ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿ ಉಪ ಚುನಾವಣೆ: ರಮೇಶ ಭೂಸನೂರ, ಅರುಣ ಶಹಾಪುರ ಹೆಸರು ಮುನ್ನೆಲೆಗೆ

ಸಿಂದಗಿ ಉಪ ಚುನಾವಣೆ: ಸಿಂದಗಿ ವಿಧಾನ ಸಭಾ ಉಪ ಚುನಾವಣೆ; ಬಿಜೆಪಿ ಅಭ್ಯರ್ಥಿ ಆಯ್ಕೆ ಕಗ್ಗಂಟು
Last Updated 30 ಸೆಪ್ಟೆಂಬರ್ 2021, 15:37 IST
ಅಕ್ಷರ ಗಾತ್ರ

ವಿಜಯಪುರ: ಸಿಂದಗಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರತೊಡಗಿದೆ. ಆಡಳಿತರೂಢ ಬಿಜೆಪಿಯು ಸಿಂದಗಿಯಲ್ಲಿ ಪಕ್ಷದ ಬಾವುಟವನ್ನು ಹಾರಿಸಲು ಶತಾಯಗತಾಯ ಪ್ರಯತ್ನದಲ್ಲಿದೆ. ಆದರೆ, ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ.

ಬಿಜೆಪಿಯು ನಡೆಸಿರುವ ಆಂತರಿಕ ಸಮೀಕ್ಷೆ ಮತ್ತು ಅಭಿಪ್ರಾಯ ಸಂಗ್ರಹದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ ಮತ್ತು ವಿಧಾನ ಪರಿಷತ್‌ ಹಾಲಿ ಸದಸ್ಯಅರುಣ ಶಹಾಪುರ ಅವರು ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.

ರಮೇಶ ಭೂಸನೂರ ಅವರು ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಸಚಿವರಾದ ಶ್ರೀರಾಮುಲು ಮತ್ತು ಸಿಂದಗಿ ಚುನಾವಣಾ ಉಸ್ತುವಾರಿ ಲಕ್ಷ್ಮಣ ಸವದಿ ಅವರನ್ನು ಭೇಟಿ ಮಾಡಿ, ಟಿಕೆಟ್‌ಗಾಗಿ ಲಾಬಿ ನಡೆಸಿದ್ದಾರೆ.

2008 ಮತ್ತು 2013ರಲ್ಲಿ ಎರಡು ಬಾರಿ ಶಾಸಕರಾಗಿದ್ದ ರಮೇಶ ಭೂಸನೂರ ಅವರು 2018ರ ಚುನಾವಣೆಯಲ್ಲಿ ಜೆಡಿಎಸ್‌ನ ದಿ.ಎಂ.ಸಿ.ಮನಗೂಳಿ ಅವರ ವಿರುದ್ಧ ಕೇವಲ ಎಂಟು ಸಾವಿರ ಮತಗಳ ಅಂತರದಿಂದ ಸೋತಿದ್ದರು. ಹೀಗಾಗಿ ಈ ಬಾರಿಯೂ ಪಕ್ಷದ ಟಿಕೆಟ್‌ ಗಿಟ್ಟಿಲು ಹರಸಾಹಸ ಮಾಡುತ್ತಿದ್ದಾರೆ.

ಭೂಸನೂರ ಅವರಿಗೆ ಟಿಕೆಟ್ ತಪ್ಪಿಸಲು ಪಕ್ಷದೊಳಗೆ ದೊಡ್ಡ ಮಟ್ಟದ ತಂತ್ರಗಾರಿಕೆ ನಡೆದಿದೆ. ಕರ್ನಾಟಕ ಲಿಂಬೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಅಲ್ಲಾಪುರ, ಮುಖಂಡರಾದ ಶಂಭು ಕಕ್ಕಳಮೇಲಿ, ಸಿದ್ದಣ್ಣ ಬಿರಾದಾರ ಅಡಕಿ, ಚಂದ್ರಶೇಖರ ನಾಗೂರು ಮತ್ತು ಮುತ್ತು ಶಾಬಾದಿ ಅವರನ್ನೊಳಗೊಂಡ ಐವರ ತಂಡವು ಈಗಾಗಲೇ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಸೇರಿದಂತೆ ವರಿಷ್ಠರನ್ನು ಭೇಟಿ ಮಾಡಿ, ಮಾಜಿ ಶಾಸಕ ರಮೇಶ ಭೂಸನೂರ ಅವರಿಗೆ ಯಾವುದೇ ಕಾರಣಕ್ಕೂ ಟಿಕೆಟ್‌ ನೀಡಬಾರದು ಎಂದು ಒತ್ತಾಯ ಮಾಡಿದ್ದಾರೆ. ಅಷ್ಟೇ ಅಲ್ಲ, ನಮ್ಮಲ್ಲೇ ಯಾರಿಗಾದರೂ ಒಬ್ಬರಿಗೆ ಟಿಕೆಟ್‌ ನೀಡಬೇಕು ಎಂದು ಲಾಬಿನಡೆಸಿದ್ದಾರೆ.

ಅರುಣಗೆ ವರಿಷ್ಠರ ಒಲವು

ವಿಧಾನ ಪರಿಷತ್‌ ಸದಸ್ಯ ಅರುಣ ಶಹಪೂರ ಅವರನ್ನು ಕಣಕ್ಕಿಳಿಸಬೇಕು ಎಂದುಪಕ್ಷದ ಕೆಲ ವರಿಷ್ಠರು ಒತ್ತಡ ಹೇರುತ್ತಿದ್ದಾರೆ. ಈ ಸಂಬಂಧ ಶಹಪೂರ ಅವರ ಅಭಿಪ್ರಾಯವನ್ನು ಆಲಿಸಿರುವ ವರಿಷ್ಠರು ಉಪ ಚುನಾವಣೆಗೆ ಸಿದ್ಧವಾಗುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಶಹಪೂರ ಅವರು ಕ್ಷೇತ್ರದಲ್ಲಿ ಆರೇಳು ತಿಂಗಳಿಂದ ಹೆಚ್ಚು ಚಟುವಟಿಕೆಯಲ್ಲಿದ್ದಾರೆ. ಅಲ್ಲದೇ, ಕೋವಿಡ್‌ ಸಂದರ್ಭದಲ್ಲಿ ಸಹಾಯ, ಸಹಕಾರ ಮಾಡುವ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ.

ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳನ್ನು ಒಳಗೊಂಡ ವಿಧಾನ ಪರಿಷತ್‌ ವಾಯವ್ಯ ಶಿಕ್ಷಕರ ಕ್ಷೇತ್ರದಿಂದ 2010 ಹಾಗೂ 2016 ರಲ್ಲಿ ಜಯಗಳಿಸಿರುವ ಶಹಪೂರ ಅವರು ಮೂರನೇ ಬಾರಿಗೂ ಸ್ಪರ್ಧಿಸಲು ಅಣಿಯಾಗಿದ್ದಾರೆ. ಅಲ್ಲದೇ, ಶಿಕ್ಷಕರ ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯ ಮಾಡುವ ಮೂಲಕ ಗುರುತಿಸಿಕೊಂಡಿದ್ದಾರೆ.

ಸವದಿ ಹೆಸರು ಚಾಲ್ತಿ

ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಹೆಸರೂ ಸಹ ಈ ಮೊದಲಿನಿಂದಲೂ ಕೇಳಿಬರುತ್ತಿದೆ. ಆದರೆ, ಸಿಂದಗಿ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸವದಿ ಹೇಳಿಕೆ ನೀಡಿದ್ದಾರೆ. ಅಲ್ಲದೇ, ಪಕ್ಷವು ಈಗಾಗಲೇ ಸಿಂದಗಿ ಉಪ ಚುನಾವಣೆ ಉಸ್ತುವಾರಿಯನ್ನು ಸವದಿ ಅವರಿಗೆ ವಹಿಸಿರುವುದರಿಂದ ಸ್ಪರ್ಧೆ ಸಾಧ್ಯತೆ ಕ್ಷೀಣಿಸಿದೆ. ಸಿಂದಗಿ ತಾಲ್ಲೂಕಿನಲ್ಲಿ ಸವದಿ ಅವರ ಒಡತನದ ಸಕ್ಕರೆ ಕಾರ್ಖಾನೆ ಇದೆ. ಅಷ್ಟೇ ಅಲ್ಲದೇ, ಕ್ಷೇತ್ರದಲ್ಲಿ ಒಡನಾಡ ಮತ್ತು ಜನ ಸಂಪರ್ಕ ಹೆಚ್ಚಿರುವುದರಿಂದ ಕೊನೆ ಕ್ಷಣದಲ್ಲಿ ಪಕ್ಷ ಕಣಕ್ಕಿಳಿಯುವ ಸಾಧ್ಯತೆ ಅಲ್ಲ ಗಳೆಯುವಂತಿಲ್ಲ.

ವಿಜುಗೌಡ ಲಾಬಿ

ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಅವರೂ ಸಹ ಸಿಂದಗಿ ಉಪ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲು ಲಾಬಿ ನಡೆಸಿದ್ದಾರೆ. ಅಲ್ಲದೇ, ನಿವೃತ್ತ ಸೈನಿಕ ಶಿವಾನಂದ ಪಾಟೀಲ ಅವರೂ ಸಹ ಸಿಂದಗಿ ಟಿಕೆಟ್‌ ಗಿಟ್ಟಿಸಲು ಪ್ರಯತ್ನ ನಡೆಸಿದ್ದಾರೆ.

***

ಸಿಂದಗಿ ಕ್ಷೇತ್ರಕ್ಕೆ ಸ್ಪರ್ಧಿಸಲು ವೈಯಕ್ತಿಕವಾಗಿ ನಾನು ಅಪೇಕ್ಷಿತನಲ್ಲ. ಈಗಾಗಲೇ ನಾನು ಪಕ್ಷದ ವರಿಷ್ಠರಿಗೆ ಅಭಿಪ್ರಾಯ ತಿಳಿಸಿರುವೆ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧನಿದ್ದೇನೆ

–ಅರುಣ ಶಹಾಪುರ, ವಿಧಾನ ಪರಿಷತ್‌ ಸದಸ್ಯ

***

ಪ್ರಬಲ ಆಕಾಂಕ್ಷಿ ಇದ್ದೇನೆ. ಮೂರು ಬಾರಿ ಸ್ಪರ್ಧಿಸಿ ಎರಡು ಬಾರಿ ಗೆಲುವು ಸಾಧಿದ್ದೇನೆ. ಒಮ್ಮೆ ಸೋತರೂ ಕ್ಷೇತ್ರದಲ್ಲಿ ಜನರ ಒಡನಾಟ ಇಟ್ಟುಕೊಂಡು ಬಂದಿರುವೆ. ನನಗೆ ಟಿಕೆಟ್‌ ಸಿಗುವ ವಿಶ್ವಾಸವಿದೆ

–ರಮೇಶ ಭೂಸನೂರು,ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT