ನಿಡಗುಂದಿ: ಚಂದ್ರಯಾನ-3ರ ಕಾರ್ಯದಲ್ಲಿ ತಾಂತ್ರಿಕೇತರ ಯೋಜನಾ ಸಹಾಯಕರಾಗಿ ತಾಲ್ಲೂಕಿನ ಗೊಳಸಂಗಿ ಗ್ರಾಮದ ಯುವಕನೊಬ್ಬ ಸೇವೆ ಸಲ್ಲಿಸಿರುವುದು ಗ್ರಾಮಸ್ಥರ ಹೆಮ್ಮೆಗೆ ಕಾರಣವಾಗಿದೆ.
ಗೊಳಸಂಗಿ ಗ್ರಾಮದ ಹಿರಿಯ ರಂಗ ಕಲಾವಿದ ಡೋಂಗ್ರಿಸಾಬ ಹಾಗೂ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯ ಅಡುಗೆ ಸಹಾಯಕಿ ಶಬಾನಾ ದಂಪತಿಯ ಪುತ್ರ ಸೈಫಲಿ ಬೀಳಗಿ (28) ಇಸ್ರೋ ಸಂಸ್ಥೆಯಲ್ಲಿ ಒಂದೂವರೆ ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.
ತಾಂತ್ರಿಕೇತರ ಯೋಜನಾ ಸಹಾಯಕರಾಗಿರುವ ಇವರು ಬೆಂಗಳೂರಿನ ಮಾರತಹಳ್ಳಿ ಇಸ್ರೋ ಸಂಸ್ಥೆಯ ಯು.ಆರ್. ರಾವ್ ಬಾಹ್ಯಾಕಾಶ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಾನೊಬ್ಬ ಸಾಮಾನ್ಯ ಬಡ ರೈತ. ಹೆಚ್ಚಿನ ಓದು-ಬರಹ ಗೊತ್ತಿಲ್ಲ. ಆದರೆ ನಮ್ಮ ಮಗ ಚಂದ್ರಯಾನ-3 ಉಡಾವಣೆಯಲ್ಲಿ ಅಳಿಲು ಸೇವೆ ಸಲ್ಲಿಸಿರುವುದು ಸಂತಸ ಮೂಡಿಸಿದೆ.ಡೋಂಗ್ರಿಸಾಬ (ಬಾಬು) ಬೀಳಗಿ, ಸೈಫಲಿ ಬೀಳಗಿ ತಂದೆ, ಗೊಳಸಂಗಿ ಗ್ರಾಮಸ್ಥ
‘ಚಂದ್ರಯಾನ-3ರ ಯೋಜನೆ ಸಿದ್ಧಪಡಿಸಲು ವಿಜ್ಞಾನಿಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸಿದ್ದೇನೆ. ಅವರಿಗೆ ಅಗತ್ಯವಾಗಿರುವ ಯೋಜನೆಯನ್ನು ಸಿದ್ಧಪಡಿಸಲು ನೆರವಾಗಿದ್ದೇನೆ. ಸೂರ್ಯನಿಗೆ ಉಪಗ್ರಹ ಕಳಿಸುವ ಆದಿತ್ಯ-11 ರ ಯೋಜನಾ ಸಹಾಯಕನಾಗಿಯೂ ಕಾರ್ಯನಿರ್ವಹಿಸಿರುವೆ’ ಎಂದು ಸೈಫ್ ಅಲಿ ಬೆಂಗಳೂರಿನಿಂದ ದೂರವಾಣಿ ಕರೆಯಲ್ಲಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಗೊಳಸಂಗಿಯಲ್ಲಿಯೇ ಶಿಕ್ಷಣ
ಪ್ರಾಥಮಿಕ, ಪ್ರೌಢಶಾಲೆ, ಪಿಯುಸಿ, ಬಿಎ ಪದವಿಯವರೆಗೆ ಗೊಳಸಂಗಿಯಲ್ಲಿಯೇ ಶಿಕ್ಷಣ ಪೂರೈಸಿದ ಸೈಫಲಿ ಮುಂದೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಎಂಎ ಪದವಿ ಮುಗಿಸಿ ಚಿನ್ನದ ಪದಕ ಪಡೆದಿದ್ದಾರೆ. ನಂತರ ಐಎಎಸ್, ಕೆಎಎಸ್ ಮಾಡುವ ಕನಸು ಹೊತ್ತಿದ್ದ ಸೈಫಲಿ ಅವರ ಕನಸಿಗೆ ಕೋವಿಡ್ ತಣ್ಣೀರೆರಚಿತು. ಬಡತನದ ಕಾರಣ ತಂದೆಯೊಡನೆ ಕೃಷಿ ಕಾಯಕದಲ್ಲಿ ತೊಡಗಿದ್ದ ಸೈಫಲಿ ಇದೇ ವೇಳೆ ಇಸ್ರೋ ಸಂಸ್ಥೆ ಕರೆದಿದ್ದ ತಾಂತ್ರಿಕೇತರ ಹುದ್ದೆಗೆ ಆಯ್ಕೆಯಾದರು. ಒಂದೂವರೆ ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.