೇಡ- ಡಿ.ಕೆ.ಶಿವಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂದಗಿ(ವಿಜಯಪುರ): ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗವನ್ನು ಈ ಹಿಂದೆ ನಾನೇ ಸಚಿವನಾಗಿದ್ದಾಗ ನೇಮಕ ಮಾಡಲಾಗಿದ್ದು, ಈ ಬಗ್ಗೆ ಭಾವನಾತ್ಮಕ ತೀರ್ಮಾನ ಆಗಬಾರದು. ತರಾತುರಿಯಲ್ಲಿ ನ್ಯಾಯ ಒದಗಿಸುವ ಕಾರ್ಯ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಇಲ್ಲಿಯ ಮಾಂಗಲ್ಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪರಿಶಿಷ್ಟ ಸಮುದಾಯದ ಕುಂದು ಕೊರತೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಸ್.ಸಿ, ಎಸ್.ಟಿ ಜಾತಿ ಗಣತಿಗಾಗಿ ₹ 27 ಸಾವಿರ ಕೋಟಿ  ಅನುದಾನ ಕಾಯ್ದಿರಿಸಿತ್ತು ಎಂದು ಹೇಳಿದರು.

ಕೊರೊನಾದಿಂದ ಮೃತರಾದ ದೀನದಲಿತರು, ಅಲ್ಪಸಂಖ್ಯಾತರು, ಅಸಂಘಟಿತ ಕಾರ್ಮಿಕರಿಗೆ ಕೋವಿಡ್ ಪರಿಹಾರ ದೊರಕಿಲ್ಲ. ಪರಿಹಾರ ಹಣ, ಚಿಕಿತ್ಸೆಯ ಬಿಲ್ ಇಲ್ಲ. ಉದ್ಯೋಗ ಕಳೆದುಕೊಂಡವರಿಗೆ ಉದ್ಯೋಗ ಇಲ್ಲ. ಇವೆಲ್ಲ ದೊರಕಿಸಿ ಕೊಡುವ ದಿಸೆಯಲ್ಲಿ ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲಾಗುತ್ತಿದೆ ಎಂದರು.

ಪರಿಶಿಷ್ಟ ಜಾತಿ ಪ್ರಮುಖರು ತಮ್ಮ ಅನಿಸಿಕೆಯಲ್ಲಿ ಯಾವ ಸಮುದಾಯಕ್ಕೂ ನೋವಾಗದಂತೆ, ಯಾವುದೇ ರಾಜಕೀಯ ಪಕ್ಷವನ್ನು ಪ್ರಸ್ತಾಪಿಸದೇ, ಟೀಕೆ ಮಾಡದೇ ಮುಂದೆ ಏನಾಗಬೇಕು ಎಂಬುದರ ಬಗ್ಗೆ ಚಿಂತನೆ ಮಾಡಬೇಕಿದೆ ನಿಮ್ಮ ಧ್ವನಿ ಜನರ ಧ್ವನಿಯಾಗಬೇಕು ಎಂದು ಪರಿಶಿಷ್ಟ ಸಮುದಾಯದ ಮುಖಂಡರಿಗೆ ಸಲಹೆ ನೀಡಿದರು.

ಸಂವಾದ ಕಾರ್ಯಕ್ರಮ:

ಪರಿಶಿಷ್ಟ ಸಮುದಾಯದ ಮುಖಂಡರಾದ ವೈ.ಸಿ.ಮಯೂರ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲಿಯೂ ಖಾಸಗೀಕರಣಗೊಳಿಸಿ ನಮಗಿರುವ ಮೀಸಲಾತಿ ಕಿತ್ತುಕೊಳ್ಳುವ ಹುನ್ನಾರ ನಡೆದಿದೆ. ಹಳ್ಳಿಗಳಲ್ಲಿ ಇನ್ನೂ ಅಸ್ಪೃಶ್ಯತೆ ಆಚರಣೆ ಜೀವಂತವಾಗಿದೆ. ದೇವಾಲಯಗಳಲ್ಲಿ ಪ್ರವೇಶವಿಲ್ಲ. ಕೋಮುವಾದ, ಜಾತಿವಾದಕ್ಕೆ ನಾವು ತತ್ತರಿಸಿ ಹೋಗಿದ್ದೇವೆ ಎಂದರು.

ಪರಿಶಿಷ್ಟ ಸಮುದಾಯದ ಬಗ್ಗೆ ಕಾಂಗ್ರೆಸ್‌ಗೆ ನಿಜವಾದ ಕಳಕಳಿ ಇದ್ದರೆ ನಮ್ಮ ಸಮಸ್ಯೆಗಳನ್ನು ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಬೇಕು. ಸಂವಿಧಾನಬದ್ಧ ಹಕ್ಕು ನಮಗೆ ಬೇಕು ಎಂದು ರಾವುತ ತಳಕೇರಿ ಒತ್ತಾಯಿಸಿದರು.

ಸಿಂದಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಫೌಂಡೇಷನ್‌ನಿಂದ ವೃದ್ಧಾಶ್ರಮ ನಡೆಸುತ್ತಿದ್ದರೂ ಸರ್ಕಾರ ಪರಿಶಿಷ್ಟ ಸಮುದಾಯದ ವ್ಯಕ್ತಿಯ ಹೆಸರಿದೆ ಎಂಬ ಕಾರಣಕ್ಕಾಗಿ ಅನುದಾನ ನೀಡುತ್ತಿಲ್ಲ ಎಂದು ಶಿವು ಕಾಲೇಬಾಗ ಆರೋಪಿಸಿದರು.

‘ದಲಿತ’ ಪದ ಬಳಕೆ ಕೈಬಿಡಿ ಪರಿಶಿಷ್ಟ ಜಾತಿ ಪದ ಬಳಸಿ. ಅತ್ಯಧಿಕ ಸಂಖ್ಯೆಯಲ್ಲಿರುವ ಮೂಲ ಪರಿಶಿಷ್ಟ ಜಾತಿಯವರಿಗೆ ರಾಜಕೀಯ ಪ್ರಾತಿನಿಧ್ಯ ನೀಡಿ ಎಂದು ರಾಜಶೇಖರ ಕೂಚಬಾಳ ಒತ್ತಾಯಿಸಿದರು.

ಸಾಯಬಣ್ಣ ಪುರದಾಳ ಮಾತನಾಡಿ, ಪರಿಶಿಷ್ಟ ಎಡಗೈ ಸಮುದಾಯ ಒಳಮೀಸಲಾತಿಗಾಗಿ ನೇಮಕ ಮಾಡಿರುವ ಸದಾಶಿವ ಆಯೋಗಕ್ಕೆ ತಾವೇ ವಿರೋಧ ಮಾಡಿದ್ದೇಕೆ ಎಂದು ಡಿಕೆಶಿ ಅವರಿಗೆ ಪ್ರಶ್ನಿಸಿದರು.

70 ವರ್ಷಗಳ ಕಾಲ ಆಳಿದ ಕಾಂಗ್ರೆಸ್‌ನಿಂದಲೂ ಪರಿಶಿಷ್ಟರ ಉದ್ಧಾರವಾಗಿಲ್ಲ ಎಂದು ಪರುಶರಾಮ ಕಾಂಬಳೆ ಆರೋಪಿಸಿದರು. 

ಹಳ್ಳಿಗಳಲ್ಲಿ ಪರಿಶಿಷ್ಟ ಸಮುದಾಯದವರು ಸತ್ತರೆ ಅವರಿಗೆ ಸ್ಮಶಾನವಿಲ್ಲ. ನಮಗೆ ಸಂಬಂಧಿಸಿದ ಸರ್ಕಾರದ ಅನುದಾನ ಬೇರೆ ಯೋಜನೆಗೆ ದುರ್ಬಳಕೆ ಆಗುತ್ತಿರುವುದು ನಿಲ್ಲಬೇಕು ಎಂದು ಚಂದ್ರಕಾಂತ ಸಿಂಗೆ ಕೇಳಿಕೊಂಡರು.

ಶಿವಾನಂದ ಜಗತಿ, ರಮೇಶ ಗುಬ್ಬೇವಾಡ, ಮಲ್ಲೇಶಿ ಕೆರೂರ, ವಿಜಯಕುಮಾರ, ರಾಜಶೇಖರ ಕೂಚಬಾಳ, ಶ್ರೀಶೈಲ ಜಾಲವಾದ, ಶಿವಪುತ್ರ ಮೇಲಿನಮನಿ, ಹುಯೋಗಿ ತಳ್ಳೊಳ್ಳಿ, ರೇವಣ್ಣ ಮುಗುರಂಖಾನ, ರಮೇಶ ನಡುವಿನಕೇರಿ, ಶೋಭಾ ಕಟ್ಟಿಮನಿ  ತಮ್ಮ ಅಭಿಪ್ರಾಯ ತಿಳಿಸಿದರು.

ಶಾಸಕರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ ಮತ್ತು ಮಾಜಿ ಶಾಸಕರಾದ ಸಿ.ಎಸ್.ನಾಡಗೌಡ, ಶರಣಪ್ಪ ಸುಣಗಾರ, ಸಿಂದಗಿ ವಿಧಾನಸಭೆ ಉಪಚುನಾವಣೆ ಅಭ್ಯರ್ಥಿ ಅಶೋಕ ಮನಗೂಳಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ, ಕಾಂತಾ ನಾಯಕ,
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಾಕೀರ ಸನದಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜೂ ಆಲಗೂರ ಉಪಸ್ಥಿತರಿದ್ದರು.

****

ದೇಶದಲ್ಲಿ ಹಲವಾರು ಧರ್ಮ, ಜಾತಿ, ದೇವರ ವಿಗ್ರಹಗಳಿವೆ. ಆದರೆ, ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ಪುತ್ತಳಿಯಷ್ಟು ಯಾವ ದೇವರ ವಿಗ್ರಹಗಳೂ ದೇಶದಲ್ಲಿಲ್ಲ
–ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು