ಶುಕ್ರವಾರ, ಡಿಸೆಂಬರ್ 2, 2022
19 °C

‘ಕಿವುಡುತನಕ್ಕೆ ಬಿಎಲ್‌ಡಿಇಯಲ್ಲಿ ಚಿಕಿತ್ಸೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಹುಟ್ಟು ಕಿವುಡುತನ ಮತ್ತು ಹಿರಿಯ ನಾಗರಿಕರಲ್ಲಿ ಉಂಟಾಗುವ ಕಿವುಡುತನ ಕಾಯಿಲೆಗಳಿಗೆ ನಗರದ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಲಭ್ಯವಿದೆ ಎಂದು ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಆರ್. ಎಸ್. ಮುಧೋಳ ಹೇಳಿದರು.

ಬಿ ಎಲ್ ಡಿ ಇ ಆಸ್ಪತ್ರೆಯ ಕಿವಿ, ಮೂಗು, ಗಂಟಲು ಹಾಗೂ ಡಿ. ಡಿ. ಆರ್. ಸಿ(ಜಿಲ್ಲಾ ಅಂಗವಿಕಲ ಪುನರ್ವಸತಿ ಕೇಂದ್ರ) ವತಿಯಿಂದ ಆಯೋಜಿಸಲಾಗಿದ್ದ ಕಿವುಡುತನ ಕುರಿತ ಜಾಗೃತಿ ಸಪ್ತಾಹ ಕಾರ್ಯಕ್ರಮವನ್ನು ಶಸ್ತ್ರಚಿಕಿತ್ಸೆಗೆ ಲಭ್ಯವಿರುವ ಹೊಸ ಅತ್ಯಾಧುನಿಕ ಉಪಕರಣಗಳಿಗೆ ಪೂಜೆ ಸಲ್ಲಿಸುವ ಮೂಲಕ ಅವರು ಉದ್ಘಾಟಿಸಿದರು.

ಬಿ ಎಲ್ ಡಿ ಇ ಆಸ್ಪತ್ರೆಯ ಕಿವಿ, ಮೂಗೂ, ಗಂಟಲು ವಿಭಾಗದಲ್ಲಿ 24 ಗಂಟೆ ಶ್ರವಣ ತಜ್ಞರು ಚಿಕಿತ್ಸೆಗೆ ಲಭ್ಯರಿರುತ್ತಾರೆ. ಇಲ್ಲಿ ಅತ್ಯಾಧುನಿಕ ಉಪಕರಣಗಳ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಕಿವಿಯ ಸೊಂಕು, ಹುಟ್ಟಿನಿಂದ ಕಿವುಡುತನ ಮತ್ತು ಹಿರಿಯ ನಾಗರಿಕರಲ್ಲಿ ಕಾಣಿಸಿಕೊಳ್ಳುವ ಕಿವುಡುತನ ಮುಂತಾದ ಕಾಯಿಲೆಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತದೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ವಿಭಾಗದ ಮುಖ್ಯಸ್ಥೆ ಡಾ. ಲತಾದೇವಿ ಮಾತನಾಡಿ, ಸಾರ್ವಜನಿಕರು ಅದರಲ್ಲೂ ಮಕ್ಕಳು ಶಬ್ಧ ಮಾಲಿನ್ಯದಿಂದಾಗಿ ಹೆಚ್ಚು ಶ್ರವಣದೋಷಕ್ಕೆ ತುತ್ತಾಗುತ್ತಿದ್ದಾರೆ. ಮೂರು ವರ್ಷದಳಗಿನ ಯಾವುದೇ ಮಗು ಎಲ್ಲರಂತೆ ಮಾತನಾಡಲು ಪ್ರಯತ್ನಿಸುತ್ತಿಲ್ಲವಾದರೆ ತಕ್ಷಣವೇ ಪಾಲಕರು ಅಥವಾ ಶಾಲಾ ಶಿಕ್ಷಕರು ಅಥವಾ ಅಂಗನವಾಡಿ ಕಾರ್ಯಕರ್ತೆಯರು ಪತ್ತೆ ಹಚ್ಚಿ ತಕ್ಷಣವೆ ಕಿವಿ, ಮೂಗೂ, ಗಂಟಲು ತಜ್ಞರನ್ನು ಭೇಟಿ ಮಾಡಿ ಸರಿಯಾದ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಸುರಕ್ಷಾ ಆರೋಗ್ಯ ಟ್ರಸ್ಟ್ ಯೋಜನೆ ಅಡಿ ಇನ್ನು ಮುಂದೆ ಬಿ. ಎಲ್. ಡಿ. ಇ. ಆಸ್ಪತ್ರೆಯಲ್ಲಿ ಅತ್ಯಾಧುನಿಕ ಶಸ್ತ್ರಚಿಕಿತ್ಸೆ  ಲಭ್ಯವಿದ್ದು ಹುಟ್ಟು ಕಿವುಡುತನ ಇರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಿದರೆ ಸಾಮಾನ್ಯ ಮಕ್ಕಳಂತೆ ಶ್ರವಣಶಕ್ತಿ ಬರುವಂತಹ ಅವಕಾಶವಿದೆ. ಈ ಶಸ್ತ್ರಚಿಕಿತ್ಸಯನ್ನು ವಿಮಾ ಯೋಜನೆಯಡಿ ಸಂಪೂರ್ಣ ಉಚಿತವಾಗಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಸಮ ಉಪಕುಲಪತಿ ಡಾ. ಅರುಣ ಇನಾಮದಾರ, ಉಪಪ್ರಾಂಶುಪಾಲ ಡಾ. ಸುಮಂಗಲಾ ಪಾಟೀಲ, ಜನರಲ್ ಮೆಡಿಸಿನ್ ಮುಖ್ಯಸ್ಥ ಡಾ. ಬಡಿಗೇರ, ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಕಲ್ಯಾಣಶೆಟ್ಟರ್‌, ಡಾ.ಶಶಿಕುಮಾರ, ಜಿಲ್ಲಾ ಅಂಗವಿಕಲ ಪುನರ್‌ ವಸತಿ ಕೇಂದ್ರದ ನೋಡಲ್ ಅಧಿಕಾರಿ ಡಾ.ಈಶ್ವರ ಬಾಗೋಜಿ,ಡಾ. ನಿತಿನ್‌,  ಡಾ. ಮನಾಲಿ, ಡಾ.ಶಶಿಕುಮಾರ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು