ಬುಧವಾರ, ಆಗಸ್ಟ್ 4, 2021
22 °C
ಹೋಟೆಲ್‌, ವಸತಿ ಗೃಹ, ಪ್ರವಾಸಿ ಟ್ಯಾಕ್ಸಿ ಚಾಲಕರು, ಮಾಲೀಕರ ಪರದಾಟ

ವಿಜಯಪುರ: ಐತಿಹಾಸಿಕ ಸ್ಮಾರಕಗಳತ್ತ ಸುಳಿಯದ ಪ್ರವಾಸಿಗರು

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಗರದ ಐತಿಹಾಸಿಕ ಗೋಳಗುಮ್ಮಟ, ಇಬ್ರಾಹಿಂರೋಜಾ, ಬಾರಾ ಕಮಾನ್‌ ಸೇರಿದಂತೆ ಆದಿಲ್‌ ಶಾಹಿ ಅರಸರ ಕಾಲದ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರಿಗೆ ಸೋಮವಾರದಿಂದ ಮುಕ್ತಗೊಳಿಸಲಾಗಿದೆ. ಆದರೆ, ಕೋವಿಡ್‌ ಭೀತಿಯಿಂದ ಪ್ರವಾಸಿಗರು ಇತ್ತ ಸುಳಿಯಲಿಲ್ಲ.

ಗೋಳಗುಮ್ಮಟಕ್ಕೆ ಬೆಳಿಗ್ಗೆಯಿಂದ ಸಂಜೆ ವರೆಗೆ ಕೇವಲ 50ರಿಂದ 60 ಮಂದಿ ಸ್ಥಳೀಯರು ಮಾತ್ರ ಭೇಟಿ ನೀಡಿದ್ದಾರೆ. ಸದ್ಯ ಪ್ರವಾಸಿಗರು ವೀಕ್ಷಣೆಗೆ ಬರುವ ಸಮಯವೂ ಇದಲ್ಲ. ಹೀಗಾಗಿ ಹೊರ ಜಿಲ್ಲೆ, ರಾಜ್ಯ, ವಿದೇಶಿ ಪ್ರವಾಸಿಗರನ್ನು ನಿರೀಕ್ಷಿಸುವುದು ಕಷ್ಟ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಳಿಗ್ಗೆ 6ರಿಂದ ಸಂಜೆ 6ರ ವರೆಗೆ ಸ್ಮಾರಕಗಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಸ್ಮಾರಕ ವೀಕ್ಷಣೆಗೆ ಮುಕ್ತವಾಗಿದೆ ಎಂಬ ವಿಷಯ ಇನ್ನೂ ಜನರಿಗೆ ತಿಳಿದಿಲ್ಲ. ಜೊತೆಗೆ ಕೋವಿಡ್‌ ಭಯ ಇರುವುದರಿಂದ ಬೆರಳೆಣಿಕೆಯಷ್ಟು ಜನ ಮಾತ್ರ ಬರುತ್ತಿದ್ದಾರೆ. ರಜಾ ದಿನಗಳಂದು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ ಎಂದು ಹೇಳಿದರು.

ಸ್ಮಾರಕಗಳ ಎದುರು ಫಲಕವನ್ನು ಅಳವಡಿಸಲಾಗಿದೆ. ಅದರಲ್ಲಿ ಇರುವ ಕ್ಯೂಆರ್‌ ಕೋಡ್‌  ಸ್ಕ್ಯಾನ್‌ ಮಾಡಿ ಪ್ರವಾಸಿಗರು ಟಿಕೆಟ್‌ ಪಡೆಯಬಹುದಾಗಿದೆ. ಪ್ರವೇಶ ಶುಲ್ಕ ₹ 20 ನಿಗದಿ ಪಡಿಸಲಾಗಿದೆ ಎಂದರು.

ಮಾಸ್ಕ್‌ ಧರಿಸಿ ಬಂದವರಿಗೆ ಮಾತ್ರ ಸ್ಯಾನಿಟೈಜರ್‌ ಸಿಂಪಡಿಸಿ, ಥರ್ಮಲ್‌ ಸ್ಕ್ಯಾನರ್‌ ಮೂಲಕ ಪರೀಕ್ಷಿಸಿದ ಬಳಿಕ ಒಳಗೆ ಬಿಡಲಾಗುತ್ತಿದೆ ಎಂದು ಹೇಳಿದರು.

ಸ್ಮಾರಕಗಳ ವೀಕ್ಷಣೆಗೆ ಒಮ್ಮೆಗೆ ಎಲ್ಲರಿಗೂ ಒಳಗೆ ಬಿಡದೇ ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಎಚ್ಚರ ವಹಿಸಲಾಗುತ್ತಿದೆ. ಸ್ಮಾರಕಗಳ ಒಳಗೆ ಕೆಲವು ಕಡೆ ನಿರ್ಬಂಧವನ್ನು ವಿಧಿಸಲಾಗಿದೆ. ಕೋವಿಡ್‌ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ ಎಂದರು.

ವಿಜಯಪುರ ನಗರದಲ್ಲಿ ಇರುವ ಒಟ್ಟು 82 ಐತಿಹಾಸಿಕ ಸ್ಮಾರಕಗಳನ್ನು ಮಾರ್ಚ್‌ 14ರಿಂದ ಬಾಗಿಲು ಬಂದ್‌ ಮಾಡಲಾಗಿತ್ತು.  ಒಂದು ತಿಂಗಳ ಹಿಂದೆ 19 ಸ್ಮಾರಕಗಳನ್ನು ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಲಾಗಿತ್ತು. ಮುಸ್ಲಿಂ ಧರ್ಮ ಗುರುಗಳು, ಮುಖಂಡರು ಮಾತ್ರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಹೋಗುತ್ತಿದ್ದರು. ಪ್ರವಾಸಿಗರು ಯಾರೂ ಭೇಟಿ ನೀಡುತ್ತಿರಲಿಲ್ಲ ಎಂದು ಹೇಳಿದರು.

ಸಾಮಾನ್ಯ ದಿನಗಳಲ್ಲಿ ಗೋಳಗುಮ್ಮಟ ವೀಕ್ಷಣೆಗೆ ಒಂದು ಸಾವಿರದಿಂದ 1200 ಜನರು ಭೇಟಿ ನೀಡುತ್ತಿದ್ದರು ಎಂದು ಹೇಳಿದರು.

ಗೋಳಗುಮ್ಮಟ ಮತ್ತು ಬಾರಾಕಮಾನ್‌ ಆಸುಪಾಸಿನಲ್ಲೇ ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಕಾಣಿಸಿಕೊಂಡು, ಇಡೀ ಪ್ರದೇಶ ಸೀಲ್‌ಡೌನ್‌ ಆದ ಕಾರಣ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಲು ಅಂಜುತ್ತಿದ್ದಾರೆ.

ಪ್ರವಾಸಿಗರನ್ನೇ ನೆಚ್ಚಿಕೊಂಡ ಪ್ರವಾಸಿ ಗೈಡ್‌ಗಳು, ಟ್ಯಾಕ್ಸಿ ಮಾಲೀಕರು, ಚಾಲಕರು, ವ್ಯಾಪಾರಸ್ಥರು, ಹೋಟೆಲ್‌, ವಸತಿಗೃಹಗಳು ಮೂರು ತಿಂಗಳಿಂದ ವ್ಯಾಪಾರ, ವಹಿವಾಟು ಇಲ್ಲದೇ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು