ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ ಅಭಿವೃದ್ಧಿಗೆ ₹ 1 ಲಕ್ಷ ಸ್ವಂತ ಹಣ ಖರ್ಚು ಮಾಡಿದ ಶಿಕ್ಷಕ! 

ಶಾಲಾ ದುರಸ್ಥಿ, ಕಟ್ಟಡಕ್ಕೆ ಸುಣ್ಣ ಬಣ್ಣ, ವಿದ್ಯುತ್ ಅಳವಡಿಕೆ, ವರ್ಗಕೋಣೆ ಅಂದ ಚಂದಗೊಳಿಸಿದ ಶಿಕ್ಷಕ ಗದ್ಯಾಳ
Last Updated 20 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ವಿಜಯಪುರ: ಸರ್ಕಾರಿ ಶಾಲೆ ಶಿಕ್ಷಕರೊಬ್ಬರು ತಾವು ಕಾರ್ಯ ನಿರ್ವಹಿಸುತ್ತಿರುವ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಪಣ ತೊಟ್ಟು, ₹1 ಲಕ್ಷ ಸ್ವಂತ ಖರ್ಚು ಮಾಡಿಶಾಲೆಯನ್ನು ಆಕರ್ಷಣಿಯವಾಗಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಗಡಿಗೆ ಹೊಂದಿಕೊಂಡಿರುವ ತಿಕೋಟಾ ತಾಲ್ಲೂಕಿನ ಘೋಣಸಗಿ ಎಲ್.ಟಿ.01 ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕ ಪರಮೇಶ್ವರ ಎಸ್. ಗದ್ಯಾಳ ಈ ಮಹತ್ಕಾರ್ಯ ಮಾಡಿ ಮಕ್ಕಳು, ಪೋಷಕರು ಹಾಗೂ ಶಿಕ್ಷಣ ಇಲಾಖೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಲಂಬಾಣಿ ತಾಂಡಾ ಜನವಸತಿ ಪ್ರದೇಶದ ಮಕ್ಕಳಿಗೆ ನೈಜ ಕಲಿಕೆಗೆ ಒತ್ತು ಕೊಡುವ ಉದ್ದೇಶದಿಂದ ಉತ್ತಮ ಗುಣಮಟ್ಟದ ಬಣ್ಣವನ್ನು ಬಳಕೆ ಮಾಡಿ, ಶಾಲಾ ಕೊಠಡಿಯ ಪ್ರತಿಯೊಂದು ಗೋಡೆಯ ಮೇಲೆ ಒಂದೊಂದು ವಿಷಯದ ಕಲಿಕಾ ಬರವಣಿಗೆ ಮತ್ತು ಚಿತ್ರಗಳನ್ನು ಮೂಡಿಸಿದ್ದಾರೆ.

ಮೂಲಾಕ್ಷರಗಳು, ಗುಣಿತಾಕ್ಷರಗಳು, ಪ್ರಾಣಿಗಳು, ಪಕ್ಷಿಗಳು, ಹೂವಿನ ವಿಧಗಳು, ಪರಿಸರ ಕಲ್ಪನೆ, ರಾಷ್ಟ್ರೀಯ ಹಬ್ಬಗಳು, ಇಂಗ್ಲಿಷ್‌ ಅಕ್ಷರಗಳ ಪರಿಚಯ, ಕುಟುಂಬ ಕಲ್ಪನೆ, ಅಂಕಿ–ಸಂಖ್ಯೆಗಳ, ಮೂಲಕ್ರೀಯೆಗಳ ಕಲ್ಪನೆ, ತೂಕ, ಹಣ, ನೀರಿನ ಮೂಲಗಳು, ಶರೀರದ ಭಾಗಗಳು, ಸಸ್ಯಗಳ ಮಾಹಿತಿ, ಪೋಷಕಾಂಶಗಳು, ವ್ಯಾಕರಣ, ಸೌರವ್ಯೂಹ, ಚಂದ್ರಗ್ರಹಣ, ಸೂರ್ಯಗ್ರಹಣ, ಧಾನ್ಯಗಳ, ಸಸ್ಯಗಳ ಮಾಹಿತಿಯನ್ನು ಚಿತ್ರಿಸಲಾಗಿದೆ.

ಕೊಠಡಿಯ ಹೊರ ಭಾಗದ ಗೋಡೆ ಮೇಲೆ ತಾಲ್ಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ನಕ್ಷೆ ಇತರೆ ಎಲ್ಲ ಮಾಹಿತಿಗಳನ್ನು ಚಿತ್ರಿಸುವ ಮೂಲಕ ಮಕ್ಕಳಿಗೆ ನೈಜ ಕಲಿಕಾ ವಾತಾವರಣ ನಿರ್ಮಾಣ ಮಾಡಿಸಿದ್ದಾರೆ.

ಕಂಪ್ಯೂಟರ್ ಕಲಿಕೆಗೆ ಒತ್ತು ನೀಡುವುದಕ್ಕಾಗಿ ಶಾಲೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಶಾಲೆ ಚಾವಣಿ ರಿಪೇರಿ, ಶೌಚಾಲಯ, ಅಡುಗೆ ಕೋಣೆಯ ರಿಪೇರಿ ಹಾಗೂ ಶಾಲೆಯ ಭೌತಿಕ ಸೌಲಭ್ಯಗಳ ಎಲ್ಲ ಸಣ್ಣ ಪುಟ್ಟ ಕೆಲಸಗಳ ರಿಪೇರಿ ಮಾಡಿಸಿದ್ದಾರೆ.

ಕೊರೊನಾ ಕಾರಣದಿಂದ ಶಾಲೆಗಳು ಬಂದ್ ಆಗಿದ್ದರಿಂದ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಗಡಿ ಭಾಗ, ಹಿಂದುಳಿದ ಪ್ರದೇಶ, ಬಡತನ ಕುಟುಂಬದಲ್ಲಿರುವ ಮಕ್ಕಳ ಕಲಿಕೆಗೆ ಅನೂಕೂಲವಾಗಲಿ ಎಂದು ಲಾಕ್‌ಡೌನ್‌ ಬಳಿಕ ಶಾಲೆ ಆರಂಭವಾದ ನಂತರ ಈ ಕಾರ್ಯ ಮಾಡಿರುವುದಾಗಿಶಿಕ್ಷಕ ಪರಮೇಶ್ವರ ಗದ್ಯಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡದ ಈ ಹಿಂದಿನ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಈ ಶಾಲೆಗೆ ಒಮ್ಮೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಪರಿಶೀಲಿಸಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಅಲ್ಲದೇ, ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಶಿಕ್ಷಕರು ಕಾಳಜಿ ತೋರಬೇಕು ಎಂದು ಸಲಹೆ ನೀಡಿದ್ದರು. ಅವರಿಂದ ಪ್ರಭಾವಿತನಾಗಿ ಶಾಲೆಗೆ ಏನಾದರೂ ಹೊಸದೊಂದು ಕಾರ್ಯ ಮಾಡಬೇಕು ಎಂಬ ಹಂಬಲದಿಂದ ಮಕ್ಕಳ ಕಲಿಕೆಗೆ ಅನೂಕೂಲವಾಗಿಸಲು ಈ ಕಾರ್ಯ ಮಾಡಿದ್ದೇನೆ ಎಂದು ಅವರು ಹೇಳಿದರು.

ಶಾಲೆಯ ಅಭಿವೃದ್ಧಿಗೆ ಸ್ವಂತಃ ಹಣ ಖರ್ಚು ಮಾಡಿದ ಶಿಕ್ಷಕರ ಕಾರ್ಯ ಇತರೆಯವರಿಗೆ ಮಾದರಿಯಾಗಿದೆ ಎಂದು ಶಾಲೆಯಎಸ್‌.ಡಿ.ಎಂ.ಸಿ ಅಧ್ಯಕ್ಷಅಶೋಕ ರಾಠೋಡ ಹೇಳಿದರು.

***

ಮಕ್ಕಳ ನೈಜ ಕಲಿಕೆಗೆ ಉತ್ತಮ ಕಲಿಕಾ ವಾತಾವರಣ ನಿರ್ಮಾಣ ಮಾಡಲು ಸ್ವಂತಃ ಹಣ ಖರ್ಚು ಮಾಡಿ ಈ ಕಾರ್ಯ ಮಾಡಿದ್ದೇನೆ. ಬಡ ಮಕ್ಕಳ ಕಲಿಕಾ ಖುಷಿ ನನಗೆ ಸಂತೃಪ್ತಿ ತಂದಿದೆ.

–ಪಿ.ಎಸ್.ಗದ್ಯಾಳ, ಶಿಕ್ಷಕ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಘೋಣಸಗಿ ಎಲ್.ಟಿ.ನಂ- 01

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT