ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ವಂಚಿತ ಲೊಟಗೇರಿ ಗ್ರಾಮ

ಮುಳುಗಡೆ ಸಂತ್ರಸ್ತರಿಗೆ ಸೌಲಭ್ಯ, ಯೋಜನೆ ಗಗನ ಕುಸುಮ
Last Updated 11 ಅಕ್ಟೋಬರ್ 2022, 10:32 IST
ಅಕ್ಷರ ಗಾತ್ರ

ನಾಲತವಾಡ: ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ತಾಲ್ಲೂಕಿನ ಪುಟ್ಟ ಗ್ರಾಮ ಲೊಟಗೇರಿಯಲ್ಲಿ ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣಿಸುತ್ತದೆ.

ಬಿಜ್ಜೂರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಗ್ರಾಮಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಮನವಿ ಮಾಡಿದರೂ ಯಾರೂ ಸ್ಪಂದಿಸುತ್ತಿಲ್ಲ ಎನ್ನುವುದು ಗ್ರಾಮಸ್ಥರ ದೂರಾಗಿದೆ.

ಪುಟ್ಟ ಗ್ರಾಮವಾದರೂ ಇಲ್ಲಿನ ಸಮಸ್ಯೆಗಳು ಮಾತ್ರ ಬೆಟ್ಟದಷ್ಟಿವೆ. ಕೃಷ್ಣಾ ನದಿಯಿಂದ ಮುಳುಗಡೆಗೊಂಡು ಸಂತ್ರಸ್ತಗೊಂಡಿದ್ದರೂ ಹಲವು ಸೌಲಭ್ಯಗಳು, ಯೋಜನೆ ಇಲ್ಲಿನ ಜನತೆಗೆ ಗಗನ ಕುಸುಮವಾಗಿದೆ.

ಈ ಗ್ರಾಮ ಸಂಪರ್ಕದ ರಸ್ತೆ ಸಂಪೂರ್ಣ ಹದಗೆಟ್ಟಿದೆ.ಚರಂಡಿ ಹೂಳು ತುಂಬಿ ತುಂಬಿದ್ದು, ಕಸ ತೆಗೆದು ಸ್ವಚ್ಛಗೊಳಿಸದೇ ಇರುವುದರಿಂದ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇನ್ನೊಂದಡೆ ಚರಂಡಿಯೇ ಇಲ್ಲದಾಗಿದ್ದು, ಗ್ರಾಮದಲ್ಲಿ ನೈರ್ಮಲ್ಯದ ಸಮಸ್ಯೆ ಎದುರಾಗಿದೆ.

ಸೊಳ್ಳೆಗಳ ಹಾವಳಿ ವಿಪರೀತವಾಗಿದ್ದು, ಜನರು ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿದ್ದಾರೆ. ಗ್ರಾಮದಲ್ಲಿ ಆಸ್ಪತ್ರೆಯೂ ಇಲ್ಲ, ಖಾಸಗಿ ವೈದ್ಯರೂ ಗ್ರಾಮಕ್ಕೆ ಬರುವುದಿಲ್ಲ.

ಅಪಘಾತ, ಅನಾರೋಗ್ಯ, ಹೆರಿಗೆಯಂತಹ ತುರ್ತು ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ವಾಹನಗಳಿಲ್ಲದೇ ನಡುರಸ್ತೆಯಲ್ಲಿ ಹೆರಿಗೆಯಾದ ಘಟನೆಗಳೂ ನಡೆದಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ರೈತರೇ ತುಂಬಿರುವ ಈ ಗ್ರಾಮದಲ್ಲಿ ಪಶುಚಿಕಿತ್ಸಾಲಯವಂತೂ ಇಲ್ಲವೇ ಇಲ್ಲ. ರೋಗಪೀಡಿತ ಎತ್ತು, ಆಡು, ಕುರಿ, ಹಸು, ಎಮ್ಮೆಯನ್ನು ಪಕ್ಕದ ನಾಲತವಾಡ ಪಶು ಆಸ್ಪತ್ರೆಗೆ ಕೊಂಡೊಯ್ಯಬೇಕು.

ಮಕ್ಕಳ ಓದಿಗಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದ್ದು, ಶಿಕ್ಷಕರ ಕೊರತೆಯ ನಡುವೆಯೂ 8ನೇ ತರಗತಿಯವರಿಗೆ ಶಿಕ್ಷಣ ಪಡೆಯಬಹುದಾಗಿದೆ. ಶಾಲೆಯಲ್ಲಿ ಶೌಚಾಲಯ ಇಲ್ಲದೇ ವಿದ್ಯಾರ್ಥಿನಿಯರಿಗೆ ತುಂಬಾ ತೊಂದರೆಯಾಗಿದೆ.

ಪ್ರೌಢ ಶಿಕ್ಷಣಕ್ಕಾಗಿ ಗ್ರಾಮದ ಮಕ್ಕಳು ಪಕ್ಕದ ನಾಲತವಾಡ ಪಟ್ಟಣಕ್ಕೆ ತೆರಳುತ್ತಾರೆ. ಆದರೆ ಕಚ್ಚಾ ರಸ್ತೆಯಲ್ಲಿ ತಿರುಗಾಡುವುದೇ ಸವಾಲಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ಇಲ್ಲದೇ ಇರುವುದರಿಂದ ಮಧ್ಯದಲ್ಲಿಯೇ ಶಾಲೆ ಬಿಡುವುದು ಸಾಮಾನ್ಯವಾಗಿದೆ.

ಲೊಟಗೇರಿಯ ಗ್ರಾಮದಲ್ಲಿ ವಿದ್ಯುತ್ ಕಂಬಗಳಿವೆ ಆದರೆ ಕಂಬಗಳಲ್ಲಿರುವ ವಿದ್ಯುತ್ ಬಲ್ಬ್ ಗಳು ಉರಿಯದೆ ಹಲವು ವರ್ಷಗಳೇ ಗತಿಸಿದ್ದು, ಕತ್ತಲೆಯಲ್ಲೇ ಜೀವನ ಕಳೆಯಬೇಕಿದೆ ಎಂದು ಗ್ರಾಮದ ಲಕ್ಕಪ್ಪ ನಾಗರಬೆಟ್ಟ ದೂರಿದರು.

ಗ್ರಾಮದ ಜನರು ಬಯಲು ಶೌಚಾಲಯವನ್ನು ಅನಿವಾರ್ಯವಾಗಿ ರೂಢಿಸಿಕೊಂಡಿದ್ದಾರೆ. ಬಯಲು ಶೌಚಾಲಯದಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವ ಗ್ರಾಮದ ಮಹಿಳೆಯರು ರಾತ್ರಿ ಸಮಯದಲ್ಲಿ ಬಹಿರ್ದೆಸೆಗೆ ಚಿಮಣಿ ಬೆಳಕಿನಲ್ಲಿ ತೆರಳುವ ಪರಿಸ್ಥಿತಿ ಬಂದೊದಗಿದೆ.

ಲೊಟಗೇರಿ ಗ್ರಾಮಕ್ಕೆ ಬಸ್‌ಸಂಚಾರ ಅಸಮರ್ಪಕವಾಗಿದೆ. ನಾಲತವಾಡದಿಂದ ನೇರವಾಗಿ ಲೊಟಗೇರಿಗೆ ಹೊಸ ರಸ್ತೆ ನಿರ್ಮಾಣವಾಗಿ ನೇರ ಬಸ್ ಸಂಚಾರ ಎಂದು ಪ್ರಾರಂಭವಾಗುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಆರ್ ಒ ಘಟಕ ಸ್ಥಾಪನೆಯಾಗಿ 10 ವರ್ಷಗಳಾದರೂ ಒಂದೇ ಒಂದು ಹನಿ ಶುದ್ಧ ನೀರು ಪೂರೈಕೆ ಆಗಿಲ್ಲ. ಇದೀಗ ಘಟಕ ಸಂಪೂರ್ಣ ಶಿಥಿಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT