ಭಾನುವಾರ, ಸೆಪ್ಟೆಂಬರ್ 25, 2022
28 °C

ವಿಜಯಪುರ | ಸ್ತ್ರೀ ಸಂವೇದನೆಯ ಚಿತ್ರಕಲಾವಿದೆ ಸವಿತಾ 

ರಮೇಶ ಎಸ್.ಕತ್ತಿ Updated:

ಅಕ್ಷರ ಗಾತ್ರ : | |

Prajavani

ಆಲಮೇಲ(ವಿಜಯಪುರ): ಚಿತ್ರಕಲಾವಿದೆ ಸವಿತಾ ಪಾಟೀಲ ಅವರು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಆಲಮೇಲದ ಅಪ್ಪಟ ಗ್ರಾಮೀಣ ಪ್ರತಿಭೆ.

ಆಲಮೇಲದ ಪ್ರಭುರಾಜ್ ಪಾಟೀಲರ ಮಗಳಾದ ಸವಿತಾ ನಾಡಿನಾದ್ಯಂತ ಅಲ್ಲದೇ, ದೇಶದ ಬೇರೆ ಬೇರೆ ಊರುಗಳಲ್ಲಿ ಅನಾವರಣ ಮಾಡುವ ಮೂಲಕ ಆಲಮೇಲದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಡಶಾಲೆಯನ್ನು ಆಲಮೇಲದಲ್ಲಿಯೇ ಮುಗಿಸಿದರು. ಚಿತ್ರಕಲೆಗೆ ಪ್ರಧಾನ ಆದ್ಯತೆ ನೀಡಿ ಸದ್ಯ ಧಾರವಾಡದ ಜಿಎಸೆಸ್ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸವಿತಾ ಅವರ ಕಲಾಕೃತಿಗಳಲ್ಲಿ ಲುಂಬಿನಿಯ ಬುದ್ದ ವಿಹಾರ, ಆಂಧ್ರದ ಜಾವಗಾಂವ, ಗೋವಾ, ಬೆಂಗಳೂರು ಲಲಿತಾ ಕಲಾ ಅಕಾಡೆಮಿ, ಬೀದರ, ಧಾರವಾಡ, ಮೈಸೂರುಗಳಲ್ಲಿ ಸಂಗ್ರಹಿಸಿಡಲಾಗಿದೆ.

ಸೃಜನಶೀಲ ಕೃತಿಗಳನ್ನು ಬಿಡಿಸುವುದು ಇವರ ಮುಖ್ಯ ಹವ್ಯಾಸ. ತಮ್ಮ ಮನದೊಳಗಿನ ಭಾವನೆಗಳನ್ನು, ಸ್ತ್ರೀತನದ ವಿವಿಧ ಚಹರೆಗಳನ್ನು ತಮ್ಮ ಕಲಾ ಚೌಕಟ್ಟಿಗೆ ಹೊಂದುವಂತೆ ರೂಪಿಸಿದ ನೂರಾರು ಕೃತಿಗಳು ನೋಡುಗರ ಮನ ಸೆಳೆದಿದ್ದಂತೂ ಸತ್ಯ.

ಸವಿತಾ ಅವರಲ್ಲಿ ಮಹಿಳಾ ಪರ ಆಶಯವಿದೆ. ಇದನ್ನೂ ಅವರ ಕೃತಿಗಳಲ್ಲಿ ಕಾಣಬಹುದು, ಮಹಿಳಾ ಜಗತ್ತು ತೆರೆದುಕೊಳ್ಳುವ ಚಿತ್ರಗಳು, ಮಹಿಳೆಯ ಸಂಕಟ, ತವಕ ತಲ್ಲಣಗಳು, ಸಂಭ್ರಮ ಹೀಗೆ ವಿವಿಧ ಆಯಾಮಗಳನ್ನು ರೂಪಿಸಿದ್ದಾರೆ. ಪ್ರಕೃತಿ ಮತ್ತು ಹೆಣ್ಣು ಅವರ ಕೈಚಳಕದಿಂದ ನೂರಾರು ಕೃತಿಗಳು ಅರಳಿ ನಿಂತಿವೆ.

ಒಂದು ಪೇಂಟಿಂಗ್ ಹಲವು ಕತೆಗಳನ್ನು ಕಲಾ ರಸಿಕರಲ್ಲಿ ಹುಟ್ಟುಹಾಕಿಸುತ್ತದೆ. ಕ್ರೀಯೇಟಿವ್ ಲ್ಯಾಂಡ್ ಸ್ಕೇಪ್, ನೇಚರ್ ಸ್ಕೇಪ್, ಮಿನೇಚರ್, ಭೂಮಿ, ಮಹಿಳೆ ಹೀಗೆ ಹತ್ತಾರು ವಿಷಯಗಳ ಮೇಲೆ ಚಿತ್ರಕಲಾ ಪ್ರದರ್ಶನ ಎರ್ಪಡಿಸಿದ್ದಾರೆ.

ಸರ್ಕಾರ ಮತ್ತು ಅಕಾಡೆಮಿಯ ಸಹಕಾರದಿಂದ ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಮತ್ತು ಸಾಮೂಹಿಕ ಪ್ರದರ್ಶನಗಳಲ್ಲೂ ತಮ್ಮ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಿದ್ದಾರೆ. 2021ರಲ್ಲಿ ಆಸ್ಸಾಂ ನಲ್ಲಿ ಇವರ ಕ್ರೀಯೇಟಿವ್ ಲ್ಯಾಂಡ್ ಸ್ಕೇಪ್ ಕೃತಿಯು ಬಹುಮಾನ ಪಡೆದುಕೊಂಡಿದೆ.

ರಾಷ್ಟ್ರಪ್ರಶಸ್ತಿ: ಆಂಧ್ರಪ್ರದೇಶದ ಜಗ್ಗಾಂವನ ತೆಲಗು ವಿಶ್ವವಿದ್ಯಾಲಯ 2001ರಲ್ಲಿ ಏರ್ಪಡಿಸಿದ್ದ ಅಖಿಲ ಭಾರತ ಚಿತ್ರಕಲಾ ಪ್ರದರ್ಶನದಲ್ಲಿ ಇವರ ಕೃತಿಗೆ ರಾಷ್ಟ್ರಮಟ್ಟದ ಮೊದಲ ಬಹುಮಾನ ಚಿನ್ನದ ಪದಕ ಪಡೆದುಕೊಂಡಿದೆ. ಅಲ್ಲಿಂದ ಇಲ್ಲಿವರೆಗೆ ದೇಶದ ತುಂಬೆಲ್ಲ ನಡೆದ ಪ್ರದರ್ಶನಗಳಲ್ಲಿ ಇವರ ಕೃತಿಗಳು ಜನಮೆಚ್ಚುಗೆ ಗಳಿಸಿವೆ.

2010ರಲ್ಲಿ ಗದುಗಿನಲ್ಲಿ ನಡೆದ ಸಮ್ಮೇಳನದಲ್ಲೂ ಇವರಿಗೆ ಮೊದಲ ಬಹುಮಾನ ಸಂದಿದೆ. ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಸ್ಕಾಲರ್ ಶಿಪ್ ಪಡೆದುಕೊಂಡಿದ್ದಾರೆ.

ಪ್ರದರ್ಶನಗಳು: ಮೈಸೂರು, ಬೆಂಗಳೂರು, ಧಾರವಾಡ, ಮಂಗಳೂರು, ಬೆಳಗಾವಿ, ಮಹಾರಾಷ್ಟ್ರದ ಮಿರಜ್, ಗೋವಾ ಹೀಗೆ ಹತ್ತಾರು ಕಡೆಗಳಲ್ಲೂ ವೈಯಕ್ತಿಕ ಪ್ರದರ್ಶನಗಳನ್ನು ಏರ್ಪಡಿಸಿದ್ದಾರೆ.

ಲಕ್ಕುಂಡಿ ಉತ್ಸವ, ಆಳ್ವಾಸ ನುಡಿಸಿರಿ, ಜಾನಪದ ಉತ್ಸವ ಮೊದಲಾದಡೆಗಳಲ್ಲಿ ನಡೆದ ಕಲಾ ಉತ್ಸವಗಳಲ್ಲೂ ಇವರ ಕೃತಿಗಳು ಭಾಗವಹಿಸಿವೆ.

ಧಾರವಾಡಕ್ಕೆ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಬಂದಾಗ ಅವರದೇ ಚಿತ್ರ ಬಿಡಿಸಿ ಸಮರ್ಪಿಸಿದ ಹೆಗ್ಗಳಿಕೆಯೂ ಅವರದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು