ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ, ಸಂಘಪರಿವಾರದಿಂದ ಉಪದ್ಯಾಪಿ ಕೆಲಸ

ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಆರೋಪ
Published 30 ಜುಲೈ 2023, 14:51 IST
Last Updated 30 ಜುಲೈ 2023, 14:51 IST
ಅಕ್ಷರ ಗಾತ್ರ

ವಿಜಯಪುರ: ‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಸಹಿಸಿಕೊಳ್ಳಲು ಸಾಧ್ಯವಾಗದೇ ಬಿಜೆಪಿ, ಸಂಘ ಪರಿವಾರದವರು ಸುಳ್ಳು ಸುದ್ದಿ ಹಬ್ಬಿಸುವುದು, ವಿರೋಧಿಸುವುದನ್ನೇ ಅಜೆಂಡಾ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಉಪದ್ಯಾಪಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ’ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಆರೋಪಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉಡುಪಿಯ ಕಾಲೇಜೊಂದರ ವಿಡಿಯೊ ಪ್ರಕರಣವನ್ನು ಈಗಾಗಲೇ ಪೊಲೀಸರು ವಿಚಾರಣೆ ಮಾಡಿ ಸುಳ್ಳು, ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಅಲ್ಲಿಯ ಬಿಜೆಪಿ ಶಾಸಕ, ಎಬಿವಿಪಿ ಮುಖಂಡರು ಘಟನೆ ನಡೆದಿದೆ ಎಂದು ಸುಳ್ಳು ಸುದ್ದಿ ಆಧರಿಸಿ ಪ್ರತಿಭಟನೆ ನಡೆಸುತ್ತಿರುವುದು ಖಂಡನೀಯ’ ಎಂದರು.

‘ಮಣಿಪುರದಲ್ಲಿ ಇದೇ ಬಿಜೆಪಿ ಕಾರ್ಯಕರ್ತರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ್ದಾರೆ. ಅದನ್ನು ಮುಚ್ಚಿ ಹಾಕಲು ಉಡುಪಿಯ ಸುಳ್ಳು ಪ್ರಕರಣವನ್ನು ಎತ್ತಿಕೊಂಡಿದ್ದಾರೆ’ ಎಂದು ಆರೋಪಿಸಿದರು.

‘ತೀರ್ಥಹಳ್ಳಿಯಲ್ಲಿ ಎಬಿವಿಪಿ ಮುಖಂಡನೇ ಅತ್ಯಾಚಾರ ಮಾಡಿದರೂ ಎಬಿವಿಪಿ, ಬಿಜೆಪಿ ಮುಖಂಡರು ಏಕೆ ಪ್ರತಿಭಟಿಸಲಿಲ್ಲ, ಕುಸ್ತಿ ಪಟುಗಳಿಗೆ ಬಿಜೆಪಿ ಸಂಸದನೇ ಲೈಂಗಿಕ ಕಿರುಕುಳ ನೀಡಿದರೂ ಏಕೆ ಪ್ರತಿಭಟಿಸಲಿಲ್ಲ’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದನ್ನು ಸಹಿಸಿಕೊಳ್ಳಲು, ಅರಗಿಸಿಕೊಳ್ಳಲು ಬಿಜೆಪಿ, ಸಂಘ ಪರಿವಾರ ಕೆಲವು ಸುದ್ದಿ ವಾಹನಿಗಳಿಗೆ ಸಾಧ್ಯವಾಗುತ್ತಿಲ್ಲ’ ಎಂದು ಆರೋಪಿಸಿದರು.

‘ಗೃಹ ಸಚಿವರ ಕುಟುಂಬದ ವೈಯಕ್ತಿಕ ವಿಚಾರವನ್ನು ಪ್ರಸ್ತಾಪಿಸಿ ಅವಹೇಳನಕಾರಿಯಾಗಿ ಮಾತನಾಡಿರುವ ಉಡುಪಿ ಶಾಸಕನ ವಿರುದ್ಧ ಪ್ರಕರಣ ದಾಖಲಿಸಿ, ಕ್ರಮಕೈಗೊಳ್ಳಬೇಕು’ ಎಂದು‌ ಆಗ್ರಹಿಸಿದರು.

‘ಡಿ.ಜಿ. ಹಳ್ಳಿ, ಕೆ.ಜಿ. ಹಳ್ಳಿ ಪ್ರಕರಣದಲ್ಲಿ ಅಮಾಯಕರ ವಿರುದ್ಧದ ಪ್ರಕರಣ ಹಿಂಪಡೆಯುವ ವಿಷಯದಲ್ಲಿ ಅನಗತ್ಯ ವಿವಾದ ಸೃಷ್ಟಿಸಲಾಗುತ್ತದೆ. ಪ್ರಕರಣದ ನೈಜ ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಆದರೆ, ಅಮಾಯಕರ ವಿರುದ್ಧ ಇರುವ ಪ್ರಕರಣ ಪರಿಶೀಲಿಸಲು ಹಿರಿಯ ಪೊಲೀಸರಿಗೆ ಗೃಹ ಸಚಿವರು ಸೂಚಿಸಿರುವುದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಮುಖಂಡರಾದ ನಾಗರಾಜ ಲಂಬು, ಫಯಾಜ್ ಕಲಾದಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT