ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಚ್ಚಿದ ಶಸ್ತ್ರ ಚಿಕಿತ್ಸೆ ಹೊಲಿಗೆ: ವರದಿ ಕೇಳಿದ ಉಪ ಲೋಕಾಯುಕ್ತ

ಜಿಲ್ಲಾಸ್ಪತ್ರೆಯ ತಾಯಿ, ಮಕ್ಕಳ ವಿಭಾಗಕ್ಕೆ ಭೇಟಿ, ಪರಿಶೀಲನೆ; ವೈದ್ಯಾಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ
Last Updated 21 ಮೇ 2022, 12:58 IST
ಅಕ್ಷರ ಗಾತ್ರ

ವಿಜಯಪುರ: ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆಯಾದ ಮಹಿಳೆಯರಿಗೆ ಹಾಕಲಾಗಿದ್ದ ಹೊಲಿಗೆ ಬಿಚ್ಚಿ ಸಮಸ್ಯೆಯಾದ ಇಲ್ಲಿನ ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳ ವಿಭಾಗಕ್ಕೆ ಉಪ ಲೋಕಾಯುಕ್ತ ಬಿ.ಎಸ್.ಪಾಟೀಲ ಶನಿವಾರ ಖುದ್ದು ಭೇಟಿ ನೀಡಿ,ಪರಿಶೀಲಿಸಿದರು.

ಶಸ್ತ್ರ ಚಿಕಿತ್ಸೆಗೆ ಒಳಗಾದ ಮಹಿಳೆಯರಿಗೆ ಏಕೆ ಹೊಲಿಗೆ ಬಿಚ್ಚಿತ್ತು. ಕೀವು, ಬಾವು ಸೋಂಕು ಕಾಣಿಸಿಕೊಳ್ಳಲು ಕಾರಣವೇನು ಎಂಬುದನ್ನು ಪತ್ತೆ ಹಚ್ಚಿದ್ದೀರಾ? ಎಂದು ಉಪ ಲೋಕಾಯುಕ್ತರು ವೈದ್ಯಾಧಿಕಾರಿಗೆ ಪ್ರಶ್ನಿಸಿದರು.

ಆಸ್ಪತ್ರೆಯಲ್ಲಿ ಆರು ತಿಂಗಳಿನಿಂದ ಸಿಜೇರಿಯನ್ ಮಾಡಿಸಿಕೊಂಡ ಮಹಿಳೆಯರ ಸಂಖ್ಯೆ ಎಷ್ಟು? ಹಿಂದೆ ಈ ರೀತಿ ಎಷ್ಟು ಜನರಿಗೆ ಸೋಂಕು ಕಾಣಿಸಿತ್ತು? ಅದಕ್ಕೆ ಏನು ಕಾರಣವಿತ್ತು? ಎಂಬುದರ ವಿವರವಾದ ವರದಿಯೊಂದನ್ನು ಕೂಡಲೇ ನೀಡುವಂತೆ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಕೇಳಿದರು.

ಲೋಪ ಒಪ್ಪಿಕೊಂಡ ವೈದ್ಯರು:

ಶಸ್ತ್ರ ಚಿಕಿತ್ಸೆಯಾದ ನಂತರ ಕೆಲವರಿಗೆ ಸೋಂಕು ಕಾಣಿಸುವುದು ಸಾಮಾನ್ಯ. ಸೋಂಕು ಕಾಣಿಸಿಕೊಂಡವರ ಪೈಕಿ ಈಗಾಗಲೇ ಬಹುತೇಕ ಮಹಿಳೆಯರ ಆರೋಗ್ಯ ಸುಧಾರಿಸಿದೆ. ಇನ್ನು ಕೆಲವರಿಗೆ ಮಾತ್ರ ಚಿಕಿತ್ಸೆ ನಡೆಯುತ್ತಿದೆ ಎಂದುಶಸ್ತಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ರಾಘವೇಂದ್ರ ಸಾವಳಗಿ ಮಾಹಿತಿ ನೀಡಿದರು.

ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಅದಕ್ಕೆ ತಕ್ಕಂತೆ ಮೂಲ ಸೌಕರ್ಯವಿಲ್ಲ. ವೈದ್ಯರು ಮತ್ತು ನರ್ಸ್‌ಗಳ ಕೊರತೆಯ ಕಾರಣದಿಂದ ಲೋಪವಾಗಿದೆ ಎಂದರು.

ಆಸ್ಪತ್ರೆಯಲ್ಲಿ ಸದ್ಯ ಒಂದೇ ಶಸ್ತ್ರಚಿಕಿತ್ಸಾ ಘಟಕ ಕಾರ್ಯನಿರ್ವಹಿಸುತ್ತಿದೆ. ಕೆಲವೇ ಶಸ್ತ್ರಚಿಕಿತ್ಸ ತಜ್ಞರು ಇದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದರು.

ಇಂತಹ ಸೋಂಕು ಪ್ರಕರಣಗಳಿಂದ ಸಾಕಷ್ಟು ತೊಂದರೆಯಾಗುತ್ತದೆ. ಕೆಲವರಿಗೆ ಕೀವು ಉಂಟಾಗಿ ಮಗುವಿಗೆ ಹಾಲುಣಿಸಲು ಕೂಡ ಆಗುವುದಿಲ್ಲ. ಇದರಿಂದ ಬಡವರ ಜೀವನಕ್ಕೆ ತೊಂದರೆಯಾಗುತ್ತದೆ. ಇಂತಹ ಅವಘಡಗಳು ಮತ್ತೆಂದೂ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ವೈದ್ಯಾಧಿಕಾರಿಗಳಿಗೆ ಉಪ ಲೋಕಾಯುಕ್ತರು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ವಿಜಯಮಹಾಂತೇಶ್‌ ಮಾತನಾಡಿ,ಸಿಜರಿಯನ್‌ಗೆ ಒಳಗಾದ ಮಹಿಳೆಯರಿಗೆ ಸೋಂಕು ಕಾಣಿಸಿಕೊಂಡ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಸಮಗ್ರ ಪರಿಶೀಲಿಸಲಾಗಿದೆ. ಈ ಸಂಬಂಧ ಸಮಿತಿಯೊಂದನ್ನು ರಚಿಸಿ ವರದಿ ತಯಾರಿಸಲಾಗಿದೆ. ಆಸ್ಪತ್ರೆಯಲ್ಲಿ ಈಗ ಕೇವಲ ಒಂದೇ ಶಸ್ತ್ರಚಿಕಿತ್ಸಾ ಘಟಕ ಕಾರ್ಯನಿರ್ವಹಿಸುತ್ತಿರುವುದರಿಂದಲೂ ಸೋಂಕು ಕಾಣಿಸಿಕೊಂಡ ಸಾಧ್ಯತೆ ಇದೆ. ಬೇರೆಯದಕ್ಕೆ ಬಳಸುತ್ತಿದ್ದ ಮತ್ತೊಂದು ಓಟಿಯನ್ನು ಶಸ್ತ್ರಚಿಕಿತ್ಸೆಗೆ ಬಳಸಲು ತಿಳಿಸಲಾಗಿದೆ ಎಂದು ಹೇಳಿದರು.

ಶಸ್ತಚಿಕಿತ್ಸಾ ಘಟಕಕ್ಕೆ ಭೇಟಿ: ಉಪ ಲೋಕಾಯುಕ್ತರು ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ಘಟಕವನ್ನು ಖುದ್ದು ವೀಕ್ಷಣೆ ಮಾಡಿದರು. ಬಳಿಕ ಆಸ್ಪತ್ರೆಯ ನವಜಾತ ಶಿಶು ಆರೈಕೆ ಕೇಂದ್ರ, ಎಚ್‌ಡಿಯು ಸೇರಿದಂತೆ ವಿವಿಧೆಡೆ ವಾರ್ಡ್‌ಗಳಿಗೆ ಭೇಟಿ ನೀಡಿ ವೈದ್ಯಕೀಯ ಸೌಕರ್ಯಗಳ ಬಗ್ಗೆ ಪರಿಶೀಲಿಸಿದರು.

ಶುಚ್ಛಿತ್ವಕ್ಕೆ ಮೆಚ್ಚುಗೆ:

ಉಪ ಲೋಕಾಯುಕ್ತರು ಆಸ್ಪತ್ರೆಯ ಮೊದಲನೇ ಮತ್ತು ಎರಡನೇಯ ಮಹಡಿಯಲ್ಲಿರುವ ವಿವಿಧ ವಾರ್ಡ್‌ಗಳ ಭೇಟಿ ವೇಳೆ ಕಂಡ ಶುಚಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಉತ್ತಮ ಮೂಲ ಸೌಕರ್ಯವಿದೆ. ಆಸ್ಪತ್ರೆಯು ಅಚ್ಚುಕಟ್ಟಾಗಿರುವ ಕಾರಣಕ್ಕೆ ಜಿಲ್ಲಾಸ್ಪತ್ರೆಗೆ ಈ ಹಿಂದೆ ರಾಷ್ಟಿಯ ಪ್ರಶಸ್ತಿಯೊಂದು ಲಭಿಸಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ರಾಜುಕುಮಾರ ಯರಗಲ್ ಇದ್ದರು.

***

ದಿನೇದಿನೆ ಶಸ್ತ್ರಚಿಕಿತ್ಸೆಗೆ ಬರುವವರ ಸಂಖ್ಯೆ ಏರುತ್ತಲೆ ಇರುತ್ತದೆ. ಹೀಗಾಗಿ ಇನ್ನೊಂದು ಶಸ್ತಚಿಕಿತ್ಸಾ ಘಟಕವನ್ನು ಮತ್ತು ವೈದ್ಯರು ಹಾಗೂ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಲು ಗಮನ ಹರಿಸಬೇಕು

–ಬಿ.ಎಸ್.ಪಾಟೀಲ,ಉಪ ಲೋಕಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT