ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚೇಂದ್ರಿಯ ಇಲ್ಲದ ರಾಜ್ಯ ಸರ್ಕಾರ

ಸಂತ್ರಸ್ರರಿಗೆ ಪರಿಹಾರ ನೀಡಿಲ್ಲ: ಎಸ್.ಆರ್. ಪಾಟೀಲ ಆರೋಪ
Last Updated 28 ಅಕ್ಟೋಬರ್ 2020, 2:45 IST
ಅಕ್ಷರ ಗಾತ್ರ

ಇಂಡಿ: ಇಂಡಿ ತಾಲ್ಲೂಕಿನಲ್ಲಿ ಭೀಮಾ ನದಿಯ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಮಂಗಳವಾರ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಭೇಟಿ ನೀಡಿ ಹಾನಿ ವೀಕ್ಷಿಸಿದರು.

ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಇಂಡಿ ತಾಲ್ಲೂಕಿನಲ್ಲಿ ಭೀಮಾ ನದಿಯ ಪ್ರವಾಹದಿಂದ ರೈತರ ಬೆಳೆ, ಆಸ್ತಿ ,ಪಾಸ್ತಿ ಹಾನಿಯಾಗಿ ಜನರು ನಿರಾಶ್ರಿತರಾಗಿದ್ದಾರೆ. ಸಂತ್ರಸ್ತರಿಗೆ ಸರ್ಕಾರ ಈ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ರೈತರು ಬೆಳೆದ ಬೆಳೆ ಅಷ್ಟೇ ಅಲ್ಲ ಪ್ರವಾಹದಿಂದ ಭೂಮಿ ಸಹಿತ ಸವಕಳಿಯಾಗಿ ಮಣ್ಣು ಕೊಚ್ಚಿಕೊಂಡು ಹೋಗಿ ಸಾವಿರಾರು ಎಕರೆ ಬೆಳೆ ಹಾನಿಯಾಗಿ ರೈತರು ಕಷ್ಟದಲ್ಲಿದ್ದಾರೆ. ರೈತರ ಪಂಪ್‌ಸೆಟ್‌, ನೀರು ಎತ್ತುವ ಮೋಟಾರ್‌ಗಳಿಗೆ ಹಾನಿಯಾಗಿದೆ. ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟು ಹೋಗಿವೆ. ಜನತೆ ಕಷ್ಟದಲ್ಲಿ ಇದ್ದಾಗ ಸರ್ಕಾರ ಸ್ಪಂದಿಸಬೇಕಾಗಿರುವುದು ಧರ್ಮ. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರ ಬಂದರೆ ಸ್ವರ್ಗವನ್ನೇ ಧರಿಗಿಳಿಸುವದಾಗಿ ಘೋಷಣೆ ಮಾಡಿದ್ದೀರಿ. ಸ್ವರ್ಗ ಬೇಡ ರಾಜ್ಯದ ಜನತೆಯ ಹಿತರಕ್ಷಣೆ ಮಾಡಿ ಪುಣ್ಯಕಟ್ಟಿಕೊಳ್ಳಿ. ಈಗ ಎರಡೂ ಕಡೆ ಒಂದೇ ಸರ್ಕಾರವಿದ್ದರೂ ಜನತೆಯ ಸಮಸ್ಯೆಗಳಿಗೆ ಕಿವಿಗೊಡುತ್ತಿಲ್ಲ, ಸರ್ಕಾರಕ್ಕೆ ಪಂಚೇಂದ್ರಿಯಗಳಿಲ್ಲ ಎಂದು ಟೀಕಿಸಿದರು.

ರಾಜ್ಯದ 26 ಜನ ಸಂಸದರು ಸಂಕಷ್ಟದಲ್ಲಿರುವ ಜನತೆಯ ಬಗ್ಗೆ ಕಾಳಜಿವಹಿಸಬೇಕು. ರಾಜ್ಯದಲ್ಲಿ ಪ್ರವಾಹ ಬಂದು ಜನತೆ ಮನೆ, ಬೆಳೆ, ಗುಡಿಗುಂಡಾರ, ಭೂಮಿ ,ರಸ್ತೆ ಕಳೆದುಕೊಂಡು ನಿರಾಶ್ರಿತರಾಗಿ ಕಷ್ಟದಲ್ಲಿದ್ದಾರೆ ಎಂದು ಪ್ರಧಾನಮಂತ್ರಿಗಳ ಬಳಿ ಹೋಗಿ ಮನದಟ್ಟು ಮಾಡಿಸಿಬೇಕು. ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ವಿಜಯಪುರ ಜಿಲ್ಲೆಯಲ್ಲಿ 13,211 ಕೋಟಿ ಕೃಷಿ ಬೆಳೆ ಹಾನಿಯಾಗಿದ್ದು, ಸರ್ಕಾರ ಈ ಕೂಡಲೇ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಬೇಕು. ಪ್ರವಾಹದಿಂದ ತಾಲ್ಲೂಕಿನಲ್ಲಿ 28 ಗ್ರಾಮಗಳ ಜನತೆ ಸಂತ್ರಸ್ತರಾಗಿದ್ದಾರೆ. ಉಮರಜ ಭಾಗದಲ್ಲಿ 600 ವರ್ಷದ ಹಳೆಯ ದೇವಸ್ಥಾನ ಸೇರಿದಂತೆ ಬ್ಯಾರೇಜ್ ,ರಸ್ತೆ ,ಸೇತುವೆ, ಅಂಗನವಾಡಿ ,ಶಾಲೆಗಳು ಹಾಳಾಗಿವೆ.

ಮನಕಲಕುವ ವಿಚಾರವೆಂದರೆ ಜಿಲ್ಲೆಯಲ್ಲಿ ಯಾವುದೇ ಗೋಶಾಲೆ ಆರಂಭಿಸಿಲ್ಲ. ಜಾನುವಾರಗಳಿಗೆ ಮೇವಿನ ವ್ಯವಸ್ಥೆ ಮಾಡಿಲ್ಲ. ಜಾನುವಾರುಗಳು ಮೇವಿಲ್ಲದೇ ಸಂಕಷ್ಟದಲ್ಲಿವೆ. ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಕಾಳಜಿ ಕೇಂದ್ರಗಳು ನಿಷ್ಕಾಳಜಿ ಕೇಂದ್ರಗಳಾಗಿವೆ ಎಂದು ಆರೋಪಿಸಿದರು.

ಸೊನ್ನ ಗ್ರಾಮದ ಬ್ಯಾರೇಜ್‌ ನೀರು ನಿರ್ವಹಣೆಯ ಲೋಪ ಎದ್ದು ಕಾಣುತ್ತಿದೆ. ಅಧಿಕಾರಿಗಳು ಮುಂದಾಲೋಚನೆ ಮಾಡಿ ಬ್ಯಾರೇಜ್‌ನಿಂದ ನೀರು ಬಿಡುಗಡೆ ಮಾಡಬೇಕಾಗಿತ್ತು. ಅದರಲ್ಲಿ ವೈಫಲ್ಯ ಎದ್ದು ಕಾಣುತ್ತಿದೆ ಎಂದರು.

ಪ್ರವಾಹ ಸಂದರ್ಭದಲ್ಲಿ ವಿಕ್ಷಣೆಗೆ ಎಂದು ಬಂದ ಬಿಜೆಪಿ ಉಸ್ತುವಾರಿಗಳು ಈ ಕೂಡಲೇ ₹ 10 ಸಾವಿರ ಪರಿಹಾರ ನೀಡುವದಾಗಿ ಘೋಷಣೆ ಮಾಡಿದ್ದಾರೆ. ಅದರೆ ಸರ್ಕಾರ ಕೆಲವರಿಗೆ ಮಾತ್ರ ನೀಡಿದ್ದು, ಇನ್ನೂ ಕೆಲವರಿಗೆ ನೀಡಿಲ್ಲ. ತೋಟದ ವಸ್ತಿ ಮನೆಗಳಿಗೂ ಕೂಡಾ ಭೇಟಿ ನೀಡಿ ಮನೆಗಳು ಬಿದ್ದ ಬಗ್ಗೆ ಸಮೀಕ್ಷೆ ಮಾಡಿ ಅವರಿಗೂ ಕೂಡಾ ಪರಿಹಾರದ ಹಣ ನೀಡಬೇಕೆಂದು ಒತ್ತಾಯಿಸಿದರು.

ಶಾಸಕ ಯಶವಂತರಾಯಗೌಡ ಪಾಟೀಲ, ಜಿ.ಪಂ. ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ತಾ.ಪಂ. ಅಧ್ಯಕ್ಷ ಅಣ್ಣಾರಾಯ ಬಿದರಕೋಟಿ, ಸಾಂಬಾಜಿರಾವ ಮಿಸಾಳೆ, ತಾ.ಪಂ. ಸದಸ್ಯ ಜೀತಪ್ಪ ಕಲ್ಯಾಣಿ, ತಾ.ಪಂ. ಮಾಜಿ ಅಧ್ಯಕ್ಷ ಶೇಖರ ನಾಯಕ, ಕಾಂಗ್ರೆಸ್ ಮುಖಂಡ ಸುರೇಶ ಗೊಣಸಗಿ, ಇಲಿಯಾಸ್ ಬೋರಾಮಣಿ, ಜಾವೀದ ಮೋಮಿನ, ಪ್ರಶಾಂತ ಕಾಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT