ಶುಕ್ರವಾರ, ಡಿಸೆಂಬರ್ 4, 2020
21 °C
ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ

ರಾಜಕೀಯವಾಗಿ ನನ್ನನ್ನು ಮುಗಿಸಲು ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಬೆಂಗಳೂರಿನಿಂದ ವಿಜಯಪುರದ ವರೆಗೆ ನನ್ನನ್ನು ರಾಜಕೀಯವಾಗಿ ಮುಗಿಸುವ ಯತ್ನ ನಡೆದಿದೆ. ಯಾದಾವುದಕ್ಕೂ ನಾನು ಬಗ್ಗುವುದಿಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ನಗರದಲ್ಲಿ ಬುಧವಾರ ಮನೆಗಳ ನಿರ್ಮಾಣಕ್ಕೆ ನಡೆದ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಈ ಹಿಂದೆ ಸೋಮಣ್ಣ ನಾನು ಜಗಳವಾಡಿರುವುದನ್ನು ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಹರಿಬಿಟ್ಟು ಮಜಾ ತೆಗೆದುಕೊಳ್ಳುತ್ತಿದ್ದಾರೆ. ಕೆಲವರಿಗೆ ಇದೇ ಉದ್ಯೋಗವಾಗಿದೆ. ಆದರೆ, ನಾನು ಮತ್ತು ಸೋಮಣ್ಣ ಆತ್ಮೀಯರಾಗಿದ್ದೇವೆ’ ಎಂದರು.

‘ಬಸನಗೌಡನನ್ನು ಹತ್ತಿಕ್ಕಲು ಹೊಸ ಜಿಲ್ಲಾಧಿಕಾರಿಯನ್ನು ತಂದಿದ್ದಾರೆ ಎನ್ನಲಾಗಿತ್ತು. ನಾನೇನು ಅವರ ಬಳಿ ರೊಕ್ಕ ಕೇಳಲು ಹೋಗಲ್ಲ. ಜನರ ಕೆಲಸ ಮಾಡುವಂತೆ ಹೇಳುತ್ತೇನೆ. ನನ್ನ ಎಲ್ಲ ಕೆಲಸವನ್ನು ಈಗಿನ ಡಿಸಿ ಮಾಡಿಕೊಡುತ್ತಿದ್ದಾರೆ. ಡಿಸಿ ಒಳ್ಳೆಯವರಿದ್ದಾರೆ’ ಎಂದು ಶ್ಲಾಘಿಸಿದರು.

25ರ ವರೆಗೆ ಕಾಯಿರಿ: ಸಚಿವ ಸಂಪುಟದಲ್ಲಿ ನಿಮಗೆ ಸ್ಥಾನ ಸಿಗಲಿದೆಯೇ ಎಂದು ಕಾರ್ಯಕ್ರಮದ ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ, ಇದೇ 25ರ ವರೆಗೆ ಕಾದುನೋಡಿ, ಅಲ್ಲಿವರೆಗೆ ನಾನು ಮಾತನಾಡುವುದಿಲ್ಲ’ ಎಂದು ಹೇಳಿದರು.

ಯತ್ನಾಳ ಎ.ಕೆ.47: ಯತ್ನಾಳ ಎ.ಕೆ.47 ಇದ್ದಂತೆ. ನೇರ ನುಡಿಗೆ ಹೆಸರಾದವರು. ಅವರ ಮನಸ್ಸು ಮಾತ್ರ ಮಗುವಿನಂತೆ, ಮನಸ್ಸಿನಲ್ಲಿ ಯಾವುದೇ ಕಲ್ಮಶವಿಲ್ಲ ಎಂದು ಸಚಿವ ವಿ.ಸೋಮಣ್ಣ ಹೇಳಿದರು.

ಆಶ್ರಯ ಮನೆ ನಿರ್ಮಾಣ ಶಂಕುಸ್ಥಾಪನೆ ಸಂಬಂಧ ವಿಜಯಪುರಕ್ಕೆ ಹೋಗುತ್ತಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ತಂದಾಗ, ‘ಮೊದಲು ಹೋಗು ಯತ್ನಾಳ ಖುಷಿಯಾಗಿದ್ದರೆ ನಾವೆಲ್ಲ ಖುಷಿಯಾದಂತೆ’ ಎಂದು ಹೇಳಿ ಕಳುಹಿಸಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು, ಯಾರನ್ನು ಬಿಡಬೇಕು ಎಂಬುದು ಮುಖ್ಯಮಂತ್ರಿ ಅವರ ಪರಮಾಧಿಕಾರ ಎಂದರು.

ಯತ್ನಾಳ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯತ್ನಾಳಗೆ ಇನ್ನೂ 55 ವರ್ಷ, ಅವರ ಅನುಭವವನ್ನು ಪಕ್ಷ ಅಗತ್ಯವಿದ್ದಾಗ ಖಂಡಿತಾ ಉಪಯೋಗಿಸಿಕೊಳ್ಳಲಿದೆ. ಅವರು ಶಾಂತವಾಗಿರಬೇಕು ಎಂದು ಮಾರ್ವಿಕವಾಗಿ ಹೇಳಿದರು.

ಪರಸ್ಪರ ಸನ್ಮಾನ: ರಾಜಕೀಯವಾಗಿ ಈ ಹಿಂದೆ ಪರಸ್ಪರ ಬೈದಾಡಿಕೊಂಡಿದ್ದ ಸಚಿವ ವಿ.ಸೋಮಣ್ಣ ಮತ್ತು ಶಾಸಕ ಯತ್ನಾಳ ಒಂದೇ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಕ್ಕೆ ಅಲ್ಲಿ ನೆರೆದಿದ್ದ ಬೆಂಬಲಿಗರು ಚಪ್ಪಾಳೆ ತಟ್ಟಿದರು.

ಸಚಿವ ವಿ.ಸೋಮಣ್ಣ ಅವರಿಗೆ ಶಾಸಕ ಬಸನಗೌಡ ಪಾಟೀಲ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಿದರು. ಬಳಿಕ ಸಚಿವರು ಯತ್ನಾಳ ಅವರನ್ನು ಸನ್ಮಾನಿಸಿದರು. 

ಸೋಮಣ್ಣ ಸಂಧಾನ ಯಶಸ್ವಿ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಆಗಾಗ ಹೇಳಿಕೆ ನೀಡುವ ಮೂಲಕ ವಿರೋಧಿಗಳ ಕೈಗೆ ಅಸ್ತ್ರ ಒದಗಿಸುತ್ತಿದ್ದ ಶಾಸಕ ಯತ್ನಾಳ ಅವರೊಂದಿಗೆ ಸಚಿವ ವಿ.ಸೋಮಣ್ಣ ನಡೆಸಿದ ಮಾತುಕತೆ ಫಲಪ್ರದವಾಗಿದೆ ಎಂಬ ಮಾತು ಕೇಳಿಬಂದಿದೆ.

ಮಂಗಳವಾರ ರಾತ್ರಿಯೇ ನಗರಕ್ಕೆ ಆಗಮಿಸಿದ್ದ ಸಚಿವರು ಯತ್ನಾಳ ಜೊತೆ ಮಾತುಕತೆ ನಡೆಸುವ ಮೂಲಕ ಮುಖ್ಯಮಂತ್ರಿ ಹೇಳಿಕಳುಹಿಸಿರುವ ಸಿಹಿ ಸುದ್ದಿಯನ್ನು ಯತ್ನಾಳ ಅವರಿಗೆ ತಿಳಿಸಿ ಹೋಗಿದ್ದಾರೆ ಎಂದು ಅವರ ಆಪ್ತ ವಲಯದಿಂದ ತಿಳಿದುಬಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.