ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿ ಸಿದ್ದಲಿಂಗಯ್ಯಗೆ ‘ನುಡಿ ನಮನ’ ಜು. 25ಕ್ಕೆ

Last Updated 22 ಜುಲೈ 2021, 13:48 IST
ಅಕ್ಷರ ಗಾತ್ರ

ವಿಜಯಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಸಾಗರಬಣ) ವತಿಯಿಂದ ಡಾ.ಸಿದ್ದಲಿಂಗಯ್ಯ ಅವರಿಗೆ ‘ನುಡಿ ನಮನ’ ಕಾರ್ಯಕ್ರಮವನ್ನು ಜುಲೈ 25 ರಂದು ಮಧ್ಯಾಹ್ನ 12ಕ್ಕೆ ಜಲನಗರದ ಶಿವಶರಣೆ ನಿಂಬೆಕ್ಕ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದುರಾಜ್ಯ ಸಂಚಾಲಕ ಡಿ.ಜಿ. ಸಾಗರ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಮಾಜಿ ಸಚಿವ ಎಚ್.ಸಿ. ಮಹಾದೇವಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಶಾಸಕರಾದಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ಕಾಂಗ್ರೆಸ್‌ ಅಧ್ಯಕ್ಷ ರಾಜು ಆಲಗೂರ, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌, ಎಸ್.ಸಿ.ಎಸ್.ಟಿ.ಸಮನ್ವಯ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಡಿ.ಶಿವಶಂಕರ, ಮುಖಂಡರಾದ ರಮೇಶ ಆಸಂಗಿ, ಮಾರುತಿ ಭವದೆ, ಎಸ್.ಡಿ.ಕುಮಾನಿ, ಅಬ್ದುಲ್‌ ಹಮೀದ್‌ ಮುಶ್ರೀಫ್‌ ಭಾಗವಹಿಸಲಿದ್ದಾರೆ ಎಂದರು.

ಎಪ್ಪತ್ತರ ದಶಕದಲ್ಲಿ ಕನ್ನಡ ಸಾಹಿತ್ಯ ಹೊಸ ಚಿಂತನೆಗೆ ಹೊರಳುವ ಕಾಲದಲ್ಲಿ ದಲಿತ ಜನಾಂಗದ ದನಿಯಾಗಿ ಕವನಗಳನ್ನು ರಚಿಸಿದವರು ಕವಿ ‌ಸಿದ್ಧಲಿಂಗಯ್ಯ ಎಂದರು.

ರಾಜ್ಯದಲ್ಲಿ ಆರಂಭವಾದ ದಲಿತ ಚಳವಳಿಗೆ ತಮ್ಮ ಸಾಹಿತ್ಯದ ಮೂಲಕ ಪ್ರೇರಣೆ ನೀಡಿ, ದಲಿತ ಚಳವಳಿಯಲ್ಲಿನ ಅಂದಿನ ಮುಂಚಣಿ ನಾಯಕರಲ್ಲಿ, ಸಾಹಿತಿಗಳಲ್ಲಿ, ಹೋರಾಟಗಾರರಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಸಹ ದಲಿತ ಚಳವಳಿಯನ್ನು ಹೆಮ್ಮರವಾಗಿ ಬೆಳೆಸಿದರು ಸಿದ್ದಲಿಂಗಯ್ಯನವರು ಎಂದು ಹೇಳಿದರು.

ಸಿದ್ಧಲಿಂಗಯ್ಯನವರ ಕಾವ್ಯಗಳಲ್ಲಿ ಶತಮಾನಗಳ ನೋವು, ಅವಮಾನ, ಹಸಿವು, ಒಳಸಂಕಟ ಪ್ರತಿಕ್ರಿಯಾತ್ಮಕವಾಗಿ ದನಿಯೆತ್ತಿದ್ದವು. ಅದುವರೆಗೆ ಜಿಡ್ಡುಗಟ್ಟಿದ ಕನ್ನಡ ಕಾವ್ಯಕ್ಕೆ ಅವರ ಈ ಬಗೆಯ ರಚನೆಗಳು ಹೊಸ ಚುರುಕನ್ನು ಭಾಷಾ ಪ್ರಯೋಗದ ಹೊಸತವನ್ನು ಪರಿಚಯಿಸಿದ್ದವು ಎಂದರು.

ಬೂಸಾ ಸಾಹಿತ್ಯ ಚಳವಳಿಯ ಮುಂಚೂಣಿಯಲ್ಲಿದ್ದ ಸಿದ್ಧಲಿಂಗಯ್ಯ ದಲಿತ ಸಂಘರ್ಷ ಸಮಿತಿ ಮತ್ತು ಬಂಡಾಯ ಸಾಹಿತ್ಯ ಸಂಘಟನೆಗಳ ಸ್ಥಾಪಕರಲ್ಲೊಬ್ಬರಾಗಿದ್ದರು. ಅವುಗಳ ಹೋರಾಟಕ್ಕೆ ಕಿಚ್ಚು ತುಂಬಿದರು. ಈ ಹಿನ್ನೆಲೆಯಲ್ಲಿ ನುಡಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ದಲಿತ ಮುಖಂಡರಾದ ಅಶೋಕ ಚಲವಾದಿ, ವಿನಾಯಕ ಗುಣಸಾಗರ, ಸಿದ್ದು ರಾಯಣ್ಣವರ, ವೈ.ಸಿ.ಮಯೂರ, ತಮ್ಮಣ್ಣ, ರಾಜು ತೊರವಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT