ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿ ಚುನಾವಣೆ: 9 ದಿನ ಪ್ರಚಾರ-ಎಚ್.ಡಿ.ದೇವೇಗೌಡ

ಜೆಡಿಎಸ್ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್.ಡಿ.ದೇವೇಗೌಡ
Last Updated 12 ಅಕ್ಟೋಬರ್ 2021, 15:16 IST
ಅಕ್ಷರ ಗಾತ್ರ

ಸಿಂದಗಿ(ವಿಜಪುರ): ವಿಧಾನಸಭೆ ಉಪಚುನಾವಣೆ ಜೆಡಿಎಸ್ ಪಕ್ಷದ ಅಭ್ಯರ್ಥಿ ನಾಜಿಯಾ ಅಂಗಡಿಯವರ ಚುನಾವಣಾ ಪ್ರಚಾರಕ್ಕಾಗಿ ಸಿಂದಗಿಯಲ್ಲಿ ಒಂಬತ್ತು ದಿನಗಳ ಕಾಲ ವಾಸ್ತವ್ಯ ಹೂಡಿ ಹಳ್ಳಿ-ಹಳ್ಳಿಗೂ ಸಂಚರಿಸಿ ಮುಖ್ಯಮಂತ್ರಿಯಾಗಿದ್ದಾಗ ಮತ್ತು ನೀರಾವರಿ ಸಚಿವನಾಗಿದ್ದಾಗ ಈ ಭಾಗಕ್ಕೆ ಮಾಡಿದ ಕೆಲಸಗಳನ್ನು ನಿವೇದಿಸಿ ಮತ ಕೇಳುವೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು.

ಸಿಂದಗಿಯಲ್ಲಿ ಮಂಗಳವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ನಮ್ಮ ಪಕ್ಷಕ್ಕೆ ಕಾಂಗ್ರೆಸ್-ಬಿಜೆಪಿ ಎದುರಾಳಿಗಳು ಇದ್ದಾರೆ. ಯಾವುದೇ ದಾಕ್ಷಿಣ್ಯ ಇಲ್ಲದೇ ಚುನಾವಣಾ ಹೋರಾಟ ಮಾಡಲಾಗುವುದು. ಯಾವುದೇ ಪಕ್ಷ ಗುರಿ ಇಟ್ಟುಕೊಂಡು ಚುನಾವಣೆ ಮಾಡುವುದಿಲ್ಲ. ಪಕ್ಷದ ಗೆಲುವಿಗೆ ಸ್ಥಳೀಯ ಪಕ್ಷದ ಮುಖಂಡರು ಒಟ್ಟಾಗಿ ಕೆಲಸ ಮಾಡಬೇಕು ಎಂದರು.

ಮತಕ್ಷೇತ್ರದಲ್ಲಿ ಒಂಬತ್ತು ಜನ ಜೆಡಿಎಸ್ ಆಕಾಂಕ್ಷಿಗಳಾಗಿದ್ದರು. ಈ ಭಾಗದಲ್ಲಿ ವಿದ್ಯಾಸಂಸ್ಥೆಯ ಮುಖಾಂತರ ಸಮಾಜದಲ್ಲಿ ಸದ್ಭಾವನೆ ಬೆಳೆಸಿಕೊಂಡು ಬಂದಿರುವ ಅಂಗಡಿ ಕುಟುಂಬದ ಮಹಿಳೆಗೆ ಒಟ್ಟಾಭಿಪ್ರಾಯದ ಮೇರೆಗೆ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ ಎಂದು ಹೇಳಿದರು.

ಎಂ.ಸಿ.ಮನಗೂಳಿ ಪುತ್ರ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುವುದಿಲ್ಲ. ನಮ್ಮ ಮೇಲೆ ಆಪಾದನೆ ಮಾಡಿದರೆ ಉತ್ತರ ಕೊಡುವ ಶಕ್ತಿ ಇದೆ. ಆವಾಗ್ಗೆ ಕೊಡುವೆ. ದಿವಂಗತ ಮನಗೂಳಿ ಅರನ್ನು ನಾವೇ ಬೆಳೆಸಿದ್ದೇವೆ ಅಂತ ಹೇಳುವುದಿಲ್ಲ. ಆದರೆ, ಅವರು ನಮ್ಮ ಒಡನಾಡಿಗಳಾಗಿದ್ದರೆಂದಷ್ಟೇ ಹೇಳಬಯಸುವೆ ಎಂದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ, ಈಗಾಗಲೇ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿಗೆ ನೋಟಿಸ್‌ ನೀಡಲಾಗಿದೆ. ಅಲ್ಲದೇ, ನಮ್ಮ ಪಕ್ಷದ ಆರೂ ಜನ ಸದಸ್ಯರು ಕಾಂಗ್ರೆಸ್ ಸೇರ್ಪಡೆಗೊಳ್ಳುವರು ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ. ಐದು ಜನ ಜೆಡಿಎಸ್ ಸದಸ್ಯರು ಶಾಂತವೀರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ಈಗಾಗಲೇ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಮಾನ-ಮರ್ಯಾದೆ ಇದ್ದರೆ ನಮ್ಮ ಪಕ್ಷ ತ್ಯಜಿಸಿದ ಕೂಡಲೇ ರಾಜೀನಾಮೆ ನೀಡಬೇಕಿತ್ತು ಎಂದು ತಿಳಿಸಿದರು.

ಶಾಸಕ ದೇವಾನಂದ ಚವ್ಹಾಣ ಮಾತನಾಡಿ, ದಿವಂಗತ ಎಂ.ಸಿ.ಮನಗೂಳಿ ಅವರು ದೇವೇಗೌಡ ಅವರ ಖಾಸ ಶಿಷ್ಯರಾಗಿದ್ದರು. ಮನಗೂಳಿ ಮನೆತನ ದೇವೇಗೌಡ ಮನೆತನಕ್ಕೆ ತುಂಬಾ ನೋವು ಕೊಟ್ಟಿದೆ. ಇದಕ್ಕೆ ಪ್ರಸ್ತುತ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ದೇವೇಗೌಡರು ಗೋಲಗೇರಿಯ ಗೊಲ್ಲಾಳಪ್ಪಗೌಡ ಪಾಟೀಲ ಅವರನ್ನು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷರು ಎಂದು ಘೋಷಣೆ ಮಾಡಿದರು.

ಜೆಡಿಎಸ್ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಜಾಫರ್‌ ಉಲ್ಲಾ ಖಾನ್, ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ, ಬಿ.ಜಿ.ಪಾಟೀಲ ಹಲಸಂಗಿ, ಕೇದಾರಲಿಂಗಯ್ಯ ಹಿರೇಮಠ, ಅರವಿಂದ ಹಂಗರಗಿ, ರಾಜುಗೌಡ ಪಾಟೀಲ, ಮಂಗಳಾದೇವಿ ಬಿರಾದಾರ, ಗೊಲ್ಲಾಳಪ್ಪಗೌಡ ಪಾಟೀಲ, ಗುರಲಿಂಗಪ್ಪಗೌಡ ಪಾಟೀಲ ಚಾಂದಕವಠೆ, ಶಿವಾನಂದ ಕೋಟಾರಗಸ್ತಿ ಇದ್ದರು.

***

ಎಂ.ಸಿ.ಮನಗೂಳಿಯವರಿಗೆ ದ್ರೋಹ ಮಾಡಿಲ್ಲ. ರಾಜಕೀಯ ಅತಂತ್ರ ಸ್ಥಿತಿ ಇದ್ದಾಗ್ಯೂ ಮಂತ್ರಿ ಮಾಡಿದ್ದರೂ ಅವರನ್ನು ಸರಿಯಾಗಿ ನಡೆಯಿಸಿಕೊಂಡಿಲ್ಲ ಎಂಬುದಾಗಿ ಮನಗೂಳಿ ಪುತ್ರರೊಬ್ಬರು ಹೇಳಿರುವುದು ಸರಿಯಲ್ಲ. ಆ ದೇವರೇ ನೋಡಿಕೊಳ್ಳಲಿ
–ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT