ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಯೋಜನೆಯಾಗಲಿ ‘ಕೃಷ್ಣಾ ಮೇಲ್ದಂಡೆ’: ಡಾ.ಭುವನೇಶ್ವರಿ

ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಡಾ.ಭುವನೇಶ್ವರಿ ಹಕ್ಕೊತ್ತಾಯ
Last Updated 25 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ವಿಜಯಪುರ:ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರಥಮ ಆದ್ಯತೆ ನೀಡಬೇಕಿದೆ. ಆಗ ಮಾತ್ರ ವಿಜಯಪುರ ಸೇರಿದಂತೆ ಅತ್ಯಂತ ಹಿಂದುಳಿದಿರುವ ಉತ್ತರ ಕರ್ನಾಟಕದ ಚಿತ್ರಣ ಬದಲಾಗಲು, ಅಭಿವೃದ್ಧಿ ಹೊಂದಲು ಸಾಧ್ಯ ಎಂದುವಿಜಯಪುರ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆ ಡಾ.ಭುವನೇಶ್ವರಿ ಮೇಲಿನಮಠ ಹಕ್ಕೊತ್ತಾಯ ಮಾಡಿದರು.

ಸಮ್ಮೇಳನದ ಮುನ್ನಾದಿನವಾದ ಶುಕ್ರವಾರ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು,ಮಹಿಳೆಯೊಬ್ಬರನ್ನು ಪ್ರಥಮ ಬಾರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿರುವುದು ಸಂತೋಷ ತಂದಿದೆ ಎಂದರು.

ಕನ್ನಡ ಅತ್ಯಂತ ಶ್ರೀಮಂತ ಭಾಷೆಯಾಗಿದೆ. ಆದರೆ, ಈ ಭಾಷೆಯನ್ನು ಕಂಪ್ಯೂಟರೀಕರಣ ಮಾಡುವುದು ಅತ್ಯಂತ ಕ್ಲಿಷ್ಟಕರ. ದಶಕದಿಂದ ಇಂತಹ ಕ್ಲಿಷ್ಟಕರ ಕಾರ್ಯದಲ್ಲಿ ತೊಡಗಿರುವ ನನ್ನನ್ನು ಗುರುತಿಸಿ, ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಮಾಡಿರುವ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹಾಗೂ ಎಲ್ಲ ಪದಾಧಿಕಾರಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

ರಾಜಕೀಯ ಮೀಸಲು:ಯಾವುದೇ ರಂಗವಿರಲಿ ಮಹಿಳೆಯರು ನಿಸ್ವಾರ್ಥದಿಂದ ಸಂಪೂರ್ಣ ತಮ್ಮನ್ನು ತಾವು ತೊಡಗಿಸಿಕೊಂಡು ಕಾರ್ಯನಿರ್ವಹಿಸುತ್ತಾರೆ. ಹೀಗಾಗಿ ಹೆಣ್ಣು ಮಕ್ಕಳಿಗೆ ರಾಜಕೀಯ ಕ್ಷೇತ್ರದಲ್ಲೂ ಶೇ 33ರಷ್ಟು ಮೀಸಲಾತಿ ಕಡ್ಡಾಯವಾಗಿ ಜಾರಿಯಾಗಬೇಕಿದೆ ಎಂದು ಅವರು ಪ್ರತಿಪಾದಿಸಿದರು.

ಆಸಕ್ತಿ ಮೂಡಿಸಬೇಕಿದೆ:ಸಾಹಿತ್ಯ ಸಮ್ಮೇಳನಗಳಿಂದ ಜನರು ಅದರಲ್ಲೂ ವಿಶೇಷವಾಗಿ ಯುವ ಜನರು ದೂರವಾಗದಂತೆ ತಡೆಯಲು ಪ್ರತಿಯೊಬ್ಬರೂ ಗಮನ ಹರಿಸಬೇಕಿದೆ.ಇಂಗ್ಲಿಷ್‌, ಹಿಂದಿ ಸೇರಿದಂತೆ ಅನ್ಯ ಭಾಷೆಗಳು ನಮ್ಮ ಕನ್ನಡಿಗರ ಮನಸ್ಸನ್ನು ಆವರಿಸುವ ಮುನ್ನಾ ಕನ್ನಡ ಭಾಷೆಯ ಬಗ್ಗೆ ಮಕ್ಕಳಲ್ಲಿ ಹೆಮ್ಮೆ, ಆಸಕ್ತಿ ಮೂಡಿಸಬೇಕಿದೆ.ಈ ಸಂಬಂಧ ಬಾಲ್ಯದಲ್ಲೇ ಕನ್ನಡ ಕಲಿಕೆಗೆ ಆಸಕ್ತಿ ತೋರಿಸಬೇಕಿದೆ. ಆಗ ಅವರು ಜೀವನಪೂರ್ತಿ ಕನ್ನಡಿಗರಾಗಿ ಇರುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.

ದ.ರಾ.ಬೇಂದ್ರೆ, ಕುವೆಂಪು, ಶ್ರೀರಂಗ, ಕಂದಗಲ್‌ ಹನುಮಂತರಾವ್‌, ಮಧುರಚೆನ್ನ, ಫ.ಗು.ಹಳಕಟ್ಟಿ ಅವರಂತ ಕವಿಗಳು, ಸಾಹಿತಿಗಳು, ನಾಟಕಕಾರ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವ ಕಾರ್ಯ ಆಗಬೇಕಿದೆ ಎಂದರು.

ಕನ್ನಡ ಭಾಷೆಯು ನಮ್ಮ ಮಕ್ಕಳಿಗೆ ಉದ್ಯೋಗ, ತುತ್ತುಕೊಡುವ ಭಾಷೆಯನ್ನಾಗಿ ರೂಪಿಸುವ ಕಾರ್ಯವಾಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟಿಟ್ವರ್‌, ಇನ್‌ಸ್ಟಾಗ್ರಾಮ್‌ ಮತ್ತಿತರರ ಸಾಮಾಜಿಕ ಜಾಲತಾಣಗಳು ಜನರ ನಡುವೆ ಮೌಖಿಕ, ನೇರ ಸಂಭಾಷಣೆಯನ್ನು ಕಡಿತಗೊಳಿಸಿರುವುದು ಬಹಳ ಆಘಾತಕಾರಿ. ಈ ಮನೋಬಾವ ಕಡಿಮೆಯಾಗಲು ಸಾಹಿ್ತ್ಯ ಚಟುವಟಿಕೆಗಳು ಹೆಚ್ಚು ನಡೆಯಬೇಕಿದೆ ಎಂದು ಅವರು ಹೇಳಿದರು.

ಕಂಪ್ಯೂಟರ್‌ ಕನ್ನಡ ಭಾಷಾ ತಜ್ಞೆ

ವಿಜಯಪುರ: ಸಿಂದಗಿ ತಾಲ್ಲೂಕಿನ ಕೊರವಾರದಡಾ. ಭುವನೇಶ್ವರಿ ಅವರು ಕಂಪ್ಯೂಟರ್‌ನಲ್ಲಿ ಕನ್ನಡದ 45 ಸಾವಿರಕ್ಕೂ ಹೆಚ್ಚು ಶಬ್ದಗಳನ್ನು ಸಂಶೋಧಿಸಿದ ಹೆಗ್ಗಳಿಕೆ ಅವರದ್ದಾಗಿದೆ. ಕನ್ನಡದಲ್ಲಿ ಕ್ರಮಬದ್ದವಾದ ಅಂಕಿತನಾಮಗಳನ್ನು ಗುರುತಿಸುವ ನಿಯಮಾವಳಿಗಳನ್ನು ಅವರು ರಚಿಸಿದ್ದಾರೆ.

ವಿಜಯಪುರದ ಬಿ.ಎಲ್.ಡಿ.ಇ. ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಗಣಕಯಂತ್ರ ವಿಭಾಗದಲ್ಲಿ 25 ವರ್ಷ ಸೇವೆ ಕೊಲ್ಹಾಪುರದ ಸಂಜಯ ಘೋಡಾವತ್‌ ಎಂಜಿನಿಯರಿಂಗ್ ಕಾಲೇಜಿನಲ್ಲಿ 3 ವರ್ಷ ಕಂಪ್ಯೂಟರ್ ವಿಭಾಗದ ಮುಖ್ಯಸ್ಥರಾಗಿ, ಪಂಢರಪೂರದ ಸ್ವೇರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ವಿಭಾಗದಲ್ಲಿ 2 ವರ್ಷ ಸೇವೆ. ಪ್ರಸಕ್ತ ಬೆಂಗಳೂರಿನ ಬಿ.ಎಂ.ಎಸ್.ಐ.ಟಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಡಾ.ಭುವನೇಶ್ವರಿ ಅವರ 425 ಸಂಶೋಧನೆಯ ಪ್ರಬಂಧಗಳನ್ನು ವಿಶ್ವದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಮಂಡನೆಯಾಗಿವೆ. ಕನ್ನಡದಲ್ಲಿ ಶಬ್ದಾಗಾರ ಸಂಶೋಧನೆ ಮಾಡಿದ (ಮಾರ್ಪಾಲಾಜಿಕಲ್ ಪ್ರಬಂಧ) ರಾಜ್ಯದಲ್ಲಿಯೇ ಪ್ರಥಮರಾಗಿದ್ದಾರೆ.

ಹೈದರಾಬಾದ್‌ನ ಸೆಂಟ್ರಲ್ ಯುನಿರ್ವಸಿಟಿಯಲ್ಲಿ ಪಿಎಚ್.ಡಿ ಪದವಿ ಪಡೆದಿರುವ ಅವರು, ಕೇಂದ್ರೀಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 5ನೇ ರ‍್ಯಾಂಕ್ ಪಡೆದುಕೊಂಡಿದ್ದರು.ರಾಜ್ಯ ಸರ್ಕಾರದಿಂದ 2016-17ರಲ್ಲಿ ಕಿತ್ತೂರರಾಣಿ ಚನ್ನಮ್ಮ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಅಕ್ಷರ ಜಾತ್ರೆಗೆ ಅಣಿಯಾದ‘ಗುಮ್ಮಟನಗರಿ’

ವಿಜಯಪುರ:ಎರಡು ದಿನಗಳ(ಮಾ.26, 27) ಅಕ್ಷರ ಜಾತ್ರೆಗೆ ಗುಮ್ಮಟನಗರಿಯಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ವೇದಿಕೆ ಸಿದ್ಧವಾಗಿದೆ.

ಮಾ.26 ರಂದು ಬೆಳಿಗ್ಗೆ 7.30ಕ್ಕೆ ಧ್ವಜಾರೋಹಣ, 9ಕ್ಕೆ ಜಿಲ್ಲೆಯ ವಿವಿಧ ಕಲಾ ತಂಡಗಳೊಂದಿಗೆ ಸಿದ್ದೇಶ್ವರ ದೇವಸ್ಥಾನದಿಂದ ರಂಗಮಂದಿರ ವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ ಎಂದುಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹಾಸೀಂಪಿರವಾಲಿಕಾರ ತಿಳಿಸಿದ್ದಾರೆ.

ಬೆಳಿಗ್ಗೆ 10ಕ್ಕೆ ಸಮ್ಮೇಳನ ಉದ್ಘಾಟನಾ ನಡೆಯಲಿದೆ. ಏಳು ಗೋಷ್ಠಿಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಸನ್ಮಾನ, ವಿವಿಧ ಕಲಾ ತಂಡಗಳಿಂದ ಮನರಂಜನೆ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಮಾ.27 ರಂದು ಸಂಜೆ 5ಕ್ಕೆ ಸನ್ಮಾನ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT