ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ | ಧಾರಾಕಾರ ಮಳೆ; ಹಿಂಗಾರು ಬಿತ್ತನೆಗೆ ಹದ

ಬರ, ಬಿಸಿಲಿನಿಂದ ಬೇಸತ್ತಿದ್ದ ಜನರಲ್ಲಿ ಸಂತಸ: ಕೆಲವೆಡೆ ರಸ್ತೆಗಳು ಜಲಾವೃತ
Published 9 ನವೆಂಬರ್ 2023, 16:10 IST
Last Updated 9 ನವೆಂಬರ್ 2023, 16:10 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರ ನಗರ, ಬಸವನ ಬಾಗೇವಾಡಿ ಪಟ್ಟಣ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ಗುಡುಗು ಸಹಿತ ಉತ್ತಮ ಮಳೆಯಾಗಿದೆ. 

ಬರ, ಬಿಸಿಲಿನಿಂದ ತತ್ತರಿಸಿರುವ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವುದು ಜನರಲ್ಲಿ ಖುಷಿ ಮೂಡಿಸಿದೆ. ವಿಜಯಪುರ ನಗರ ಹಾಗೂ ಬಸವನ ಬಾಗೇವಾಡಿ ಪಟ್ಟಣದಲ್ಲಿ ಮಧ್ಯಾಹ್ನ ಸುಮಾರು ಒಂದು ತಾಸು ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತವಾಗಿದ್ದವು.

ತಗ್ಗು ಪ್ರದೇಶದಲ್ಲಿ ಮೊಣಕಾಲುದ್ದ ನೀರು ನಿಂತಿತ್ತು. ಹೊಲ, ಹಳ್ಳಗಳಲ್ಲಿ ಮಳೆ ನೀರು ನಿಂತಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಆಗಸದಲ್ಲಿ ದಟ್ಟ ಮೋಡ ಕವಿದಿದ್ದು, ಮಳೆಗಾಲದ ವಾತಾವರಣ ಕಂಡುಬರುತ್ತಿದೆ. 

ವಿಜಯಪುರ ನಗರದ ಬಸವೇಶ್ವರ ವೃತ್ತದಿಂದ ಸ್ಟೇಷನ್‌ ರಸ್ತೆ ಬದಿಯಲ್ಲಿ ವ್ಯಾಪಾರಸ್ಥರು ದೀಪಾವಳಿ ಹಬ್ಬದ ಅಂಗವಾಗಿ ಮಾರಾಟಕ್ಕಾಗಿ ನೇತುಹಾಕಿದ್ದ ವಿವಿಧ ಬಗೆಯೆ ಹೂವಿನ ಹಾರಗಳು, ತೋರಣಗಳು, ಹಣತೆಗಳು ಮಳೆಯಲ್ಲಿ ತೋಯ್ದವು.

ದೀಪಾವಳಿ ಪೂಜೆಯ ಅಂಗವಾಗಿ ಅಂಗಡಿ, ಮಳಿಗೆಗಳ ಎದುರು ಹಾಕಲಾಗಿರುವ ಶಾಮೀಯಾನ, ಆಕಾಶಬುಟ್ಟಿ, ಬಣ್ಣ ಬಣ್ಣದ ವಿದ್ಯುತ್‌ ಬಲ್ಬ್‌ಗಳ ಸರ, ತೋರಣಗಳು ಮಳೆಯಲ್ಲಿ ತೊಯ್ದ ಪರಿಣಾಮ ವ್ಯಾಪಾರ, ವಹಿವಾಟಿಗೆ ಅಡಚಣೆಯಾಯಿತು.

ಮಳೆಯಿಂದ ಹಿಂಗಾರು ಬಿತ್ತನೆಗೆ ಅನುಕೂಲವಾಗಿದೆ. ಅಲ್ಲದೆ, ಬರದ ನಡುವೆಯೂ ಅಲ್ಪಸ್ವಲ್ಪ ಬೆಳೆದ ಮುಂಗಾರು ಬೆಳೆಗೂ ಅನುಕೂಲವಾಗಿದೆ. ಕೊಯ್ಲಿಗೆ ಬಂದಿರುವ ಕೆಲವು ಬೆಳೆಗೆ ಅನಾನುಕೂಲವಾಗಿದೆ.

ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಬುಧವಾರ ಬೆಳಿಗ್ಗೆ 8ರಿಂದ ಗುರುವಾರ ಬೆಳಿಗ್ಗೆ 8 ಗಂಟೆ ವರೆಗಿನ ಅವಧಿಯಲ್ಲಿ ಇಂಡಿ 46.4 ಮಿ.ಮೀ. ಮಳೆಯಾಗಿದೆ. ಉಳಿದಂತೆ ತಿಕೋಟಾ 40.2, ಝಳಕಿ 32, ಚಡಚಣ 31, ಹೂವಿನ ಹಿಪ್ಪರಗಿ 22.6, ಹೋರ್ತಿ 23.8, ಆಲಮಟ್ಟಿ 20, ತಾಳಿಕೋಟಿ 18.4, ಅರೇಶಂಕರ 4, ಮಟ್ಟಿಹಾಳ 5, ನಾಗಠಾಣ 6.4, ಭೂತನಾಳ 11.6,  ಕುಮಟಗಿ 13.2, ಕನ್ನೂರ 9.4, ಬಬಲೇಶ್ವರ 4.6, ನಾದ ಬಿ ಕೆ 8.4, ಅಗರಖೇಡ 1,  ಹಲಸಂಗಿ 18,  ಮುದ್ದೆಬಿಹಾಳ 2.5, ನಾಲತವಾಡ 9.7, ಢವಳಗಿ 5, ಸಿಂದಗಿ 14, ಆಲಮೇಲ 3.7, ಸಾಸಾಬಾಳ 5.2, ರಾಮನಹಳ್ಳಿ 10.4, ಕಡ್ಲೆವಾಡ 11, ಬಸವನ ಬಾಗೇವಾಡಿ 2.1 ಮಿ.ಮೀ. ಮಳೆಯಾಗಿದೆ.

ವಿಜಯಪುರ ನಗರದಲ್ಲಿ ಗುರುವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆಯಿಂದ ಜಲಾವೃತವಾಗಿದ್ದ ಮೀನಾಕ್ಷಿ ಚೌಕ –ಪ್ರಜಾವಾಣಿ ಚಿತ್ರ
ವಿಜಯಪುರ ನಗರದಲ್ಲಿ ಗುರುವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆಯಿಂದ ಜಲಾವೃತವಾಗಿದ್ದ ಮೀನಾಕ್ಷಿ ಚೌಕ –ಪ್ರಜಾವಾಣಿ ಚಿತ್ರ

ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ ವ್ಯಾಪಾರಸ್ಥರ ಪರದಾಟ ಕೊಯ್ಲಿಗೆ ಬಂದಿರುವ ಬೆಳೆಗಳಿಗೆ ಅನಾನುಕೂಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT