ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಾರೀಕರಣವಾದ ವೈದ್ಯ ಕ್ಷೇತ್ರ: ದೇಶಪಾಂಡೆ ಕಳವಳ

ಲೋಕಹಿತ ಟ್ರಸ್ಟ್ ಸಂಚಾಲಿತ ಡಾ. ಹೆಡಗೇವಾರ ಆರೋಗ್ಯ ಕೇಂದ್ರ ಉದ್ಘಾಟನೆ
Last Updated 27 ಜೂನ್ 2022, 15:07 IST
ಅಕ್ಷರ ಗಾತ್ರ

ವಿಜಯಪುರ: ವೈದ್ಯ ಕ್ಷೇತ್ರವು ಸದ್ಯದ ಪರಿಸ್ಥಿತಿಯಲ್ಲಿ ವ್ಯಾಪಾರೀಕರಣವಾಗಿದ್ದು, ಹೀಗಾಗಿ ಜನರು ದೇವರ ರೂಪದಲ್ಲಿ ವೈದ್ಯರನ್ನು ಕಾಣುತ್ತಿಲ್ಲ ಎಂದು ಹುಬ್ಬಳ್ಳಿಯ ಲೋಕಹಿತ ಟ್ರಸ್ಟ್‌ನ ಚೇರಮನ್ ಅರವಿಂದರಾವ್‌ ದೇಶಪಾಂಡೆ ಕಳವಳ ವ್ಯಕ್ತ ಪಡಿಸಿದರು.

ನಗರದ ಸಿಲ್ವರ್‌ ಜುಬಿಲಿ ಮೆಟರ್ನಿಟಿ ಸೆಂಟರ್ ( ಚಂದ್‌ ಬಾವಡಿ ದವಾಖಾನೆ) ಆವರಣದಲ್ಲಿ ಲೋಕಹಿತ ಟ್ರಸ್ಟ್ ಸಂಚಾಲಿತ ಡಾ. ಹೆಡಗೇವಾರ ಆರೋಗ್ಯ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ವೈದ್ಯರುಸೇವಾ ಮನೋಭಾವದಿಂದ ರೋಗಿಗಳಲ್ಲಿ ಮನೋಸ್ಥೈರ್ಯ ತುಂಬಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಮಾತನಾಡಿ, ಆರ್ ಎಸ್ ಎಸ್ ಬಗ್ಗೆ ಏನೂ ಅರಿಯದೆ ಮಾತನಾಡುತ್ತಿರುವ ಕೆಲವರು ಒಂದು ಬಾರಿ ಡಾ. ಹೆಡಗೇವಾರ ಅವರ ಜೀವನ ಚರಿತ್ರೆಯನ್ನು ಓದಬೇಕು ಎಂದು ಕಿವಿಮಾತು ಹೇಳಿದರು.

ಆರ್ ಎಸ್ ಎಸ್ ಇಂದು ಇಡೀ ಜಗತ್ತಿನಲ್ಲಿ ಒಂದು ಶ್ರೇಷ್ಠ ಸಂಘಟನೆಯಾಗಿದೆ. ಯಾವುದೇ ನೈಸರ್ಗಿಕ ವಿಪತ್ತುಗಳು ಎದುರಾದಾಗ ಸ್ವಯಂ ಸೇವಕರು ಮುಂದಾಗಿ ಸೇವೆಗೈಯುತ್ತಿರುವರು ಎಂದರು.

ಮುಂದಿನ ದಿನಗಳಲ್ಲಿ ಆರ್ ಎಸ್ ಎಸ್ ದೇಶಾದ್ಯಂತ ಹಿಂದು ಸ್ಪಿರಿಚ್ಯುವಲ್ ಫೇರ್ ಆಯೋಜಿಸಲು ನಿರ್ಧರಿಸಿದೆ ಅದರಲ್ಲಿ ಎಲ್ಲ ಬಗೆಯ ಸಂಸ್ಕೃತಿಯನ್ನು ಅನಾವರಣಗೊಳಿಸುವ ಉದ್ದೇಶ ಹೊಂದಿದೆ ಎಂದರು.

ಧರ್ಮದತ್ತಿ ಆಸ್ಪತ್ರೆಯನ್ನು ನಡೆಸುವುದು ಸುಲಭದ ಮಾತಲ್ಲ, ಅದು ಒಂದು ಬಿಳಿ ಆನೆ ಸಾಕಿದಂತೆ. ಅದಕ್ಕೆ ಸಮರ್ಪಣಾ ಮನೋಭಾವದ ವೈದ್ಯ ಸಿಬ್ಬಂದಿಯ ಅವಶ್ಯಕತೆ ಇದೆ ಎಂದರು.

ಕೆಲವರು ಪರಿಸ್ಥಿತಿಯಿಂದ ದೇಶ ಭಕ್ತರಾಗುವುದುಂಟು. ಆದರೆ,ಡಾ. ಕೇಶವ ಬಲಿರಾಮ ಹೆಡಗೆವಾರ ಜನ್ಮತಃ ಒಬ್ಬ ದೇಶಭಕ್ತ ಎಂದರು.

ಕೇಂದ್ರವನ್ನು ಉದ್ಘಾಟಿಸಿದ ಖ್ಯಾತ ವೈದ್ಯ ಡಾ. ಬಿ. ಸಿ. ಉಪ್ಪಿನ ಮಾತನಾಡಿ, ದೀರ್ಘ ಇತಿಹಾಸ ಹೊಂದಿದ ನಗರದ ಸಿಲ್ವರ್‌ ಜುಬಿಲಿ ಮೆಟರ್ನಿಟಿ ಆಸ್ಪತ್ರೆಯಲ್ಲಿ ನೂತನ ಆರೋಗ್ಯ ಕೇಂದ್ರ ಆರಂಭವಾಗಿರುವುದು ಸಂತೋಷ ತಂದಿದೆ ಎಂದರು.

ಈಚೆಗಿನ ದಿನಗಳಲ್ಲಿ ವೈದ್ಯ ಕ್ಷೇತ್ರ ಅಭಿವೃದ್ಧಿಯಾಗಿದೆ. ಆದರೆ, ಬಡವರಿಗೆ ಎಟುಕುವ ರೀತಿಯಲ್ಲಿ ಆರೋಗ್ಯ ಸೇವೆ ದೊರಕುವಂತಾಗಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಹೆಡಗೇವಾರ ಆರೋಗ್ಯ ಕೇಂದ್ರದ ನಿರ್ವಹಣಾ ಸಮಿತಿ ಅಧ್ಯಕ್ಷ ಡಾ. ಸತೀಶ ಜಿಗಜಿನ್ನಿ, ಕೋವಿಡ್ ಸಂದರ್ಭದಲ್ಲಿ ಆರಂಭಿಸಿದ ಆರೋಗ್ಯ ಕೇಂದ್ರವೇ ಆಸ್ಪತ್ರೆ ಸ್ಥಾಪನೆಗೆ ಪ್ರೇರಣೆ ಎಂದರು.

ಸದ್ಯ ಒಂಬತ್ತು ಹಾಸಿಗೆಯ ಆಸ್ಪತ್ರೆ ಆರಂಭಿಸಲಾಗಿದ್ದು.ಮುಂದಿನ ದಿನಗಳಲ್ಲಿ ಅದನ್ನು 400 ಹಾಸಿಗೆಗಳಿಗೆ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಲೋಕಹಿತ ಟ್ರಸ್ಟ್ ಹುಬ್ಬಳ್ಳಿಯ ಸಂಚಾಲಕ ಶ್ರೀಧರ ನಾಡಗೇರ ಮಾತನಾಡಿದರು. ಆರೋಗ್ಯ ಕೇಂದ್ರ ನಿರ್ವಹಣಾ ಸಮಿತಿ ಸದಸ್ಯ ರಾಜಶೇಖರ ಮಗಿಮಠ, ಬಸವರಾಜ ಆಲೂರ, ಮನೀಷಾ ಕುಲಕರ್ಣಿ, ಸಂಸದ ರಮೇಶ ಜಿಗಜಿಣಗಿ, ಕೈಗಾರಿಕೆ ಸಚಿವ ಮುರಗೇಶ ನಿರಾಣಿ, ಶಾಸಕ ರಮೇಶ ಭೂಸನೂರ, ವಿಜುಗೌಡ ಪಾಟೀಲ, ಆರ್.ಎಸ್.ಪಾಟೀಲ ಕುಚಬಾಳ, ಅರುಣ ಶಹಾಪುರ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಉಮೇಶ ಕಾರಜೋಳ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಪ್ರಕಾಶ ಅಕ್ಕಲಕೋಟ ಇದ್ದರು.

ಸಚಿವ ಮುರಗೇಶ ನಿರಾಣಿ ಅವರು ಕೊಡುಗೆಯಾಗಿ ನೀಡಿದ ನೂತನ ಅಂಬ್ಯುಲೆನ್ಸ್‌ ಅನ್ನು ಉದ್ಘಾಟಿಸಲಾಯಿತು.

****

ಈಚಿನ ದಿನಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ವ್ಯಾಪಾರಿಕಣ ಆಗಿವೆ. ಹೀಗಾಗಿ ಸಮರ್ಪಣಾ ಮನೋಭಾವದ ವೈದ್ಯರು ದೊರಕುವುದು ಕಷ್ಟವಾಗಿದೆ

ಅರವಿಂದರಾವ್‌ ದೇಶಪಾಂಡೆ,ಚೇರಮನ್, ಲೋಕಹಿತ ಟ್ರಸ್ಟ್‌,ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT