ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕಲರವ; ಪಾಠ, ಪ್ರವಚನ ಆರಂಭ

ವಿಜಯಪುರ ಜಿಲ್ಲೆಯಾದ್ಯಂತ ಶಾಲಾ, ಕಾಲೇಜುಗಳು ಪುನರಾರಂಭ; ಹಾಜರಾತಿ ಕಡಿಮೆ
Last Updated 23 ಆಗಸ್ಟ್ 2021, 13:09 IST
ಅಕ್ಷರ ಗಾತ್ರ

ವಿಜಯಪುರ: ಕೋವಿಡ್‌ ಪರಿಣಾಮ ಒಂದೂವರೆ ವರ್ಷದಿಂದ ಸ್ಥಗಿತವಾಗಿದ್ದ ಶಾಲಾ, ಕಾಲೇಜು ತರಗತಿಗಳು ಪುನರಾರಂಭವಾಗಿದ್ದು, ಪ್ರಥಮ ದಿನವಾದಸೋಮವಾರ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಿತ್ತು.

9ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಖುಷಿ, ಖುಷಿಯಿಂದ ತೆರಳಿದರು. ಬಹಳ ತಿಂಗಳ ಬಳಿಕ ಸಹಪಾಠಿ, ಶಿಕ್ಷಕರನ್ನು ಭೇಟಿಯಾದ ಸಂತಸ ವಿದ್ಯಾರ್ಥಿಗಳ ಮೊಗದಲ್ಲಿ ಕಂಡುಬಂದಿತು.

ಎರಡು ದಿನಗಳ ಮೊದಲೇ ಸ್ವಚ್ಛಗೊಂಡು, ಸ್ಯಾನಿಟೈಜ್‌ ಆಗಿದ್ದ ಶಾಲಾವರಣವನ್ನುತಳಿರು, ತೋರಣಗಳಿಂದ ಸಿಂಗಾರಗೊಳಿಸಲಾಗಿತ್ತು.ಶಿಕ್ಷಕರು ಮತ್ತು ಸಿಬ್ಬಂದಿ ಮಕ್ಕಳನ್ನು ಶಾಲಾ, ಕಾಲೇಜು ಪ್ರವೇಶದ್ವಾರದಲ್ಲೇ ಸ್ವಾಗತಿಸಿದರು. ಕೆಲವೆಡೆ ಆರತಿ ಬೆಳಗಿ, ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ಇನ್ನು ಕೆಲವು ಶಾಲೆ, ಕಾಲೇಜುಗಳಲ್ಲಿ ಎಸ್‌ಡಿಎಂಡಿ ಹಾಗೂ ಶಾಲಾ ಆಡಳಿತ ಮಂಡಳಿಗಳಿಂದ ಸ್ವಾಗತ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ಶಾಲಾ, ಕಾಲೇಜು ತರಗತಿ ಆರಂಭದ ಪ್ರಥಮ ದಿನವಾಗಿದ್ದ ಕಾರಣ ಬಹುತೇಕಪೋಷಕರು ತಮ್ಮ ಮಕ್ಕಳನ್ನು ತಾವೇ ಕರೆತಂದು ಬಿಟ್ಟು ಮನೆಗೆ ಮರಳಿದರು. ಅಲ್ಲದೇ, ಎಚ್ಚರ ವಹಿಸಲು ಸಲಹೆ ನೀಡಿದರು. ಹಾಜರಾತಿ ಅರ್ಧಕ್ಕಿಂತ ಹೆಚ್ಚಿತ್ತು.

ಪರಸ್ಪರ ಅಂತರ, ಮಾಸ್ಕ್‌ ಕಡ್ಡಾಯ, ಸ್ಯಾನಿಟೈಜ್‌, ಥರ್ಮಲ್‌ ಸ್ಕ್ಯಾನಿಂಗ್‌ ಮೂಲಕ ಪರೀಕ್ಷೆ ಮಾಡಿ ವಿದ್ಯಾರ್ಥಿಗಳನ್ನು ಕೊಠಡಿಗಳ ಒಳಗೆ ಬಿಡಲಾಯಿತು. ಒಂದು ಡೆಸ್ಕ್‌ಗೆ ಒಬ್ಬರು ಅಥವಾ ಇಬ್ಬರಿಗೆ ಮಾತ್ರ ಕೂರಲು ಅವಕಾಶ ಕಲ್ಪಿಸಲಾಗಿತ್ತು.

ಕೋವಿಡ್‌ ಹರಡದಂತೆ ತಡೆಗೆ ಮಾರ್ಗಸೂಚಿಗಳನ್ನು ಒಳಗೊಂಡ ಪ್ರಕಟಣೆಯನ್ನುನೋಟಿಸ್ ಬೋರ್ಡ್‌ ಹಾಗೂ ಪ್ರತಿ ಕೊಠಡಿಗಳ ಬಾಗಿಲುಗಳಿಗೆ ಅಂಟಿಸಲಾಗಿತ್ತು. ಪಾಠ, ಪ್ರವಚನದ ಆರಂಭಕ್ಕೂ ಮುನ್ನಾ ವಿದ್ಯಾರ್ಥಿಗಳಿಗೆ ಶಿಕ್ಷಕರು ಕೋವಿಡ್‌ ಮಾರ್ಗಸೂಚಿ ಅನುಸರಿಸಲು ಸೂಚನೆ ನೀಡಿದರು.

‘ಎರಡು ವರ್ಷಗಳಿಂದ ತರಗತಿಗಳು ನಡೆಯದೇ ಇದ್ದ ಕಾರಣ ಮಾನಸಿಕವಾಗಿ ಆತಂಕಕ್ಕೆ ಒಳಗಾಗಿದ್ದೆವು. ಆನ್‌ಲೈನ್‌ ತರಗತಿ ನಡೆದರೂ ಭೌತಿಕ ತರಗತಿಯಲ್ಲಿ ಪಾಠ ಕೇಳಿದಷ್ಟು ಅರ್ಥವಾಗುತ್ತಿರಲಿಲ್ಲ. ಈಗ ಶಾಲೆಗೆ ಹಾಜರಾಗಿ ಸ್ನೇಹಿತರು, ಶಿಕ್ಷಕರನ್ನು ಭೇಟಿಯಾಗಿರುವುದಕ್ಕೆ ಬಹಳ ಖುಷಿಯಾಗಿದೆ’ ಎಂದು ಸರ್ಕಾರಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಸುಮಯ್ಯಾ ಅಭಿಪ್ರಾಯಪಟ್ಟರು.

‘ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದಶಾಲೆಗಳು ಆರಂಭವಾಗಿರುವುದು ಸಂತಸದ ವಿಷಯ. ಮಕ್ಕಳು ಕೋವಿಡ್‌ ಆತಂಕವಿಲ್ಲದೇ ಶಾಲೆಗೆ ಬಂದಿದ್ದಾರೆ. ವಿದ್ಯಾರ್ಥಿಗಳಿಗೆ ಪಾಠ, ಪ್ರವಚನ ಬೋಧಿಸಲು ನಾವೂ ಕುತೂಹಲವಾಗಿದ್ದೇವೆ’ ಎಂದುಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆ ಶಿಕ್ಷಕಿ ಸ್ನೇಹಲತಾ ಹಿರೇಮನಿ ಹೇಳಿದರು.

***

ಶಾಲೆಗೆ ಜಿಲ್ಲಾಧಿಕಾರಿ ಭೇಟಿ

ವಿಜಯಪುರ: ಕೋವಿಡ್ ಮುಂಜಾಗೃತಾ ಕ್ರಮಗಳನ್ನು ಶಾಲೆಯಲ್ಲಿ ಪಾಲಿಸುವ ಜೊತೆಗೆ ತಮ್ಮ ಮನೆಗಳಲ್ಲಿಯೂ ಪಾಲಕರಿಗೆ ತಿಳಿಹೇಳಿ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಜಲನಗರದ ಸರ್ಕಾರಿ ಪ್ರೌಢಶಾಲೆಗೆ ಸೋಮವಾರ ಭೇಟಿ ನೀಡಿ ತರಗತಿ ಪ್ರಾರಂಭೋತ್ಸವದಲ್ಲಿ ಮಾತನಾಡಿದ ಅವರು, ಮಕ್ಕಳು ಬಹಳ ದಿನಗಳಿಂದ ಶಾಲಾ ಪ್ರಾರಂಭಕ್ಕಾಗಿ ಕಾಯುತ್ತಾ ಇದ್ದು, ಆನಂದದ ಕ್ಷಣ ಇದಾಗಿದೆ ಎಂದರು.

ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶಾಲೆಯವಿದ್ಯಾರ್ಥಿನಿಯರಾದ ಸಂಜನಾ ಜೋಡಮೀಸೆ ಪ್ರಥಮ (ಶೇ 93.76), ಭಾಗ್ಯಾ ಬಡಿಗೇರ ದ್ವಿತೀಯ(ಶೇ 91.68) ಹಾಗೂ ಕನ್ಯಾಕುಮಾರಿ ಬಮ್ಮನಳ್ಳಿ (ಶೇ85.28) ಮತ್ತು ಮಹಾಂತೇಶ ಕಾಮಾ (ಶೇ 85.28) ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿರುವುದು ಶ್ಲಾಘನೀಯ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾರಾಯಣ ಹೊಸೂರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಮೊರಟಗಿ ಹಾಗೂ ಸಿಬ್ಬಂದಿ ಇದ್ದರು.

****

ಎಕ್ಸಲಂಟ್ ಶಾಲೆ:ಹೂಗುಚ್ಛ ನೀಡಿ ಸ್ವಾಗತ

ವಿಜಯಪುರ: ನಗರದ ಇಟ್ಟಂಗಿಹಾಳದಲ್ಲಿರುವಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಎನ್. ಕೆಲೂರ ಮಾತನಾಡಿದರು.

ಆಡಳಿತಾಧಿಕಾರಿ ಅಮರೇಶ ಅಳಗುಂಡಗಿ, ಮುಖ್ಯಶಿಕ್ಷಕ ಎಸ್.ಎಸ್. ದೊಡಮನಿ ಮತ್ತು ಎಸ್.ಬಿ. ಹೆಗಲಾಡಿ ಮಕ್ಕಳಿಗೆ ಕೋವಿಡ್ ಸುರಕ್ಷತೆಯ ಬಗ್ಗೆ ತಿಳಿ ಹೇಳಿದರು.

****

ಪ್ರಥಮ ದಿನವಾದ ಸೋಮವಾರ ಶಾಲೆ, ಕಾಲೇಜುಗಳಿಗೆ ಅರ್ಧದಷ್ಟು ಸಂಖ್ಯೆಯಲ್ಲಿ ಬಂದಿದ್ದರು. ಯಾವುದೇ ಆತಂಕ, ತೊಂದರೆಯಿಲ್ಲದೇ ಕಲಿಕೆ ಆರಂಭವಾಗಿದೆ

ಎನ್‌.ವಿ.ಹೊಸೂರ,

ಡಿಡಿಪಿಐ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT