ಸಿಂದಗಿ: ನಗರದಲ್ಲಿ ಬಡವರಿಗೆ ಸರ್ಕಾರದ ಆಶ್ರಯ ಯೋಜನೆಯಡಿ ದೊರಕಬೇಕಾದ ಸೂರು ಮರೀಚಿಕೆಯಾಗಿದೆ. ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ 104 ಮನೆಗಳು ನಿರ್ಮಾಣಗೊಂಡರೂ ಫಲಾನುಭವಿಗಳು ವಾಸ ಮಾಡಲು ಆಗುತ್ತಿಲ್ಲ.

ನಗರದಿಂದ ಏಳು ಕಿ.ಮೀ ದೂರದಲ್ಲಿರುವ ಅಂತರಗಂಗಿ ಆಶ್ರಯ ಯೋಜನೆಯ ಮನೆಗಳಿಗಾಗಿ ನಗರಸಭೆ ಹಲವಾರು ವರ್ಷಗಳ ಹಿಂದೆ 10 ಎಕರೆ ಜಮೀನಿನಲ್ಲಿ 411 ಪ್ಲಾಟ್ಗಳನ್ನು ಮಾಡಿತ್ತು. ಇದರಲ್ಲಿ ಎರಡು ವರ್ಷಗಳ ಹಿಂದೆ 178 ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಆದರೆ ಅಂತರಗಂಗಿ ಆಶ್ರಯ ಬಡಾವಣೆ ವಾಸಿಸಲು ಯೋಗ್ಯವಲ್ಲದ ಸ್ಥಳವಾಗಿದೆ. ಇಲ್ಲಿ ಯಾವೊಂದು ಮೂಲ ಸೌಲಭ್ಯಗಳೂ ಇಲ್ಲ.

ನಗರದ 23 ವಾರ್ಡ್ಗಳಲ್ಲಿ ಒಂಬತ್ತು ಪ್ರದೇಶಗಳನ್ನು ಕೊಳೆಗೇರಿ ಪ್ರದೇಶ ಎಂದು ಗುರುತಿಸಲಾಗಿದೆ. ಅದರಲ್ಲಿ ವಿದ್ಯಾನಗರ ಕೊಳಚೆ ಪ್ರದೇಶ ಕೂಡ ಒಂದಾಗಿದೆ. 2019 ರಲ್ಲಿ ಮಾಜಿ ಸಚಿವ ದಿವಂಗತ ಎಂ.ಸಿ.ಮನಗೂಳಿಯವರು ಶಾಸಕರಾಗಿದ್ದ ಅವಧಿಯಲ್ಲಿ ಕೊಳೆಗೇರಿ ಮನೆಗಳ ಕಾರ್ಯ ಪ್ರಾರಂಭಗೊಂಡು ರಮೇಶ ಭೂಸನೂರ ಶಾಸಕರಾಗಿದ್ದ ಸಂದರ್ಭದಲ್ಲೂ ಕೊಳೆಗೇರಿ ಮನೆಗಳ ನಿರ್ಮಾಣದ ಬಗ್ಗೆ ಪ್ರಯತ್ನ ಮುಂದುವರೆದಿತ್ತು. ಭೂಸನೂರ ಅವರು ಅಲ್ಲಿ ಶೆಡ್ಡುಗಳನ್ನು ಹಾಕಿಕೊಂಡು ವಾಸಿಸುತ್ತಿದ್ದವರಿಗೆ ಮನವೊಲಿಸಿ ಪ್ರದೇಶವನ್ನು ಖಾಲಿಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಅಂದಿನಿಂದ ಮನೆಗಳ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡು ಈಗ ಪೂರ್ಣಗೊಂಡಿವೆ.

2026ರ ಜನವರಿ 24 ರಂದು ಶಾಸಕ ಅಶೋಕ ಮನಗೂಳಿ ಕೊಳೆಗೇರಿ ಪ್ರದೇಶದ 104 ಮನೆಗಳ ಉದ್ಘಾಟಿಸಿದರೂ ಫಲಾನುಭವಿಗಳಿಗೆ ವಾಸ ಮಾಡುವ ಮುಹೂರ್ತ ಕೂಡಿ ಬಂದಿಲ್ಲ. ಅಂದೇ ಹಕ್ಕುಪತ್ರಗಳನ್ನು ವಿತರಿಸಬೇಕಿತ್ತು. ಅದನ್ನು ಮುಂದೂಡಿದರು. ಕೊಳೆಗೇರಿ ಮನೆಗಳಿಗೆ ಮೂಲ ಸೌಲಭ್ಯಗಳಿಲ್ಲ. ನಾಮಕಾವಾಸ್ತೆ ಕೆಲ ವಿದ್ಯುತ್ ಕಂಬಗಳಿವೆ. ಅದಕ್ಕೆ ತಂತಿಗಳೆ ಇಲ್ಲ. ಶೌಚಾಲಯ ಇದೆ. ಆದರೆ ಒಳಚರಂಡಿ ಇಲ್ಲ, ಕುಡಿಯುವ ನೀರಿಲ್ಲ. ಮನೆಯ ಮೇಲೆ ನೀರು ಸಂಗ್ರಹ ಸಿಂಟೆಕ್ಸ್ ಗಳಿಲ್ಲ. ಹೀಗೆ ಇಲ್ಲಗಳ ಮಧ್ಯೆ ವಾಸ ಮಾಡುವುದಾದರೂ ಹೇಗೆ...?ಎಂಬುದು ಫಲಾನುಭವಿಗಳ ಅಳಲು.

ಅಂತರಗಂಗಿ ಆಶ್ರಯ ಬಡಾವಣೆಯಲ್ಲಿ ನಂಬರವುಳ್ಳ ಕಲ್ಲು ಬಿಟ್ಟರೆ ಬರೀ ಮುಳ್ಳಿನ ಕಂಟಿಗಳಿವೆ. ನಗರದ ಸ.ನಂ 842/2*2 ರಲ್ಲಿ 15-20 ವರ್ಷಗಳಿಂದ ಅಂದಿನ ಪುರಸಭೆಯಿಂದ ಹಕ್ಕುಪತ್ರ ಪಡೆದುಕೊಂಡು 84 ಕುಟುಂಬಗಳು ವಾಸ ಮಾಡುತ್ತಿದ್ದ ಮನೆ, ಶೆಡ್ ಗಳನ್ನು ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ, ಪುರಸಭೆ ಜಂಟಿಯಾಗಿ ತೆರವುಗೊಳಿಸಲಾಗಿದ್ದು ಅಲ್ಲಿರುವ ನಿವಾಸಿಗಳು ಈಗ ಬೀದಿಪಾಲಾಗಿದ್ದಾರೆ. ಇನ್ನೂವರೆಗೂ 84 ಬಡ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿವೆ.

84 ಕುಟುಂಬಗಳು ಮನೆ ಕಟ್ಟಲು ಸ್ವಂತ ಖರ್ಚಿನಿಂದ ಜಮೀನು ಖರೀದಿಸುತ್ತಿದ್ದರೆ, ಒಂದು ಎಕರೆಗೆ ತಗಲುವ ₹30 ಲಕ್ಷ ವೈಯಕ್ತಿಕವಾಗಿ ನೀಡುವುದಾಗಿ ಶಾಸಕ ಅಶೋಕ ಮನಗೂಳಿ ಬಹಿರಂಗವಾಗಿ ಭರವಸೆ ನೀಡಿದ್ದರು. ಆದರೆ ಖರೀದಿಸುವ ಜಮೀನು ಎಂ.ಸಿ.ಮನಗೂಳಿ ಪ್ರತಿಷ್ಠಾನದ ಹೆಸರಿಗೆ ರಿಜಿಸ್ಟ್ರೇಷನ್ ಮಾಡಿಸಬೇಕೆಂಬ ಷರತ್ತು ಹಾಕಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ಫಲಾನುಭವಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-26-133011692

ಯಾರು ಏನಂತಾರೆ...

ಸಿಂದಗಿ ನಗರದ ಮುಫತ್ ಗಾಯರಾಣ (ಜಿ.ಎಸ್.ಎಂ) ಜಮೀನು ರಿ.ಸ ನಂ.763 ಕ್ಷೇತ್ರ 8 ಎಕರೆ ಸ್ಮಶಾನದ ಹೆಸರಿನಲ್ಲಿರುವ ಜಮೀನಿನಲ್ಲಿ ಕೊಳಗೇರಿ ಮಂಡಳಿ 104 ಮನೆಗಳನ್ನು ಕಟ್ಟಿದ್ದಾರೆ. ಹೀಗಾಗಿ ಈಗ ತಾಂತ್ರಿಕ ಸಮಸ್ಯೆ ಎದುರಾಗಿದ್ದರಿಂದ ಹಕ್ಕುಪತ್ರ ನೀಡಲು ವಿಳಂಬವಾಗಿದೆ. ಈಗಾಗಲೇ ಜಿಲ್ಲಾಧಿಕಾರಿ ಜೊತೆ ಸಭೆ ನಡೆಸಲಾಗಿದೆ. ಆದಷ್ಟು ಬೇಗನೇ ಈ ಜಮೀನು ಕೊಳಗೇರಿ ಮಂಡಳಿಗೆ ಹಸ್ತಾಂತರಗೊಳ್ಳುತ್ತದೆ. ಈ ಮನೆಗಳ ಹಕ್ಕುಪತ್ರಗಳ ಹಂಚಿಕೆ ಜೊತೆಗೆ ಹೆಚ್ಚುವರಿ 196 ಮನೆಗಳು ಒಟ್ಟು 300 ಮನೆಗಳ ಹಕ್ಕುಪತ್ರಗಳನ್ನು ಏಕಕಾಲದಲ್ಲಿ ವಿತರಿಸಲಾಗುವುದು.

ಅಶೋಕ ಮನಗೂಳಿ, ಶಾಸಕ, ಸಿಂದಗಿ ಮತಕ್ಷೇತ್ರ

ಹಿಂದೂ ಸ್ಮಶಾನ ಎಂದು ನಮೂದಾಗಿರುವ 8 ಎಕರೆ ಕಂದಾಯ ಇಲಾಖೆಯ ಜಮೀನನ್ನು ಕೊಳಗೇರಿ ಮಂಡಳಿಗೆ ವರ್ಗಾವಣೆಗೊಳಿಸುವ ಕುರಿತಾಗಿ ಮೇಲಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. 2-3 ದಿನಗಳಲ್ಲಿ ವರ್ಗಾವಣೆಗೊಳ್ಳುವ ಸಾಧ್ಯತೆ ಇದೆ.

ಕರೆಪ್ಪ ಬೆಳ್ಳಿ, ತಹಶೀಲ್ದಾರ್, ಸಿಂದಗಿ

2022ರಲ್ಲಿಯೇ ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿ ನೋಂದಣಿ ಪತ್ರ ನೀಡಿದೆ. ಮಾರ್ಗಸೂಚಿ ಪ್ರಕಾರ ಈಗಾಗಲೇ ₹1.04 ಲಕ್ಷ ಜೊತೆಗೆ ಹಕ್ಕುಪತ್ರಕ್ಕಾಗಿ 2 ಸಾವಿರ ಮಂಡಳಿಗೆ ಭರಣ ಮಾಡಲಾಗಿದೆ. ಇನ್ನೂ ₹9 ಸಾವಿರ ವಿದ್ಯುತ್ ಮೀಟರ್ಗಾಗಿ ಬೇಡಿಕೆ ಇಡಲಾಗಿದೆ. ರಫೀಕ ನದಾಫ, ಫಲಾನುಭವಿ

ಈ ಹಿಂದೆ ಶಾಸಕರು ಅವರ ತಂದೆ ಮಾಜಿ ಸಚಿವ ದಿವಂಗತ ಎಂ.ಸಿ.ಮನಗೂಳಿಯವರ ಪುಣ್ಯತಿಥಿ ದಿನದಂದು ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡಿ ಅದೆಷ್ಟೋ ತಿಂಗಳುಗಳಾದವು. ವಿಪರೀತ ಬಿಸಿಲಲ್ಲಿ ಪತ್ರಾಸ್ ಶೆಡ್ಗಳಲ್ಲಿ ವಾಸ ಮಾಡುವ ನಮ್ಮ ಕಷ್ಟ ಐಶಾರಾಮಾಗಿ ತಣ್ಣಗೆ ಮನೆಯಲ್ಲಿ ಮಲಗುವ ಅವರಿಗೆ ಏನು ಗೊತ್ತಾಗುತ್ತದೆ.

ಎ.ಎಸ್.ಭಜಂತ್ರಿ, ಫಲಾನುಭವಿ

ಮನೆಗಳ ಕಿಟಕಿ ಗ್ಲಾಸ್ಗಳನ್ನು ಕಿಡಿಗೇಡಿಗಳು ಒಡೆದು ಹಾಕುತ್ತಿದ್ದಾರೆ. ಕಳಪೆಮಟ್ಟದ ಬಾಗಿಲುಗಳನ್ನು ಹಾಕಿದ್ದಾರೆ, ಯಾರಾದರೂ ಕದ ಬಡೆದರೆ ಬಿದ್ದು ಹೋಗುತ್ತವೆ. ಮನೆಗಳಲ್ಲಿ ಈಗಲೇ ಬಿರುಕು ಕಾಣಿಸಿಕೊಂಡಿವೆ. ಇನ್ನೂ ವರ್ಷಗಳು ಮನೆಗಳ ಬಳಕೆ ಆಗದಿದ್ದರೆ ಮನೆಗಳು ಸಂಪೂರ್ಣ ಹಾಳಾಗಿ ಹೋಗುತ್ತವೆ. ಶಾಸಕರು, ಕೊಳೆಗೇರಿ ಮಂಡಳಿ ಅಧಿಕಾರಿಗಳು ಎಚ್ಚೆತ್ತುಕೊಂಡು ಫಲಾನುಭವಿಗಳಿಗೆ ಮನೆಗಳನ್ನು ಕೂಡಲೇ ಹಸ್ತಾಂತರಿಸಬೇಕು.

ಅಲ್ಲಿಸಾಬ ನದಾಫ್, ಫಲಾನುಭವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.