ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಗಾರಿಗೂ ಮುನ್ನ 18 ದಿನ ಕಾಲುವೆಗಿಲ್ಲ ನೀರು

ಆಲಮಟ್ಟಿ ಜಲಾಶಯ ವ್ಯಾಪ್ತಿಯಲ್ಲಿ ವಾರಾಬಂಧಿ ಅವಧಿ ಹೆಚ್ಚಳ
Last Updated 23 ನವೆಂಬರ್ 2022, 23:15 IST
ಅಕ್ಷರ ಗಾತ್ರ

ಆಲಮಟ್ಟಿ: ಮುಂಗಾರು ಹಂಗಾಮಿಗೆ ಇದೇ ನ.23 ರಿಂದ ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿತ್ತು. ಹಿಂಗಾರು ಹಂಗಾಮಿಗೆ ಕಾಲುವೆಗೆ ನೀರಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಡಿ 12 ರವರೆಗೆ ಕಾಯಬೇಕಿದೆ.

ಪ್ರತಿ ವರ್ಷ ಡಿ.1 ಹಿಂಗಾರು ಹಂಗಾಮಿಗೆ ಕಾಲುವೆಗೆ ನೀರು ಹರಿಸುವುದನ್ನು ಆರಂಭಿಸಲಾಗುತ್ತಿತ್ತು. ಆದರೆ ಕಳೆದ ವರ್ಷ ಡಿ.8 ರಿಂದ ಆರಂಭಿಸಲಾಗಿದೆ. ಈ ಬಾರಿ ನೀರಿನ ಸಂಗ್ರಹ ಸಾಕಷ್ಟಿದ್ದರೂ, ನೀರು ಹರಿಸುವ ಅವಧಿ ಇನ್ನೂ ನಾಲ್ಕು ದಿನ ಮುಂದೂಡಿ ಡಿ.12 ರಿಂದ ಹರಿಸಲು ನಿರ್ಧರಿಸಲಾಗಿದೆ.

ಈರುಳ್ಳಿಗೆ ದೊಡ್ಡ ಹೊಡೆತ:

ಹಿಂಗಾರು ಹಂಗಾಮಿಗೆ ಆಲಮಟ್ಟಿ ಜಲಾಶಯ ವ್ಯಾಪ್ತಿಯಲ್ಲಿ ಹೆಚ್ಚಾಗಿ ಈರುಳ್ಳಿ, ಜೋಳ, ಗೋಧಿ, ಶೇಂಗಾ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡುತ್ತಾರೆ. ಈರುಳ್ಳಿಗೆ ಪ್ರತಿ ವಾರಕ್ಕೊಮ್ಮೆ ನೀರು ಅಗತ್ಯ. ಹಿಂಗಾರು ಆರಂಭಕ್ಕೂ ಮುನ್ನ 18 ದಿನಗಳ ಕಾಲ ಕಾಲುವೆಗೆ ಬಂದ್ ಮಾಡುತ್ತಿರುವುದು ರೈತರಿಗೆ ದೊಡ್ಡ ಹೊಡೆತ ಎಂದು ರೈತ ಶಿವಾನಂದ ಮುರನಾಳ ಆರೋಪಿಸಿದರು.

ಸದ್ಯ ದ್ವಿಋತು ಬೆಳೆಯಾಗಿ ಈರುಳ್ಳಿ ಬೆಳೆಯಿದ್ದು, 18 ದಿನಗಳ ಕಾಲ ನೀರು ಹರಿಸಲಾಗುವುದಿಲ್ಲ, ಇದರಿಂದ ಈರುಳ್ಳಿ ಬೆಳೆಗೆ ನಷ್ಟವಾಗಲಿದೆ ಎಂದರು.

ನ.24 ರಿಂದ ಡಿ.11 ರವರೆಗೆ ಹಿಂಗಾರು ಬಿತ್ತನೆಗೆ ಅವಕಾಶ ಕಲ್ಪಿಸಿ ಕಾಲುವೆಗೆ ನೀರು ಬಂದ್ ಮಾಡಲಾಗುತ್ತಿದೆ.

ಹೆಚ್ಚಳವಾದ ವಾರಾಬಂಧಿ:

ಮೊದಲೆಲ್ಲಾ 8 ದಿನ ವಾರಾಬಂಧಿ ಅವಧಿಯಿತ್ತು. ಇದೇ ಮುಂಗಾರು ಹಂಗಾಮಿಗೂ 8 ದಿನ ಬಂದ್ ಅವಧಿಯ ವಾರಾಬಂಧಿ ಇತ್ತು. ಆದರೆ, ಈಗ 10 ದಿನಕ್ಕೆ ಬಂದ್ ಅವಧಿ ಹೆಚ್ಚಿಸಲಾಗಿದೆ.

ನೀರು ಬಂದ್ ಅವಧಿಯನ್ನು ಹೆಚ್ಚಳ ಮಾಡಿದ್ದು, ಇದೇ ಆಲಮಟ್ಟಿ ಭಾಗದ ರೈತರಿಗೆ ಹಿಂಗಾರು ಬೆಳೆಗೆ ಸಮಸ್ಯೆಯಾಗಲಿದೆ ಎಂಬುದು ರೈತರ ವಾದ.

ಆಲಮಟ್ಟಿ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ ಕೇವಲ ನಿತ್ಯ 0.1 ಟಿಎಂಸಿ ಅಡಿಯಷ್ಟು ನೀರು ಅಗತ್ಯ. ಆದರೆ, ನಾರಾಯಣಪುರ ಜಲಾಶಯ ವ್ಯಾಪ್ತಿಯಲ್ಲಿ ನಿತ್ಯವೂ 0.9 ಟಿಎಂಸಿ ಅಡಿ ನೀರು ಅಗತ್ಯ. ಎರಡೂ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಯುವ ಬೆಳೆ ಸಂಪೂರ್ಣ ಬೇರೆ. ನಾರಾಯಣಪುರ ಭಾಗದಲ್ಲಿ ಹೆಚ್ಚಾಗಿ ನಿಷೇಧಿತ ಬೆಳೆ ಭತ್ತ ಬೆಳೆಯುತ್ತಾರೆ. ಅವರಿಗೆ ನೀರಿನ ಅಗತ್ಯ ಹೆಚ್ಚು. ಆದರೆ, ಆಲಮಟ್ಟಿ ಭಾಗದ ಬೆಳೆಗಳಿಗೆ ನೀರಿನ ಬೇಡಿಕೆ ಕಡಿಮೆ. ಹೀಗಾಗಿ ಏ.30 ರವರೆಗೂ ಆಲಮಟ್ಟಿ ಭಾಗದ ಬೆಳೆಗಳಿಗೆ ನೀರು ಹರಿಸಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆಗ್ರಹಿಸಿದರು.

ಅವೈಜ್ಞಾನಿಕ ವಾರಾಬಂಧಿ ಪದ್ಧತಿಯನ್ನು ಬದಲಾಯಿಸಬೇಕು. ಅದನ್ನು 8 ದಿನ ಚಾಲು 3 ದಿನ ಬಂದ್ ಅವಧಿಗೆ ಇಳಿಸಬೇಕು ಎಂದರು.

ನೀರಿನ ಸುಳ್ಳು ಲೆಕ್ಕ:

ಭಾಷ್ಪಿಭವನ, ಕೈಗಾರಿಕೆಗೆ ಬಳಕೆ ಅಂತ ಅಧಿಕಾರಿಗಳು ಸುಳ್ಳು ಲೆಕ್ಕವನ್ನು ಕೆಬಿಜೆಎನ್ ಎಲ್ ಅಧಿಕಾರಿಗಳು ಕೊಡುತ್ತಿದ್ದು, ಅದಕ್ಕಾಗಿ 40 ಟಿಎಂಸಿ ಅಡಿ ನೀರು ತೆಗೆದಿರಿಸುವುದು ಯಾವ ನ್ಯಾಯ? ಈ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಬೇಕು, ಇದರಲ್ಲಿಯೇ ನೀರು ಉಳಿಸಿ ಕಾಲುವೆಗೆ ನೀರು ಹರಿಸಬೇಕು ಎಂದು ಅರವಿಂದ ಕುಲಕರ್ಣಿ ಆಗ್ರಹಿಸಿದರು.

ಅಧಿಕಾರಿಗಳು ಭಾಷ್ಪಿಭವನ ಹೆಸರಿನಲ್ಲಿ ನೀರು ಉಳಿಸಿ, ಅದನ್ನು ಜಿಂದಾಲ್ ಸೇರಿ ನಾನಾ ಕೈಗಾರಿಕೆಗಳಿಗೆ ಅನಧಿಕೃತವಾಗಿ ನೀರನ್ನು ಬೇಸಿಗೆಯಲ್ಲಿ ನೀಡುತ್ತಾರೆ ಎಂದು ಆರೋಪಿಸಿದರು.

ವಾರಾಬಂಧಿ ಪದ್ಧತಿಯನ್ನು ಕಟ್ಟುನಿಟ್ಟುಗೊಳಿಸಿ, ಕಾಲುವೆಗೆ ಅಳವಡಿಸಿದ ಗೇಟ್‌ಗಳನ್ನು ನಿರ್ವಹಿಸಲು ಸಮರ್ಪಕ ಸಿಬ್ಬಂದಿ ನೇಮಿಸಿ, ಕಾಲುವೆಯ ಕೊನೆಯ ಅಂಚಿನವರೆಗೂ ನೀರು ತಲುಪಬೇಕು.

ಬಸವರಾಜ ಕುಂಬಾರ, ಅಧ್ಯಕ್ಷ, ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT