ಆಲಮಟ್ಟಿ: ಒಂದಿನನೂ ಬಿಡಂಗಿಲ್ರೀ.. ಮಳಿ, ಚಳಿ ಏನೇ ಇರಲಿ ದಿನಪತ್ರಿಕೆ ಮನೆ ಮನೆಗೆ ತಲುಪಿಸಿಯೇ ನಾನು ಬೇರೆ ಕೆಲಸಕ್ಕೆ ಅಣಿಯಾಗುತ್ತೇನೆ ಎನ್ನುತ್ತಾರೆ ಆಲಮಟ್ಟಿ ಭಾಗದಲ್ಲಿ ಕಳೆದ ಒಂದು ದಶಕದಿಂದ ವಿವಿಧ ದಿನಪತ್ರಿಕೆ ಹಾಕುತ್ತಿರುವ ಆಲಮಟ್ಟಿಯ ಶನೂರ್ ಬಾಬಾ ಜೈನುದ್ದೀನ್ ನದಾಫ್.
42 ವರ್ಷದ ಶನೂರ್ ಬೆಳಿಗ್ಗೆ 5 ಗಂಟೆಗೆ ಆಲಮಟ್ಟಿ ಪೆಟ್ರೋಲ್ ಪಂಪ್ ನಲ್ಲಿ ಹಾಜರ್. ಸುಮಾರು 250 ಪತ್ರಿಕೆ ತಲುಪಿಸುವಾಗ ಬೆಳಿಗ್ಗೆ 9 ಗಂಟೆಯಾಗಿರುತ್ತದೆ. ನಂತರ ಮತ್ತೀತರ ಕೆಲಸದತ್ತ ನಮ್ಮ ಓಟ ಎನ್ನುತ್ತಾರೆ ಶನೂರ್.
‘ಮೊದ ಮೊದಲು ಪತ್ರಿಕೆ ಹಾಕಲು ಮುಜುಗರ ಆಗುತ್ತಿತ್ತು. ಆದರೆ ಮುಂದೆ ಅದೊಂದು ಪುಟ್ಟ ಉದ್ಯೋಗವಾಗಿ ಮಾರ್ಪಾಡಾಯಿತು. ಈಗ ಇನ್ನೀತರ ಸ್ವಂತ ಉದ್ಯೋಗ ಇದ್ದರೂ ಪತ್ರಿಕೆ ಹಾಕುವುದನ್ನು ಮಾತ್ರ ಬಿಟ್ಟಿಲ್ಲ. ಇದರಿಂದ ಆರೋಗ್ಯವೂ ಉತ್ತಮವಾಗಿದೆ. ಬೆಳಿಗ್ಗೆ ಉತ್ತಮ ವಾತಾವರಣವೂ ಇರುತ್ತದೆ. ಆದರೆ ಪ್ರತಿ ತಿಂಗಳು ಬಿಲ್ ಸಂಗ್ರಹಿಸುವುದೇ ಸ್ವಲ್ಪ ಜಟಿಲ ಕಾರ್ಯ’ ಎನ್ನುತ್ತಾರೆ ಶನೂರ್.
ಪತ್ರಿಕೆ ಹಾಕುವುದು ಸುಲಭ, ಬಿಲ್ ಸಂಗ್ರಹಣೆಗೆ ಹೋದಾಗ ಮನೆ ಕೀಲಿಯಿದ್ದರೇ, ಅಥವಾ ನಾಳೆ ಬಾ ಎಂದು ಹೇಳಿ ಕಳುಹಿಸಿದರೆ ಮತ್ತೊಮ್ಮೆ ಅದೇ ಮನೆಗೆ ಹೋಗಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪ್ರತಿ ತಿಂಗಳು 1 ರಿಂದ 5 ನೇ ತಾರೀಖಿನವರೆಗೆ ಬಿಲ್ ಕಲೆಕ್ಟ್ ಮಾಡುವುದೇ ತಲೆ ನೋವು. ಆದರೂ ಅದನ್ನು ಕೂಡಾ ಪ್ರಾಮಾಣಿಕವಾಗಿ ನಿಭಾಯಿಸುತ್ತಿರುವೆ ಎಂದರು ಶನೂರ್. ಒಂದು ದಶಕದಲ್ಲಿ ಒಮ್ಮೆಯೂ ರಜೆ ಮಾಡಿಲ್ಲ. ಆರೋಗ್ಯ ಕೈಕೊಟ್ಟರೂ ಔಷಧಿ ತೆಗೆದುಕೊಂಡು ಪತ್ರಿಕೆ ಹಂಚಿದ್ದೇನೆ, ಮಳೆ ಬಂದರೆ ಪತ್ರಿಕೆ ಹಂಚುವುದು ಸ್ವಲ್ಪ ಕಷ್ಟ ಎನ್ನತ್ತಾರೆ ಅವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.