ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎಸ್‌ಎಲ್‌ಸಿ: ರಾಜ್ಯಕ್ಕೆ ವಿಜಯಪುರ ಜಿಲ್ಲೆ ಪ್ರಥಮ

ಶೇ 87.54 ರಷ್ಟು ಫಲಿತಾಂಶ; 625 ಅಂಕ ಪಡೆದ ವಿಜಯಪುರ ಜಿಲ್ಲೆಯ ಆರು ವಿದ್ಯಾರ್ಥಿಗಳು
Last Updated 19 ಮೇ 2022, 13:32 IST
ಅಕ್ಷರ ಗಾತ್ರ

ವಿಜಯಪುರ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 87.54 ರಷ್ಟು ಫಲಿತಾಂಶ ಗಳಿಸಿರುವ ವಿಜಯಪುರ ಜಿಲ್ಲೆಯು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದೆ.

ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಅಳಸಿಹಾಕಿ, ಶೈಕ್ಷಣಿಕವಾಗಿ ಪ್ರತಿ ವರ್ಷ ಮೊದಲ ಸ್ಥಾನ ಪಡೆಯುತ್ತಿದ್ದ ಉಡುಪಿ, ದಕ್ಷಿಣ ಕನ್ನಡ, ಶಿರಸಿಯನ್ನು ಹಿಂದಿಕ್ಕುವ ಮೂಲಕ ಬರದ ನಾಡು ವಿಜಯಪುರ ಜಿಲ್ಲೆ ಪ್ರಥಮ ಸ್ಥಾನ ಗಿಟ್ಟಿಸಿದೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎನ್‌.ವಿ.ಹೊಸೂರ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವರ್ಷಪೂರ್ತಿ ಶಿಕ್ಷಕರು ವಿಶೇಷ ತರಗತಿ, ಸರಣಿ ಪರೀಕ್ಷೆ ನಡೆಸುವ ಮೂಲಕ ಪರೀಕ್ಷೆಗೆ ಅಗತ್ಯ ಸಿದ್ಧತೆ ಮಾಡಿದ ಪರಿಣಾಮ ರಾಜ್ಯಕ್ಕೆ ಪ್ರಥಮ ಸ್ಥಾನ ಬರಲು ಸಾಧ್ಯವಾಯಿತು ಎಂದು ವಿಶ್ಲೇಷಿಸಿದರು.

‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮಗಳ ವೇಳೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಸಿಇಓ, ತಹಶೀಲ್ದಾರ್‌, ಉಪವಿಭಾಗಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಉತ್ತೇಜನಕಾರಿ ಮಾತುಗಳನ್ನು ಆಡುವ ಮೂಲಕ ಹುರಿದುಂಬಿಸಿದ್ದರು. ಇದಕ್ಕೆ ತಕ್ಕಂತೆ ಶಿಕ್ಷಕರು ಶ್ರಮ ವಹಿಸಿದ್ದ ಪರಿಣಾಮ ಜಿಲ್ಲೆ ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದರು.

31,733 ವಿದ್ಯಾರ್ಥಿಗಳು ಉತ್ತೀರ್ಣ:

ಪರೀಕ್ಷೆ ಬರೆದ 19,062 ಬಾಲಕರು, 17,189 ಬಾಲಕಿಯರು ಸೇರಿದಂತೆ ಒಟ್ಟು 36,251 ವಿದ್ಯಾರ್ಥಿಗಳಲ್ಲಿ 16,185 ಬಾಲಕರು, 15,548 ಬಾಲಕಿಯರು ಸೇರಿದಂತೆ31,733 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಚಡಚಣ ವಲಯ ಪ್ರಥಮ:

ಶೇ 91.68 ರಷ್ಟು ಫಲಿತಾಂಶ ಪಡೆದುಕೊಂಡಿರುವಚಡಚಣ ಶೈಕ್ಷಣಿಕ ವಲಯ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಉಳಿದಂತೆ ಸಿಂದಗಿ ಶೇ 89.85, ವಿಜಯಪುರ ಗ್ರಾಮೀಣ ಶೇ 89.85, ಇಂಡಿ ಶೇ 89.03, ಮುದ್ದೇಬಿಹಾಳ ಶೇ 88.83, ವಿಜಯಪುರ ನಗರ ಶೇ 83.83, ಬಸವನ ಬಾಗೇವಾಡಿ ವಲಯಕ್ಕೆ ಶೇ 82.09ರಷ್ಟು ಫಲಿತಾಂಶ ಲಭಿಸಿದೆ.

104 ಶಾಲೆಗಳಿಗೆ ಪೂರ್ಣ ಫಲಿತಾಂಶ:

ವಿಜಯಪುರ ಜಿಲ್ಲೆಯ 30 ಸರ್ಕಾರಿ, ಅನುದಾನಿತ 09, ಅನುದಾನ ರಹಿತ 65 ಪ್ರೌಢಶಾಲೆಗಳು ಸೇರಿದಂತೆ ಒಟ್ಟು 104 ಪ್ರೌಢಶಾಲೆಗಳು ಶೇ 100ರಷ್ಟು ಫಲಿತಾಂಶ ಪಡೆದುಕೊಂಡಿವೆ.

ಸರ್ಕಾರಿ ಶಾಲೆಗಳು ಶೇ 86.24, ಅನುದಾನಿತ ಶೇ 84.89 ಮತ್ತು ಅನುದಾನ ರಹಿತ ಶೇ 92.15ರಷ್ಟು ಫಲಿತಾಂಶ ಪಡೆದುಕೊಂಡಿವೆ.

ಆರು ವಿದ್ಯಾರ್ಥಿಗಳಿಗೆ 625 ಅಂಕ:

ವಿಜಯಪುರ ತಾಲ್ಲೂಕಿನ ಕಾರಜೋಳದ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರಾದ ಐಶ್ವರ್ಯ ಕಣಸೆ, ಸ್ವಾತಿ ಮಾಳೇದ, ವಿಜಯಪುರ ತಾಲ್ಲೂಕಿನ ಜುಮನಾಳ ಸರ್ಕಾರಿ ಪ್ರೌಢಶಾಲೆಯ ಅಮಿತ್‌ ಮಾದರ, ತಾಳಿಕೋಟೆ ತಾಲ್ಲೂಕಿನ ನಾಗರಬೆಟ್ಟದ ಆಕ್ಸ್‌ಫರ್ಡ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಯಲ್ಲಾಲಿಂಗ ಸೂಳಿಭಾವಿ, ಆಲಮೇಲ ತಾಲ್ಲೂಕಿನ ವಿಭೂತಿಹಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಶಿವಲೀಲಾ ದುರ್ಗೆ, ವಿಜಯಪುರ ನಗರದ ಇಟ್ಟಂಗಿಹಾಳದ ತುಂಗಳಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ರಕ್ಷಿತಾ ಚಿನಿವಾರ, ತಾಳಿಕೋಟೆಯ ಸರ್ವೋದಯ ವಿದ್ಯಾಪೀಠದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶ್ರೇಯಾ ದೇಸಾಯಿ 625ಕ್ಕೆ 625 ಅಂಗಳನ್ನು ಗಳಿಸುವ ಮೂಲಕ ರಾಜ್ಯದ 145 ಟಾಪರ್‌ಗಳ ಸಾಲಿನಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.

ಕಾರಜೋಳ ಅಭಿನಂದನೆ:

ವಿಜಯಪುರ ಜಿಲ್ಲೆ ಪ್ರತಿಭಾನ್ವಿತರ ತವರೂರು. ಆರು ವಿದ್ಯಾರ್ಥಿಗಳು 625 ಅಂಗಳನ್ನು ಪಡೆದು ಸಾಧನೆ ಮಾಡಿರುವುದು ಮಾದರಿಯಾಗಿದೆ, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಎಸ್‍ಎಸ್‍ಎಲ್‍ಸಿಯಲ್ಲಿ ಸಾಧನೆ ತೋರಿ ಜಿಲ್ಲೆಯ ಕೀರ್ತಿ ಹೆಚ್ಚಿಸಿರುವುದು ಅಭಿನಂದನೀಯ ಎಂದುಯುವ ಭಾರತ ಸಂಸ್ಥಾಪಕ ಅಧ್ಯಕ್ಷ ಉಮೇಶ ಕಾರಜೋಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸನ್ಮಾನ:

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಮತ್ತು ಕಾಂಗ್ರೆಸ್‌ ಮುಖಂಡ ಸೋಮನಾಥ ಕಳ್ಳಿಮನಿ, ಶಾಸಕ ದೇವಾನಂದ ಚವ್ಹಾಣ ಅವರ ಪುತ್ರ ಅಭಿನವ ಚವ್ಹಾಣ ಅವರು ಜುಮನಾಳದ ಅಮಿತ್‌ ಮಾದರಅವರ ಮನೆಗೆ ಭೇಟಿ ನೀಡಿ, ಅಭಿನಂದನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT