ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ನೌಕರರ ಮುಷ್ಕರ; ರಸ್ತೆಗಿಳಿಯದ ಬಸ್‌

ಜಿಲ್ಲೆಯ 621 ಮಾರ್ಗಗಳಲ್ಲೂ ಬಸ್‌ ಸಂಚಾರ ಸ್ಥಗಿತ; ಬಸ್‌ ನಿಲ್ದಾಣಗಳು ಬಣಬಣ
Last Updated 12 ಡಿಸೆಂಬರ್ 2020, 14:12 IST
ಅಕ್ಷರ ಗಾತ್ರ

ವಿಜಯಪುರ: ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿ ರಾಜ್ಯ ವ್ಯಾಪಿ ನಡೆಸುತ್ತಿರುವ ಸಾರಿಗೆ ನೌಕರರ ಮುಷ್ಕರಕ್ಕೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಸಾರಿಗೆ ನೌಕರರು ಕೆಲಸಕ್ಕೆ ಗೈರಾಗುವ ಮೂಲಕ ದಿನಪೂರ್ತಿ ಮುಷ್ಕರ ನಡೆಸಿದರು. ಪರಿಣಾಮ ಸಾರಿಗೆ ಸಂಸ್ಥೆಯ ಬಸ್‌ಗಳು ರಸ್ತೆಗಿಳಿಯದೇ ಡಿಪೊದಲ್ಲೇ ನಿಂತಿದ್ದವು. ಇದರಿಂದಾಗಿ ಜಿಲ್ಲೆಯ ವಿವಿಧೆಡೆ ಸಂಪರ್ಕ ಕಡಿತವಾದ ಕಾರಣ ಜನ ಸಂಚಾರ ವಿರಳವಾಗಿತ್ತು. ನಗರದ ಮಾರುಕಟ್ಟೆಯಲ್ಲಿ ವ್ಯಾಪಾರ, ವಹಿವಾಟು ಕಳೆಗುಂದಿತ್ತು.

ದಿನ 24 ತಾಸು ಪ್ರಯಾಣಿಕರು ಹಾಗೂ ಬಸ್‌ಗಳ ಸಂಚಾರದಿಂದ ಗಿಜಿಗುಡುತ್ತಿದ್ದ ನಗರದ ಕೇಂದ್ರ ಬಸ್‌ ನಿಲ್ದಾಣ ಮತ್ತು ಸ್ಯಾಟಲೈಟ್‌ ಬಸ್‌ ನಿಲ್ದಾಣವು ಮುಷ್ಕರದಿಂದಾಗಿ ಶನಿವಾರ ಬಣಗುಡುತ್ತಿದ್ದವು.

ದೂರದ ನಗರ, ಪಟ್ಟಣಗಳಿಗೆ ತೆರಳಬೇಕಾಗಿದ್ದ ಹಾಗೂ ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಪ್ರಯಾಣಿಕರು ಬಸ್‌ ನಿಲ್ದಾಣದಲ್ಲೇ ಶುಕ್ರವಾರ ರಾತ್ರಿ ಚಳಿಯಲ್ಲೇ ಕಳೆದರು. ಕೆಲವರು ಬೆಳಿಗ್ಗೆ ಖಾಸಗಿ ವಾಹನಗಳಿಗೆ ದುಪ್ಪಟ್ಟು ಹಣ ನೀಡಿ ತಮ್ಮ ತಮ್ಮ ಊರುಗಳಿಗೆ ತೆರಳಿದರು.

ಪ್ರಯಾಣಿಕರ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡಟಂಟಂ, ಆಟೊ, ಖಾಸಗಿ ಮಿನಿ ಬಸ್‌ಗಳು ಚಾಲಕ, ನಿರ್ವಾಹಕರು, ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿ, ಕರೆದುಕೊಂಡು ಹೋಗುತ್ತಿದ್ದ ದೃಶ್ಯ ನಗರದಲ್ಲಿ ಕಂಡುಬಂದಿತು.

ಪುಣೆಗೆ ತೆರಳಲು ನಗರ ಕೇಂದ್ರ ಬಸ್‌ ನಿಲ್ದಾಣದಲ್ಲಿ ಕಾಯುತ್ತಾ ಕುಳಿತ್ತಿದ್ದ ದೇವರಹಿಪ್ಪರಗಿಯ ನಿವಾಸಿ ಸುರೇಶ ಉಸಾಳಕರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ಜಾಲವಾದಿಯಲ್ಲಿ ಸಂಬಂಧಿಕರ ಮನೆಯೊಂದರಲ್ಲಿ ಕಾರ್ಯಕ್ರಮಕ್ಕೆ ನಾಲ್ಕು ದಿನಗಳ ಹಿಂದೆ ಬಂದಿದ್ದೆ. ಭಾನುವಾರ ಬೆಳಿಗ್ಗೆ ಪುಣೆಯಲ್ಲಿ ಇರಬೇಕಾಗಿತ್ತು. ಹೀಗಾಗಿ ಬೆಳಿಗ್ಗೆಯೇ ವಿಜಯಪುರಕ್ಕೆ ಬಂದಿದ್ದೇನೆ. ಬಸ್‌ ಇಲ್ಲದೇ ಇರುವುದರಿಂದ ತೀವ್ರ ಸಮಸ್ಯೆಯಾಗಿದೆ. ಸಂಜೆ ರೈಲಿನ ಮೂಲಕ ಪುಣೆಗೆ ತೆರಳಬೇಕು ಎಂದು ಹೇಳಿದರು.

ಕಲಬುರ್ಗಿಗೆ ತೆರಳಲು ಬಸ್‌ ಇಲ್ಲದೇ ಪರದಾಡುತ್ತಿದ್ದ ಮಹಮ್ಮದ್‌ ನಿಜಾಮ್ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ‌, ‘ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಕೆಲಸದ ನಿಮಿತ್ತ ವಿಜಯಪುರಕ್ಕೆ ಕಾರೊಂದರಲ್ಲಿ ಶನಿವಾರ ಬೆಳಿಗ್ಗೆ ಬಂದ್ದೇನೆ. ಇಲ್ಲಿಂದ ಕಲಬುರ್ಗಿಗೆ ಹೋಗಬೇಕು. ಖಾಸಗಿ ವಾಹನಗಳೂ ಸಿಗುತ್ತಿಲ್ಲ. ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

‘ತುರ್ತು ಕೆಲಸದ ನಿಮಿತ್ತ ಹುಬ್ಬಳ್ಳಿಗೆ ಹೊರಟಿದ್ದೆ. ಬಸ್‌ ಸಿಗಬಹುದು ಎಂದು ನಿಲ್ದಾಣಕ್ಕೆ ಬಂದೆ. ಆದರೆ, ಬಸ್‌ ಇಲ್ಲದೇ ಇರುವುದರಿಂದ ಮರಳಿ ಮನೆಗೆ ಹೊರಟಿರುವೆ’ ಎಂದು ಬಸವನ ನಗರದ ನಿವಾಸಿ ಶಂಕರ ಚಲವಾದಿ ಹೇಳಿದರು.

ಜಿಲ್ಲೆಯಾದ್ಯಂ ಸಾರಿಗೆ ನೌಕರರು ಶಾಂತಿಯುತವಾಗಿ ಮುಷ್ಕರ ನಡೆಸಿದರು. ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ.

***

ಮುಷ್ಕರದಲ್ಲಿ ಎಲ್ಲ ನೌಕರರು ಭಾಗಿಯಾದ ಕಾರಣ ಜಿಲ್ಲೆಯ 621 ರೂಟ್‌ಗಳಲ್ಲಿ ಬಸ್‌ ಸಂಚಾರ ಸ್ಥಗಿತವಾಗಿತ್ತು. ವಾತಾವರಣ ತಿಳಿಯಾದರೆ ನಾಳೆ ಬಸ್‌ ಸಂಚಾರ ಪುನರಾರಂಭವಾಗುವ ಸಾಧ್ಯತೆ ಇದೆ.

–ನಾರಾಯಣಪ್ಪ ಕುರುಬರ, ವಿಭಾಗೀಯ ನಿಯಂತ್ರಣಾಧಿಕಾರಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT