ಶನಿವಾರ, ಸೆಪ್ಟೆಂಬರ್ 25, 2021
29 °C
ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸಿದ್ಧತೆಗೆ ವಿಜಯಪುರ ಜಿಲ್ಲಾಡಳಿತದಿಂದ ವಿನೂತನ ಪ‍್ರಯೋಗ

ಪಾಲಕರ ಮೇಲ್ವಿಚಾರಣೆಯಲ್ಲಿ ಸರಣಿ ಪರೀಕ್ಷೆ

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜುಲೈ ಮೂರನೇ ವಾರದಲ್ಲಿ ನಡೆಯಲಿರುವ ಪ್ರಸಕ್ತ ಸಾಲಿನ ಎಸ್‌ಎಸ್ಎಲ್‌ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸ್ವರೂಪ ಬದಲಾವಣೆ ಮಾಡಿ, ಕೇವಲ ಎರಡು ಪರೀಕ್ಷೆ ಮಾಡಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸನ್ನದ್ಧಗೊಳಿಸಲು ‘ಪಾಲಕರ ಮೇಲ್ವಿಚಾರಣೆಯಲ್ಲಿ ಜಿಲ್ಲಾ ಹಂತದ ಸರಣಿ ಪರೀಕ್ಷೆ’ ನಡೆಸಲು ಜಿಲ್ಲಾಡಳಿತ ವಿನೂತನ ಪರೀಕ್ಷಾ ವಿಧಾನವನ್ನು ಹಮ್ಮಿಕೊಂಡಿದೆ.

ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢಶಾಲೆಯ ಎಸ್ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಜೂನ್‌ 29 ರಿಂದ ಜುಲೈ 14ರ ವರೆಗೆ ಪ್ರತಿ ಮಂಗಳವಾರ ಹಾಗೂ ಬುಧವಾರದಂದು ಬದಲಾದ ಪರೀಕ್ಷಾ ಮಾದರಿಯಲ್ಲಿ ಮೂರು ಬಾರಿ ಓಎಂಆರ್‌ ಬಳಸಿ ಸರಣಿ ಪರೀಕ್ಷೆ ನಡೆಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್‌.ವಿ.ಹೊಸೂರ ‘ಪ್ರಜಾವಾಣಿ’ಗೆ ತಿಳಿಸಿದರು.

ಎಸ್‌ಎಸ್‌ಎಲ್‌ಸಿ ಸರಣಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅವರ ಪಾಲಕರೇ ಮೇಲ್ವಿಚಾರಕರಾಗಿ ಅವರೊಂದಿಗೆ 3 ಗಂಂಟೆಗಳ ಕಾಲ ಇದ್ದು, ಅವರು ನಕಲು ಮುಕ್ತವಾಗಿ ಪರೀಕ್ಷೆ ಬರೆಯಲು ಪ್ರೇರೇಪಿಸಬೇಕು ಎಂದು ಅವರು ಮನವಿ ಮಾಡಿದರು.

ಪಾಲಕರು ತಮ್ಮ ಅಮೂಲ್ಯ ಸಮಯವನ್ನು ತಮ್ಮ ಮಕ್ಕಳ ಭವಿಷ್ಯ ಕಟ್ಟುವ ಶಿಕ್ಷಣ ಇಲಾಖೆಯ ಕಾರ್ಯಕ್ಕೆ ಕೈಜೋಡಿಸಿ, ಮಕ್ಕಳ ಕನಸನ್ನು ನನಸಾಗಿಸಲು ಸಹಕರಿಸಬೇಕು ಎಂದು ಹೇಳಿದರು.

ಪರೀಕ್ಷಾ ಮಾದರಿ:

ಪ್ರಶ್ನೆ ಪತ್ರಿಕೆ 1ರಲ್ಲಿ ಭಾಷಾ ವಿಷಯಗಳು (ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆ) ಇರಲಿದೆ. ಪ್ರತಿ ವಿಷಯಕ್ಕೆ 40 ಅಂಕಗಳಂತೆ ಒಟ್ಟು 120 ಅಂಕಗಳ ಪತ್ರಿಕೆ ಇರಲಿದ್ದು, 3 ಗಂಟೆ ಸಮಯ ನಿಗದಿ ಮಾಡಲಾಗಿದೆ ಎಂದರು.

ಪ್ರಶ್ನೆ ಪತ್ರಿಕೆ 2ರಲ್ಲಿ ಐಚ್ಛಿಕ ವಿಷಯಗಳು (ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ) ಇರಲಿವೆ. ಪ್ರತಿ ವಿಷಯಕ್ಕೆ 40 ಅಂಕಗಳಂತೆ ಒಟ್ಟು 120 ಅಂಕಗಳ ಪತ್ರಿಕೆ ಇರಲಿದ್ದು, 3 ಗಂಟೆ ಸಮಯ ನಿಗದಿ ಮಾಡಲಾಗಿದೆ ಎಂದು ಹೇಳಿದರು.

ಪ್ರತಿ ವಿಷಯವು 40 ಬಹು ಆಯ್ಕೆಯ ಪ್ರಶ್ನೆಗಳಿರುತ್ತವೆ ಹಾಗೂ ಉತ್ತ ಪತ್ರಿಕೆಯು ಓ.ಎಂ.ಆರ್‌ ರೂಪದಲ್ಲಿರುತ್ತದೆ ಎಂದು ತಿಳಿಸಿದರು.

ಪರೀಕ್ಷೆ ಬರೆಯಲಿರುವ 38,101 ವಿದ್ಯಾರ್ಥಿಗಳು 

ವಿಜಯಪುರ: ಜುಲೈ ಮೂರನೇ ವಾರದಲ್ಲಿ ನಡೆಯಲಿರುವ ಪ್ರಸಕ್ತ ಸಾಲಿನ ಎಸ್‌ಎಸ್ಎಲ್‌ಸಿ ಪರೀಕ್ಷೆಯನ್ನು ಜಿಲ್ಲೆಯ 38,101 ವಿದ್ಯಾರ್ಥಿಗಳು ಬರೆಯಲಿದ್ದಾರೆ.

18,686 ಬಾಲಕರು, 15 ಸಾವಿರ ಬಾಲಕಿಯರು ಸೇರಿದಂತೆ 33,686 ಹೊಸ ವಿದ್ಯಾರ್ಥಿಗಳ(ಫ್ರೆಶರ್ಸ್‌) ಹಾಗೂ 3120 ಬಾಲಕರು, 1295 ಬಾಲಕಿಯರು ಸೇರಿದಂತೆ 4415 ಪುನರಾವರ್ಥಿತ (ರಿಪೀಟರ್ಸ್‌) ವಿದ್ಯಾರ್ಥಿಗಳು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದಾರೆ ಎಂದು ಡಿಡಿಪಿಐ ಎನ್‌.ವಿ.ಹೊಸೂರ ತಿಳಿಸಿದರು.

ಕೋವಿಡ್‌ ಮಾರ್ಗಸೂಚಿಗಳ ಅನ್ವಯ ಜಿಲ್ಲೆಯಲ್ಲಿ ಈ ಬಾರಿ 189 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಕಳೆದ ಸಾಲಿಗಿಂತ ಈ ವರ್ಷ 65 ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಹೇಳಿದರು.

ಒಂದು ಕೊಠಡಿಯಲ್ಲಿ 12 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗುವುದು. ಪರೀಕ್ಷೆಗೆ ಹಾಜರಾಗುವ ಎಲ್ಲ ಮಕ್ಕಳಿಗೆ ಸಾಧ್ಯವಾದಷ್ಟು ಅವರ ಶಾಲೆಯ ಸಮೀಪದಲ್ಲಿಯೇ ಪರೀಕಷಾ ಕೇಂದ್ರವನ್ನು ರಚಿಸಲಾಗಿದೆ ಎಂದರು.

4387 ಸಿಬ್ಬಂದಿಯನ್ನು ಎಸ್‌ಎಸ್ಎಲ್‌ಸಿ ಪರೀಕ್ಷೆಗೆ ನಿಯೋಜಿಸಲಾಗಿದೆ. ಎಲ್ಲ ಸಿಬ್ಬಂದಿ ಕೋವಿಡ್‌ ಲಸಿಕೆ ಕಡ್ಡಾಯವಾಗಿ ಪಡೆಯಲು ಸೂಚನೆ ನೀಡಲಾಗಿದೆ. ಪರೀಕ್ಷೆಗೆ ಹಾಜರಾಗುವ ಎಲ್ಲ ಮಕ್ಕಳಿಗೆ ಮತ್ತು ಸಿಬ್ಬಂದಿಗೆ ಎನ್‌–95 ಮಾಸ್ಕ್‌ ನೀಡಲಾಗುವುದು ಎಂದು ತಿಳಿಸಿದರು.

ಎಸ್‌ಎಸ್‌ಎಲ್‌ಸಿ ಪೂರ್ವಭಾವಿ ಸಿದ್ಧತಾ ಪರೀಕ್ಷೆಯನ್ನು ಪಾಲಕರ ಮೇಲ್ವಿಚಾರಣೆಯಲ್ಲಿ ನಡೆಸುತ್ತಿರುವ ಸಂಬಂಧ ಎಲ್ಲ ಪರೀಕ್ಷಾರ್ಥಿಗಳ ಪೋಷಕರಿಗೆ ಇಲಾಖೆಯಿಂದ ಪತ್ರ ಬರೆದು, ಮನವಿ ಮಾಡಲಾಗಿದೆ

 –ಎನ್‌.ವಿ.ಹೊಸೂರ, ಉಪನಿರ್ದೇಶಕ

ಸಾರ್ವಜನಿಕ ಶಿಕ್ಷಣ ಇಲಾಖೆ, ವಿಜಯಪುರ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು