ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಲಸಿಕೆ ಪಡೆಯದಿದ್ದರೆ ಬೀದಿ ವ್ಯಾಪಾರಕ್ಕೆ ಅವಕಾಶವಿಲ್ಲ: ಡಿಸಿ ಪಿ. ಸುನೀಲ್ ಕುಮಾರ್

Last Updated 19 ಜೂನ್ 2021, 15:53 IST
ಅಕ್ಷರ ಗಾತ್ರ

ವಿಜಯಪುರ:ಬೀದಿ ಬದಿ ವ್ಯಾಪಾರಿಗಳು ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು. ಇಲ್ಲವಾದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಲಾಗುವುದಿಲ್ಲ. ಅಂತೆಯೇ, ಅಟೋ ಚಾಲಕರು ತಪ್ಪದೇ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ತಪ್ಪಿದಲ್ಲಿ ಅಟೊ ಚಾಲನೆ ಮಾಡಲು ಅವಕಾಶ ಕೊಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಎಚ್ಚರಿಕೆ ನೀಡಿದರು.

ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಶನಿವಾರ ನಡೆದ ವಿಡಿಯೊ ಸಂವಾದದಲ್ಲಿ18ರಿಂದ 44 ವರ್ಷ ವಯೋಮಾನದ ಅರ್ಹರಿಗೆ ನೀಡಲಾದ ಕೋವಿಡ್ ಲಸಿಕೆ ಕುರಿತು ಅವರು ಪ್ರಗತಿ ಪರಿಶೀಲನೆ ನಡೆಸಿದರು.

ಜಿಲ್ಲೆಯ ಮುಂಚೂಣಿ ಕಾರ್ಯಕರ್ತರು ವಿಶೇಷವಾಗಿ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತರು, ಸಹಾಯಕರು, ಬೀದಿಬದಿ ವ್ಯಾಪಾರಸ್ಥರು, ಆಟೋ, ಮ್ಯಾಕ್ಸಿಕ್ಯಾಬ್ ಚಾಲಕರು, ಬ್ಯಾಂಕ್ ಸಿಬ್ಬಂದಿ, ನಗರ ಸ್ಥಳೀಯ ವ್ಯಾಪ್ತಿಯಲ್ಲಿಯೇ ಸಿಬ್ಬಂದಿ, ಕಟ್ಟಡ ಕಾರ್ಮಿಕರು ಸೇರಿದಂತೆ ಅರ್ಹರಿಗೆ ಕೋವಿಡ್ ಲಸಿಕಾಕರಣ ಕಾರ್ಯ ಚುರುಕುಗೊಳಿಸಲು ಅವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕೋವಿಡ್ ಲಸಿಕಾಕರಣದಲ್ಲಿ ಶೇ 100 ರಷ್ಟು ಪ್ರಗತಿ ಸಾಧಿಸುವಂತೆ ಅವರು ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜೂನ್‌ 21 ರಿಂದ 45 ವರ್ಷ ಮೇಲ್ಪಟ್ಟ ಎಲ್ಲ ಅರ್ಹ ಫಲಾನುಭವಿಗಳು ಮೊದಲನೇ ಡೋಸ್ ಲಸಿಕೆ ಪಡೆಯಲು ಹಾಗೂ 2ನೇ ಡೋಸ್‌ಗೆ ಬಾಕಿ ಇರುವ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಮತ್ತು ರಾಜ್ಯ ಸರ್ಕಾರ ನಿಗದಿಪಡಿಸಿರುವ ಮುಂಚೂಣಿ ಕಾರ್ಯಕರ್ತರು ಮತ್ತು ಆದ್ಯತೆಯ ಗುಂಪಿನವರಿಗೆ ಲಸಿಕಾ ಬೃಹತ್‌ ಮೇಳವನ್ನು ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ಪ್ರಾಥಮಿಕ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರವಾರು ಅಧಿಕಾರಿಗಳು, ವೈದ್ಯರು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ತೋರಬಾರದು, ನೋಡಲ್ ಅಧಿಕಾರಿಗಳು ಪಿಎಚ್‌ಸಿಗಳಲ್ಲಿ ಲಭ್ಯವಿರಬೇಕು, ಈ ಕುರಿತು ನಿರಂತರ ನಿಗಾ ಇಡುವಂತೆ ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ್ ಕಳಸದ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ನೋಡಲ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT