ತಾಳಿಕೋಟೆ: ತಾಲ್ಲೂಕು ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಳೆದ ಒಂದು ತಿಂಗಳಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಬೆಳೆಗಳಿಗೆ ನೀರುಣಿಸಲಾಗದೆ ಒಣಗಿ ಹೋಗುತ್ತಿವೆ. ಸಮರ್ಪಕ ವಿದ್ಯುತ್ ಪೂರೈಸಬೇಕೆಂದು ಒತ್ತಾಯಿಸಿ ನೂರಾರು ರೈತರು ಪಟ್ಟಣದ 110 ಕೆವಿ ವಿದ್ಯುತ್ ಕೇಂದ್ರಕ್ಕೆ ಸೋಮವಾರ ಬೆಳಿಗ್ಗೆ 4 ಗಂಟೆಗೆ ಮುತ್ತಿಗೆ ಹಾಕಿ, 54 ಹಳ್ಳಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಸಂಬಂಧಿಸಿದ ಹೆಸ್ಕಾಂ ಎಇಇ ಅವರನ್ನು ಸಂಪರ್ಕಿಸಿದಾಗ ರೈತರಿಗೆ ಸರಿಯಾಗಿ ಸ್ಪಂದಿಸಲಿಲ್ಲವೆಂದು ನೇರವಾಗಿ ಜಿಲ್ಲಾಧಿಕಾರಿ ಜೊತೆ ಸಂಪರ್ಕ ಸಾಧಿಸಿ ತಮಗಾಗಿರುವ ತೊಂದರೆಗಳನ್ನು ತಿಳಿಸಿ ನೆರವಿಗೆ ಕೋರಲಾಯಿತು.
ರೈತರ ಮನವಿಗೆ ತಕ್ಷಣ ಸ್ಪಂದಿಸಿ ಎಲ್ಲ ರೀತಿಯಿಂದ ನೆರವಿನ ಭರವಸೆ ನೀಡಿ, ತಕ್ಷಣ ಸಂಬಂಧಿಸಿದ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿದರು ಎಂದು ರೈತರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಾವದಗಿ ಗ್ರಾಮದ ರೈತ ರುದ್ರಸ್ವಾಮಿ ಗಣಾಚಾರಿ, ರೈತರಿಗೆ ಪ್ರತಿದಿನ ಯಾವುದೇ ಸಂದರ್ಭದಲ್ಲಿ ಆಗಲಿ ನಿರಂತರವಾಗಿ ಏಳುಗಂಟೆ ವಿದ್ಯುತ್ ಪೂರೈಸಬೇಕು. ಅದು 400 ವೋಲ್ಟೇಜ್ ಇರಬೇಕು. ಆದರೆ, 180-200 ವೋಲ್ಟೇಜ್ ಇರುವುದರಿಂದ ಮೋಟಾರುಗಳು ಸುಟ್ಟುಹೋಗುತ್ತಿವೆ. ಬೆಳೆ ಒಣಗುತ್ತಿವೆ. ಅಪರಾತ್ರಿಯಲ್ಲಿ ಮೂರುಗಂಟೆಗೆ ಪೂರೈಸುವ ವಿದ್ಯುತ್ ನಿಂದಾಗಿ ರೈತರು ರಾತ್ರಿ ಕತ್ತಲಲ್ಲಿಯೇ ಜಮೀನಿನಲ್ಲಿ ಕಾಯುತ್ತಿರುತ್ತೇವೆ. ಆದರೂ ಸಮರ್ಪಕ ವಿದ್ಯುತ್ ಸರಬರಾಜು ಆಗುತ್ತಿಲ್ಲ ಎಂದು ದೂರಿದರು.
ಸ್ಥಳಕ್ಕೆ ಆಗಮಿಸಿದ ತಾಳಿಕೋಟೆ ಸಬ್ ಡಿವಿಷನ್ ನ ಎಇಇ ಟಿ.ಬಿ.ರಾಠೋಡ, ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಶೀಘ್ರದಲ್ಲಿ ಪ್ರತ್ಯೇಕ ಲೈನ್ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರಿಂದ ಸ್ಥಗಿತಗೊಳಿಸಲಾಗಿದ್ದ 54 ಹಳ್ಳಿಗಳ ವಿದ್ಯುತ್ ಸಂಪರ್ಕವನ್ನು ಬೆ.11 ಗಂಟೆಗೆ ಮರಳಿ ನೀಡಲಾಯಿತು.
ಮಧ್ಯಾಹ್ನದ ವೇಳೆಗೆ ಸಮರ್ಪಕ ವೊಲ್ಟೇಜ್ ನೀಡುವುದಾಗಿ ತಿಳಿಸಿದ್ದ ಹೆಸ್ಕಾಂ ಅಧಿಕಾರಿಗಳು ಮಾತಿನಂತೆ ನಡೆದುಕೊಂಡಿಲ್ಲ. ಎರಡು ದಿನ ಕಾಯ್ದು ನೋಡಿ ಮತ್ತೆ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕುವುದಾಗಿ ರೈತ ಮುಖಂಡರು ‘ಪ್ರಜಾವಾಣಿ’ಗೆ ತಿಳಿಸಿದರು.
ಮುಷ್ಕರದಲ್ಲಿ ತಾಳಿಕೋಟೆ ತಾಲ್ಲೂಕಿನ ಕೊಡಗಾನೂರ, ಕಾರಗನೂರ, ಲಕ್ಕುಂಡಿ, ಬ್ಯಾಲಾಳ, ಗುಂಡಕನಾಳ, ಶಳ್ಳಗಿ, ಬಿ.ಸಾಲವಾಡಗಿ, ಬಿಳೇಭಾವಿ ಮೈಲೇಶ್ವರ ಮೊದಲಾದ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.