ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ| ಬದಲಾಯಿಸುವ ಶಕ್ತಿ ಜನರ ಕೈಯಲ್ಲಿ: ನಡಹಳ್ಳಿ

ಪುರಸಭೆ ಬಳಿ ₹ 1.05 ಕೋಟಿ ಅನುದಾನದ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ 
Last Updated 19 ಮಾರ್ಚ್ 2023, 16:27 IST
ಅಕ್ಷರ ಗಾತ್ರ

ವಿಜಯಪುರ: ಐದು ವರ್ಷದ ಹಿಂದೆ ಮುದ್ದೇಬಿಹಾಳ ಹೇಗಿತ್ತು, ಈಗ ಹೇಗಿದೆ ಎಂದು ಯೋಚಿಸಿ, ಮುದ್ದೇಬಿಹಾಳವನ್ನು ಬದಲಾಯಿಸುವ ಶಕ್ತಿ ಜನರ ಕೈಯಲ್ಲಿದೆ. ಮುಂದಿನ 10 ವರ್ಷ ಹೇಗೆ ಬದಲಾಯಿಸಬೇಕು ಅನ್ನೋದೂ ನಿಮ್ಮ ಕೈಯಲಿದೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಮುದ್ದೇಬಿಹಾಳ ಪುರಸಭೆ ಕಾರ್ಯಾಲಯದ ಎದುರಿಗೆ ಇರುವ 6ನೇ ವಾರ್ಡ್‌ನಲ್ಲಿ ₹ 1.5 ಕೋಟಿ ಎಸ್‍ಎಫ್‍ಸಿ ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ರಸ್ತೆ ಅಭಿವೃದ್ಧಿಗೆ ಎಲ್ಲಿಂದ ಅನುದಾನ ತರುತ್ತಾರೆ ಎಂದು ಕೆಲವರು ಪ್ರಶ್ನಿಸುತ್ತಾರೆ. ನಾನು ಯಾವ ಇಲಾಖೆಯಿಂದ ಅನುದಾನ ತಂದರೆ ನಿಮಗೇಕೆ ಚಿಂತೆ. ನಿಮಗೆ ಗುಣಮಟ್ಟದ ರಸ್ತೆ ಮಾಡಿಕೊಟ್ಟರೆ ಸಾಕಲ್ಲವೆ, ಇದಕ್ಕೆ ಖುಷಿ ಪಡಬೇಕಲ್ಲವೆ. ನಾನು ಎಲ್ಲಿಂದಲೂ ಲೂಟಿ ಮಾಡಿ ತಂದಿಲ್ಲ. ಸರ್ಕಾರದಿಂದ ಅನುದಾನ ತಂದಿದ್ದೇನೆ ಎಂದು ತಮ್ಮ ವಿರೋಧಿಗಳಿಗೆ ಚಾಟಿ ಬೀಸಿದರು.

ಪುರಸಭೆಗೆ ಬಂದಿರುವ ಎಸ್‍ಎಫ್‍ಸಿ ವಿಶೇಷ ಅನುದಾನ ಮುಖ್ಯಮಂತ್ರಿಯವರ ವಿವೇಚನಾ ಕೋಟಾದ ಅಡಿಯಲ್ಲಿ ಮಂಜೂರಾಗಿದ್ದು, ಯಾವ ಇಲಾಖೆಗೂ ಸಂಬಂಧಿಸಿದ್ದಲ್ಲ. ಇದು ಪುರಸಭೆ ಅನುದಾನವಲ್ಲ ಎಂದರು.

ನಡಹಳ್ಳಿ ಹೇಗೆ ಉದ್ಯೋಗ ಸೃಷ್ಟಿಸುತ್ತಾರೆ ಅಂತ ಕೇಳ್ತಾರೆ. ನಿಮಗೆ ಸೃಷ್ಟಿ ಮಾಡುವ ಯೋಚನೆಯೇ ಇಲ್ಲ. ನನಗೆ ಅದೇ ಯೋಚನೆ, ಅಂದ ಮೇಲೆ ಸೃಷ್ಟಿ ಮಾಡಿ ತೋರಿಸುತ್ತೇನೆ. ನಾನು ರಾಜಕೀಯಕ್ಕಾಗಿ, ಅಧಿಕಾರದ ಅಹಂ ತೋರಿಸುವುದಕ್ಕಾಗಿ ಮತವನ್ನು ದಾನ ಮಾಡಿ ಎಂದು ಜನರನ್ನು ಕೇಳಲ್ಲ. ನಾನು ಜನ ಕಲ್ಯಾಣಕ್ಕಾಗಿ, ಮಕ್ಕಳ ಭವಿಷ್ಯ ಕಟ್ಟುವುದಕ್ಕಾಗಿ, ಭವಿಷ್ಯದಲ್ಲಿ ಈ ಊರನ್ನು ಉತ್ತಮ ನಗರವನ್ನಾಗಿ ಕಟ್ಟಲು ಮನೆಮನೆಗೆ ಆಶಿರ್ವಾದ ಬೇಡಿ ಬರುತ್ತೇನೆ ಎಂದರು.

ನಾನು ಪ್ರತಿ ಹಳ್ಳಿಯಲ್ಲಿ ಜನರ ನಾಡಿ ಮಿಡಿತ ಅರಿತಿದ್ದೇನೆ. ಈ ಬಾರಿ ಅಲ್ಪಸಂಖ್ಯಾತರೂ ಹೆಚ್ಚಿನ ಸಂಖ್ಯೆಯಲ್ಲಿ ಆಶೀರ್ವದಿಸುವುದಾಗಿ ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಅತಿ ಹೆಚ್ಚು ಮತಗಳ ಅಂತರದಿಂದ ಮತ್ತೇ ವಿಧಾನಸೌಧಕ್ಕೆ ಹೋಗುತ್ತೇನೆ. ಮತ್ತೇ ಅಭಿವೃದ್ದಿಗಾಗಿ ಅತಿ ಹೆಚ್ಚು ಅನುದಾನ ತರುತ್ತೇನೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.

ಹಿರಿಯರಾದ ಜಗನ್ನಾಥ ನಾವಡ, ಡಿ.ಬಿ.ವಡವಡಗಿ, ಪ್ರಭು ಕಡಿ ಮಾತನಾಡಿದರು. ರವಿ ತಡಸದ, ಡಾ.ಚಂದ್ರಶೇಖರ ಶಿವಯೋಗಿಮಠ, ನಿವೃತ್ತ ಅಧಿಕಾರಿ ಉಪ್ಪಲದಿನ್ನಿ ಇದ್ದರು.

ಭೂಮಿ ಪೂಜೆ ನೆರವೇರಿಸಿದ ಶಾಸಕರನ್ನು ಬಡಾವಣೆಯ ಜನತೆಯ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಬಸಯ್ಯ ನಂದಿಕೇಶ್ವರಮಠ ಕಾರ್ಯಕ್ರಮ ನಿರ್ವಹಿಸಿದರು.

***
ಚುನಾವಣೆಯನ್ನು ಜನರ ಪ್ರೀತಿಯಿಂದ ಗೆಲ್ಲೋಣ, ಪ್ರೀತಿಯಿಂದ ಜನರ ಮನೆ ಬಾಗಿಲಿಗೆ ಹೋಗೋಣ. ಚುನಾವಣೆಯಲ್ಲಿ ಕಲುಷಿತ ವಾತಾವರಣ ನಿರ್ಮಿಸಲು ಮುಂದಾಗಬೇಡಿ ಎಂದು ದೊಡ್ಡವರಿಗೆ ಕೈಮುಗಿದು ಕೇಳುತ್ತೇನೆ

-ಎ.ಎಸ್.ಪಾಟೀಲ ನಡಹಳ್ಳಿ, ಶಾಸಕ, ಮುದ್ದೇಬಿಹಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT