ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿ ದಸರಾಕ್ಕೆ ನಾಲ್ಕು ದಶಕದ ಸಂಭ್ರಮ

Last Updated 27 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಸಿಂದಗಿ: ಪಟ್ಟಣದ ಹಳೆಯ ಬಜಾರದಲ್ಲಿ ದಸರಾ ಆಚರಣೆ ಸಂಭ್ರಮ 45 ವರ್ಷಗಳಿಂದ ಸಾಗಿ ಬಂದಿದೆ.

1977-78 ರಲ್ಲಿ ದಿವಂಗತ ಎಂ.ಎಸ್.ಬೊಮ್ಮಣ್ಣಿ ವಕೀಲ, ಗುರುಲಿಂಗಪ್ಪ ವಡ್ಡೋಡಗಿ ಹಾಗೂ ಬಿ.ಎಸ್.ಬಗಲಿ, ಸೋಮನಗೌಡ ಬಿರಾದಾರ, ಚಂದ್ರಶೇಖರ ಲೋಣಿ, ಷಣ್ಮುಖಪ್ಪ ಸಂಗಮ, ಅಶೋಕ ವಾರದ, ಮೈನೂ ಮಸಾಲಿ, ಶ್ರೀಕಾಂತ ಹತ್ತಿ ಇವರನ್ನೊಳಗೊಂಡು ಸಮಾನ ಮನಸ್ಕರ ಯುವಕರು ದಸರಾ ಸಂದರ್ಭದಲ್ಲಿ ದೇವಿ ಉತ್ಸವ ಪ್ರಾರಂಭಿಸಿದರು.

ದೇವಿಯ ಮೂರ್ತಿ ಪ್ರತಿಷ್ಠಾಪನೆಗೊಳಿಸಿ 11 ದಿನಗಳ ಕಾಲ ಬಯಲಾಟ, ದೇವಿ ದೊಡ್ಡಾಟ, ಗೀಗೀಪದ, ಡೊಳ್ಳಿನಪದ, ಶಾಲಾ-ಮಕ್ಕಳಿಂದ ಸಾಮೂಹಿಕ ನೃತ್ಯ, ನಾಟಕ ಹೀಗೆ ಹತ್ತು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಬಂದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮವೂ ಕೂಡ ಮಾಡುತ್ತಿದ್ದರು.
ಇಡೀ ಪಟ್ಟಣದಲ್ಲಿ ಅಂದಿನಿಂದ ಇಂದಿನವರೆಗೂ ದಸರಾ ಉತ್ಸವವನ್ನು ಯುವಕರು ಅತ್ಯಂತ ಅತ್ಯುತ್ಸಾಹದಿಂದ ಮಾಡುತ್ತಿದ್ದಾರೆ.

ಮನಸ್ಸಲ್ಲಿ ಭಕ್ತಿ ಮೂಡಿಸುವಂಥ ದೇವಿ ಮೂರ್ತಿ ಅಂದಿನಿಂದ ಇಂದಿನವರೆಗೂ ಅದೇ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದ್ದಾರೆ. ಉತ್ಸವ ಸಂಪನ್ನಗೊಂಡ ನಂತರ ಮೂರ್ತಿಯನ್ನು ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ನಿರ್ಮಾಣಗೊಂಡ ಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.

ಅನೀಲಗೌಡ ಹೊನ್ನಪ್ಪಗೌಡ ಬಿರಾದಾರ ಹಲವಾರು ವರ್ಷಗಳ ಹಿಂದೆ ದೇವಿಯ ಅಲಂಕಾರಕ್ಕಾಗಿ ಆರು ಕಿಲೋದಷ್ಟು ಬೆಳ್ಳಿಯಿಂದ ಸಿದ್ಧಪಡಿಸಿದ ತ್ರಿಶೂಲ, ಖಡ್ಗ, ಗದೆ, ಕಿರೀಟ, ಟೊಂಕದಪಟ್ಟಿ ನೀಡಿ ಭಕ್ತಿಭಾವ ಮೆರೆದಿದ್ದಾರೆ.

ಅದೇ ರೀತಿ ಅಪಾರ ಬಂಗಾರದ ಆಭರಣಗಳನ್ನು ದೇವಿಗೆ ತೊಡಿಸಿ ದೀರ್ಘದಂಡ ಪ್ರಣಾಮಗಳ ಭಕ್ತಿಯ ಭಾವ ಮೆರೆಯುವುದು. ನಿತ್ಯ ದೇವಿಯ ಪೂಜೆ ಅರ್ಚಕ ಶಿವಯ್ಯ ಹಿರೇಮಠ ಅವರಿಂದ ನಡೆಯುತ್ತದೆ.

ಕಳೆದ 34 ವರ್ಷಗಳಿಂದ ದಸರಾ ಉತ್ಸವವನ್ನು ಯುವ ಪಡೆ ಅನೀಲ ಕಡಕೋಳ ಮತ್ತು ಶಂಬೇವಾಡ, ಶೇಖರ ಮಾಡಬಾಳ, ರಾಜೂ ಬೋರಗಿ, ಸಂತೋಷ ಚಂದಾ, ಕುಮಾರ ಬೋರಗಿ, ಲಕ್ಷ್ಮಣ ಶಂಬೇವಾಡ, ಜಟ್ಟು ಶಂಬೇವಾಡ, ಗೊಲ್ಲಾಳಪ್ಪ ವಮ್ಮಾ, ಬಸೂ ಬೋರಗಿ ಇವರು ಅತ್ಯಂತ ವಿಜ್ರಂಬಣೆಯಿಂದ ಉತ್ಸವ ಆಚರಿಸುತ್ತಿದ್ದಾರೆ.

11 ದಿನಗಳ ಕಾಲ ನಿರಂತರ ಕಾರ್ಯಕ್ರಮಗಳೊಂದಿಗೆ ಸಾವಿರಾರು ಸಂಖ್ಯೆಯ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಿರಂತರವಾಗಿ ಮುಂದುವರೆದುಕೊಂಡು ಬಂದಿದೆ.
ನಿತ್ಯ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಿಯ ದರ್ಶನಾಶೀರ್ವಾದ ಪಡೆದುಕೊಳ್ಳುತ್ತಾರೆ.
ಪ್ರಸ್ತುತ ವರ್ಷ ದೇವಿಯ ಉತ್ಸವದಲ್ಲಿ ದೇವಿಯ ಸನ್ನಿಧಾನದಲ್ಲಿ ದಿವಂಗತ ಪುನೀತ್‌ ರಾಜಕುಮಾರ ಅವರ ಭಾವಚಿತ್ರ ಕೂಡ ಪೂಜಿಸಲಾಗುತ್ತಿರುವುದು ವಿಶೇಷವಾಗಿದೆ.

ಸಿಂದಗಿಯಲ್ಲಿ ದೇವಿ ಉತ್ಸವ ಸಾಂಸ್ಕೃತಿಕ, ಧಾರ್ಮಿಕ ಚಟುವಟಿಕೆಗಳ ಕೇಂದ್ರ ಬಿಂದು ಆಗಿ ಮುಂದುವರೆದುಕೊಂಡು ಹೊರಟಿದೆ. ಯುವಕರಲ್ಲಿ ಸಂಸ್ಕಾರ, ಭಕ್ತಿ ಹೆಚ್ಚಿಸುವ ಕಾರ್ಯ ಮಾಡಲಾಗುತ್ತಿದೆ.

- ಬಿ.ಎಸ್.ಬಗಲಿ,ವಕೀಲರು, ಉತ್ಸವ ಸಂಸ್ಥಾಪಕ

ಮುಂಬರುವ ಕೆಲವೇ ವರ್ಷಗಳಲ್ಲಿ ದೇವಿ ಉತ್ಸವ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುವ ಸಂದರ್ಭದಲ್ಲಿ ಬೆಳ್ಳಿ ದೇವಿ ಮೂರ್ತಿ ಪ್ರತಿಷ್ಠಾಪಿಸುವ ಸಂಕಲ್ಪ ಹೊಂದಲಾಗಿದೆ.
– ಅನೀಲ ಕಡಕೋಳ, ಉತ್ಸವದ ರೂವಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT