ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿ: ‘ಶಿಕ್ಷಕರ ತವರೂರು’ ಲಚ್ಯಾಣ ಗ್ರಾಮ

ಬಂಥನಾಳ ಶ್ರೀಗಳ ಸ್ಪೂರ್ತಿಯಿಂದ ತಲೆಎತ್ತಿದೆ ಶಿಕ್ಷಕರ ತರಬೇತಿ ಕೇಂದ್ರ
Last Updated 3 ಮೇ 2022, 19:30 IST
ಅಕ್ಷರ ಗಾತ್ರ

ಇಂಡಿ: ತಾಲ್ಲೂಕಿನ ಲಚ್ಯಾಣ ‘ಶಿಕ್ಷಕರ ತವರೂರು’ ಎಂದೇ ಜಿಲ್ಲೆಯಲ್ಲಿ ಪ್ರಖ್ಯಾತಿ ಗಳಿಸಿದೆ.

ಈ ಗ್ರಾಮದಲ್ಲಿ ಮನೆಗೊಬ್ಬರು ಶಿಕ್ಷಕರಾಗಿ ಸೇವೆಯಲ್ಲಿದ್ದಾರೆ. ಇದಕ್ಕೆ ಕಾರಣ ಬಂಥನಾಳ ಗ್ರಾಮದ ಸಂಗನಬಸವ ಮಹಾಶಿವಯೋಗಿಗಳ ಸ್ಪೂರ್ತಿಯಿಂದ ಆರಂಭಗೊಂಡ ಶ್ರೀ ಸಿದ್ಧೇಶ್ವರ ಶಿಕ್ಷಕರ ತರಬೇತಿ ಕೇಂದ್ರ.

ಈ ತರಬೇತಿ ಕೇಂದ್ರದಿಂದ ಗ್ರಾಮ ಸೇರಿದಂತೆ ವಿಜಯಪುರ ಜಿಲ್ಲೆಯ ನೂರಾರು ವಿದ್ಯಾರ್ಥಿಗಳು ಪ್ರತೀ ವರ್ಷ ತರಬೇತಿ ಪಡೆದುಕೊಂಡು ಶಿಕ್ಷಕರಾಗಿದ್ದಾರೆ.

1950ರಲ್ಲೇ ಸಂಗನಬಸವ ಶ್ರೀಗಳು ಲಚ್ಯಾಣ ಗ್ರಾಮದಲ್ಲಿ ಶಿಕ್ಷಕರ ತರಬೇತಿ ಕೇಂದ್ರ ತೆರೆಯುವ ಮೂಲಕ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದರು.ಲಚ್ಯಾಣ ಶಿಕ್ಷಕರ ತರಬೇತಿ ಕೇಂದ್ರದಿಂದ ಇಲ್ಲಿಯವರೆಗೆ 6000ಕ್ಕಿಂತ ಹೆಚ್ಚಿನ ಶಿಕ್ಷಕರು ತಯಾರಾಗಿದ್ದಾರೆ!

ಈ ಪ್ರಶಿಕ್ಷಣಾರ್ಥಿಗಳ ಪೈಕಿ 4 ರಿಂದ 5 ಸಾವಿರ ಜನ ವಿದ್ಯಾರ್ಥಿಗಳು ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕೆಲವರು ರಾಜ್ಯದ ವಿವಿಧ ಇಲಾಖೆಗಳಲ್ಲಿ ತಹಶೀಲ್ದಾರರಾಗಿ, ಉಪ ಕಂದಾಯ ವಿಭಾಗಾಧಿಕಾರಿಗಳಾಗಿ ಇನ್ನಿತರ ವಿವಿಧ ಇಲಾಖೆಗಳಲ್ಲಿ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಸೇವೆಯಲ್ಲಿದ್ದಾರೆ ಎಂದು ಪ್ರಾಚಾರ್ಯ ಎಸ್.ಎಂ.ಶೆಟ್ಟೆಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು.

ಇಲ್ಲಿ ಶಿಕ್ಷಕರ ತರಬೇತಿ ಪಡೆದುಕೊಂಡು ಮಹಾರಾಷ್ಟ್ರದಲ್ಲಿ ಶಿಕ್ಷಕರಾಗಿ ಸೇವೆಯಲ್ಲಿದ್ದ ಶಿಕ್ಷಕರು ಮಹಾರಾಷ್ಟ್ರದಲ್ಲಿ ಕನ್ನಡ ಕಂಪನ್ನು ಸೂಸುತ್ತಿರುವದು ಇನ್ನೊಂದು ವಿಶೇಷವಾಗಿದೆ.

ಮಹಾರಾಷ್ಟ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕರು ಉತ್ತಮ ಶಿಕ್ಷಕ ಪ್ರಶಸ್ತಿ, ಜಿಲ್ಲಾ ಮತ್ತು ರಾಜ್ಯಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ ಎಂದು ಅವರು ವಿವರಿಸಿದರು.

ಶಿಕ್ಷಕರ ತರಬೇತಿ ಕೇಂದ್ರ ಇರುವ ಲಚ್ಯಾಣ ಗ್ರಾಮದಲ್ಲಿ ಬಹುತೇಕ ಮನೆಗಳಲ್ಲಿ ಶಿಕ್ಷಕರ ತರಬೇತಿ ಪಡೆದುಕೊಂಡಿರುವ ಪ್ರಶಿಕ್ಷಣಾರ್ಥಿಗಳಿದ್ದಾರೆ. ಇವರಲ್ಲಿ ಸುಮಾರು 350 ಜನರು ಶಿಕ್ಷಕರಾಗಿದ್ದರೆ, ಇನ್ನುಳಿದ ಪ್ರಶಿಕ್ಷಣಾರ್ಥಿಗಳು ಸುಮಾರು 50 ಜನ ಮಿಲಿಟರಿ ಮತ್ತು ಪೊಲೀಸ್ ಇಲಾಖೆ ಸೇರಿದಂತೆ ಇನ್ನಿತರ ಸರ್ಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವದನ್ನು ಗ್ರಾಮಸ್ಥರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ.

ಭೀಮಾ ನದಿಯ ಅಂಚಿನಲ್ಲಿರುವ ಈ ಗ್ರಾಮ ಮೂಲತ: ಕುಸ್ತಿ ಪಟುಗಳಿಗೆ ಹೆಸರುವಾಸಿಯಾಗಿತ್ತು. ಇದೀಗ ಶಿಕ್ಷಕರ ತವರೂರಾಗಿ ಬದಲಾಗಿದೆ. ಈ ಕೀರ್ತಿ ಅಕ್ಷರ ದಾಸೋಹಿ ಲಿಂಗೈಕ್ಯ ಸಂಗನಬಸವ ಮಹಾಶಿವಯೋಗಿಗಳಿಗೆ ಸಲ್ಲಬೇಕು ಎಂದು ಗ್ರಾಮಸ್ಥರು ಸ್ಮರಿಸಿಕೊಳ್ಳುತ್ತಾರೆ.

ಪ್ರಸ್ತುತ ಗ್ರಾಮದಲ್ಲಿ ಬಿಎಲ್‌ಡಿಸಿ ಸಂಸ್ಥೆಯಿಂದ ಸಂಗನಬಸವೇಶ್ವರ ಕೃಷಿ ಕಾಲೇಜು, ಮಾಧ್ಯಮಿಕ ಶಾಲೆ, ಪೂರ್ವ ಪ್ರಾಥಮಿಕ ಶಾಲೆ ನಡೆಸಲಾಗುತ್ತಿದೆ. ಇದರ ಜೊತೆಗೆ ಬಂಥನಾಳದ ವೃಷಭಲಿಂಗೇಶ್ವರ ಟ್ರಸ್ಟಿನ ಸಂಗನಬಸವೇಶ್ವರ ಕೈಗಾರಿಕಾ ತರಬೇತಿ ಕೇಂದ್ರ, ಸರ್ಕಾರಿ ಮೊರಾರ್ಜಿ ವಸತಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಸರ್ಕಾರಿ ಪೌಢಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ವರದಾನವಾಗಿ ಕೆಲಸ ಮಾಡುತ್ತಿವೆ.

ಲಚ್ಯಾಣಕ್ಕೆ ಬೇಕಿದೆ ಸೌಲಭ್ಯ
ಲಚ್ಯಾಣ ಗ್ರಾಮ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಗ್ರಾಮದ ಕಮರಿಮಠದಲ್ಲಿ ದಾಸೋಹ ಭವನ, ಯಾತ್ರಿ ನಿವಾಸವಾಗಬೇಕು. ಶ್ರೀ ಶಂಕರಲಿಂಗೇಶ್ವರರು ಮಾಡಿರುವ ಮಲ್ಲಿಕಾರ್ಜುನ ದೇವಸ್ಥಾನದ ಜೀರ್ಣೋದ್ದಾರವಾಗಬೇಕಿದೆ. ರೈಲ್ವೆ ಅಂಡರ್ ಪಾಸ್ ರಸ್ತೆಯಾಗಬೇಕಿದೆ. ಗ್ರಾಮದ 2 ಎಕರೆ ಸ್ಥಳದಲ್ಲಿ ಸಾಧು ಸಂತರ ಗುಂಪಾಗಳಿವೆ. ಅಲ್ಲಿ ಉದ್ಯಾನವನವಾಗಬೇಕು.

ಲಚ್ಯಾಣ ರೈಲು ನಿಲ್ದಾಣಕ್ಕೆ ಸಿದ್ಧಲಿಂಗೇಶ್ವರ ರೈಲು ನಿಲ್ದಾಣ ಎಂದು ಹೆಸರಿಡಬೇಕು, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯಾಗಬೇಕು, ಸಾಮೂಹಿಕ ಶೌಚಾಲಯವಾಗಬೇಕು, ಗ್ರಾಮದಲ್ಲಿ ರೈಲು ನಿಲುಗಡೆಯಾಗಬೇಕು ಎಂಬುದು ಗ್ರಾಮಸ್ಥರಾದ ಡಿ.ಎ.ಮುಜಗೊಂಡ ಮತ್ತು ನಿವೃತ್ತ ಪ್ರಾಚಾರ್ಯ ಎ.ಪಿ.ಕಾಗವಾಡಕರ ಅವರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT