ಭಾನುವಾರ, ಅಕ್ಟೋಬರ್ 2, 2022
19 °C
ಭೂಸ್ವಾಧೀನ: ಮುಖ್ಯಮಂತ್ರಿ ವಿರುದ್ಧ ಆಕ್ರೋಶ

113ನೇ ದಿನ ಪೂರೈಸಿದ ರೈತರ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನರಾಯಪಟ್ಟಣ: ರೈತರ ಭೂಮಿಯ ಪರಭಾರೆ ವಿರೋಧಿಸಿ ಚನ್ನರಾಯಪಟ್ಟಣದಲ್ಲಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯು ಸೋಮವಾರಕ್ಕೆ 113 ದಿನಗಳನ್ನು ಪೂರೈಸಿದೆ. ರೈತರು ಸೇರಿದಂತೆ ರಾಜಕೀಯ ಪಕ್ಷಗಳ ಮುಖಂಡರೂ ಈ ಧರಣಿಯಲ್ಲಿ ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ರಾಜಣ್ಣ ಮಾತನಾಡಿ, ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯೇ ಇಲ್ಲ. ರೈತರ ಅಭ್ಯುದಯಕ್ಕಾಗಿ ಹಲವು ಯೋಜನೆಗಳನ್ನು ಘೋಷಣೆ ಮಾಡಿರುವುದಾಗಿ ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಆದರೆ, ರೈತರ ಕೃಷಿ ಭೂಮಿಯನ್ನು ಕಸಿದುಕೊಂಡು ಅವರ ಜೀವನದ ಮೇಲೆ ಬರೆ ಎಳೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಜು.28 ರಂದು ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಸಾಧನಾ ಸಮಾವೇಶ ಮಾಡಲು ಹೊರಟಿದೆ. ಅನ್ನದಾತರ ಭೂಮಿಯನ್ನು ಕಸಿದುಕೊಂಡು ರೈತರನ್ನು ನಾಶ ಮಾಡುವುದು ಬಿಜೆಪಿಯ ಸಾಧನೆಯಾಗಿದೆ. ಸರ್ಕಾರದ ವಿರುದ್ಧ ರೈತರ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ. ಸರ್ಕಾರ ಶೀಘ್ರವೇ ರೈತರ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು. ಇಲ್ಲವಾದರೆ ಮುಂದೆ ಆಗಬಹುದಾದ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

‘ಹೋಬಳಿಯ ನಾಗನಾಯಕನಹಳ್ಳಿಗೆ ಬಂದಿದ್ದ ಮುಖ್ಯಮಂತ್ರಿಗೆ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳದಂತೆ ಮನವಿ ನಾವೆಲ್ಲರೂ ಮನವಿ ಕೊಟ್ಟಿದ್ದೇವೆ. ಇಲ್ಲಿನ ರೈತರ ಪರಿಸ್ಥಿತಿಯನ್ನು ತಿಳಿಸಿದ್ದೇವೆ. ನಿಮ್ಮೊಂದಿಗೆ ಮಾತುಕತೆ ನಡೆಸಿ, ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ರೈತರ ಜತೆ ಅವರು ಮಾತುಕತೆ ನಡೆಸಿಲ್ಲ’ ಎಂದು ರೈತ ಮುಖಂಡ ಅಶ್ವಥಪ್ಪ ಆಕ್ರೋಶ ವ್ಯಕ್ತಪಡಿಸಿದರು. 

ಈ ಮೂಲಕ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಆದ್ದರಿಂದ ನಾವು ಸರ್ಕಾರದ ವಿರುದ್ಧ ಬೀದಿಗೆ ಇಳಿಯಬೇಕಾದ ಅನಿವಾರ್ಯತೆ ಇದೆ ಎಂದರು.

ಸಾಧನಾ ಸಮಾವೇಶಕ್ಕೆ ಬರುವ ಮುಖ್ಯಮಂತ್ರಿಗೆ ಘೇರಾವ್ ಹಾಕುವ ಮೂಲಕವಾದರೂ ಅವರ ಗಮನ ಸೆಳೆಯಲು ರೈತರು ಸಿದ್ಧರಾಗಬೇಕು ಎಂಬ ಅಭಿಪ್ರಾಯಕ್ಕೆ ರೈತರು ಬಂದಿದ್ದಾರೆ. 13 ಹಳ್ಳಿಗಳ ರೈತರು, ಹೋರಾಟದಲ್ಲಿ ಭಾಗವಹಿಸಿದ್ದಾರೆ. 

ಹೋರಾಟಗಾರರಾದ ಕಾರಹಳ್ಳಿ ಶ್ರೀನಿವಾಸ್, ಮಾರೇಗೌಡ, ನಂಜೇಗೌಡ, ವೆಂಕಟರಮಣಪ್ಪ, ನಲ್ಲಪ್ಪನಹಳ್ಳಿ ನಂಜಪ್ಪ, ಲಕ್ಷ್ಮಮ್ಮ, ಮುಕುಂದ್, ನಾರಾಯಣಮ್ಮ, ಸುರೇಶ್, ಮಾರುತೇಶ್, ರಾಮಾಂಜಿನಪ್ಪ, ವೆಂಕಟೇಶ್, ಕೃಷ್ಣಪ್ಪ ಮುಂತಾದವರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು