ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿ ಉಪ ಚುನಾವಣೆ: ನಂ.2ಕ್ಕೆ ಭವಿಷ್ಯ ಬಹಿರಂಗ

ವಿಜಯಪುರ ಸೈನಿಕ್ ಶಾಲೆಯ ಸ್ಟ್ರಾಂಗ್ ರೂಂನಲ್ಲಿ ಮತಯಂತ್ರಗಳು ಭದ್ರ
Last Updated 31 ಅಕ್ಟೋಬರ್ 2021, 10:49 IST
ಅಕ್ಷರ ಗಾತ್ರ

ವಿಜಯಪುರ: ಸಿಂದಗಿ ಉಪ ಚುನಾವಣೆ ಮತದಾನ ಪ್ರಕ್ರಿಯೆ ಶನಿವಾರ ತಡರಾತ್ರಿ ಪೂರ್ಣಗೊಂಡಿದ್ದು, ಮತಯಂತ್ರಗಳನ್ನು ವಿಜಯಪುರ ನಗರದಲ್ಲಿರುವ ಸೈನಿಕ್ ಶಾಲೆಯ ಒಡೆಯರ್ ಹೌಸ್ ನ ಸ್ಟ್ರಾಂಗ್ ರೂಂನಲ್ಲಿ ಇಡಲಾಗಿದ್ದು, ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಕಣದಲ್ಲಿರುವ ಆರು ಅಭ್ಯರ್ಥಿ ಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ನ. 2ರಂದು ಬೆಳಿಗ್ಗೆ 8 ರಿಂದ ಮತ ಎಣಿಕೆ ನಡೆಯಲಿದೆ. 14 ಮತಎಣಿಕೆ ಟೇಬಲ್‌ಗಳನ್ನು ವ್ಯವಸ್ಥೆ ಮಾಡಲಾಗಿದ್ದು, 2 ಕೌಂಟಿಂಗ್ ಹಾಲ್‌ಗಳನ್ನು ನಿಗದಿಪಡಿಸಿದೆ. ಪ್ರತಿ ಕೌಂಟಿಂಗ್ ಹಾಲ್‌ನಲ್ಲಿ ತಲಾ 7 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ.

ಮತ ಎಣಿಕೆಗೆ 40 ಸಿಬ್ಬಂದಿ ನಿಯೋಜನೆ ಮಾಡಿದ್ದು, ಇದರಲ್ಲಿ 20 ಸೂಪರ್ ವೈಸರ್ ಹಾಗೂ 20 ಸಹಾಯಕ ಮತ ಎಣಿಕೆದಾರರ (ಕೌಂಟಿಂಗ್ ಅಸಿಸ್ಟೆಂಟ್) ನೇಮಕ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌ ತಿಳಿಸಿದ್ದಾರೆ.

ಅಂದು ಮಧ್ಯಾಹ್ನ ದ ವೇಳೆಗಾಗಲೇ ಫಲಿತಾಂಶ ಪ್ರಕಟವಾಗಲಿದೆ. ಈ ನಡುವೆ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರ ಜೋರಾಗಿ ನಡೆದಿದೆ. ಯಾವ ಅಭ್ಯರ್ಥಿ ಗೆಲ್ಲಬಹುದು ಎಂಬ ಲೆಕ್ಕಾಚಾರ ನಡೆದಿರುವ ಮಧ್ಯೆಯೇ ಅನೇಕರು, ಸೋಲು-ಗೆಲುವಿನ ಕುರಿತು ಬಾಜಿ ಕಟ್ಟತೊಡಗಿದ್ದಾರೆ.

ಅಭ್ಯರ್ಥಿಗಳು ನಿರಾಳ:ಕಳೆದ ಒಂದು ತಿಂಗಳಿಂದ ಹಗಲು, ರಾತ್ರಿ ಚುನಾವಣಾ ಪ್ರಚಾರ, ಸಭೆ, ಸಮಾರಂಭ, ಮತಯಾಚನೆಯಲ್ಲಿ ಸುಸ್ತಾಗಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಭಾನುವಾರ ಸ್ವಲ್ಪ ನಿರಾಳವಾಗಿದ್ದರು.

ಅಶೋಕ ಮನಗೂಳಿ ಅವರು ತಮ್ಮ ಮನೆಯಲ್ಲೇ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಚುನಾವಣೆ, ಮತದಾನದ ಕುರಿತು ಮಾಹಿತಿ ಪಡೆದುಕೊಂಡರು.

ರಮೇಶ ಭೂಸನೂರ ಅವರು ಚಾಂದಕವಠೆ ಗ್ರಾಮದಲ್ಲಿ ಹಾಲುಮರಡಿ ಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡ ಎತ್ತಿನ ಬಂಡಿ, ಕಲ್ಲು ಎತ್ತುವ ಸ್ಪರ್ಧಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನಾಜಿಯಾ ಅಂಗಡಿ ಅವರು ಸಿಂದಗಿಯಲ್ಲಿರುವ ತಮ್ಮ ಮನೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ದಿನಪೂರ್ತಿ ಕಾಲ ಕಳೆದರು.

ಶೇ 1.44ರಷ್ಟು ಕಡಿಮೆ ಮತದಾನ

ವಿಜಯಪುರ: 2018ರಲ್ಲಿ ನಡೆದಿದ್ದ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಸಿಂದಗಿ ಕ್ಷೇತ್ರದಲ್ಲಿ ಶೇ 70.85 ರಷ್ಟು ಮತದಾನವಾಗಿತ್ತು. ಆದರೆ, ಶನಿವಾರ ನಡೆದ ಉಪ ಚುನಾವಣೆಯಲ್ಲಿ ಶೇ 69.41ರಷ್ಟು ಮತದಾನವಾಗಿದೆ. ಕಳೆದ ಬಾರಿಗಿಂತ ಶೇ 1.44ರಷ್ಟು ಕಡಿಮೆ ಮತದಾನವಾಗಿದೆ.

ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಇರುವ ಒಟ್ಟು 1,20,939 ಪುರುಷ, 1,13,466 ಮಹಿಳಾ ಮತ್ತು 32 ಇತರೆ ಮತದಾರರ ಸೇರಿದಂತೆ 2,34,437 ಮತದಾರರ ಪೈಕಿ 85,859 ಪುರುಷರು, 76,990 ಮಹಿಳಾ ಮತ್ತು 3 ಇತರೆ ಮತದಾರರು ಸೇರಿದಂತೆ 1,62,852 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT