ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಪರಿಣಾಮ; ಪೌರಕಾರ್ಮಿಕರತ್ತ ಸುಳಿಯದ ‘ಕೋವಿಡ್‌’

ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರ ಕಾಳಜಿಗೆ ಮೆಚ್ಚುಗೆ
Last Updated 22 ಜೂನ್ 2021, 18:32 IST
ಅಕ್ಷರ ಗಾತ್ರ

ವಿಜಯಪುರ: ಕೋವಿಡ್‌ ಎರಡನೇ ಅಲೆ ವಿಜಯಪುರ ನಗರದ ಯಾವೊಂದು ಬಡಾವಣೆಯನ್ನೂ ಬಿಡದೇ ಕಾಡಿದೆ. ನಗರದ ಎಲ್ಲೆಡೆ ಹರಡಿದ್ದ ಈ ಸೋಂಕು ಸಾಕಷ್ಟು ಜನರ ಸಾವು–ನೋವಿಗೂ ಕಾರಣವಾಗಿದೆ. ಆದರೆ. ಪ್ರತಿ ದಿನವೂ ನಗರದ ಸ್ವಚ್ಛತೆಯಲ್ಲಿ ತೊಡಗಿರುವ ಪೌರಕಾರ್ಮಿಕರತ್ತ ಕೋವಿಡ್‌ ಈ ಬಾರಿ ಸುಳಿಯದಿರುವುದು ವಿಶೇಷ.

ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಕಾಯಂ, ಗುತ್ತಿಗೆ ಪೌರಕಾರ್ಮಿಕರು, ಕಸ ಸಾಗಿಸುವ ಟಿಪ್ಪರ್‌ ಚಾಲಕರು, ಲೋಡರ್‌ಗಳು ಸೇರಿದಂತೆ ಒಟ್ಟು 700 ಪೌರಕಾರ್ಮಿಕರು ಇದ್ದು, ಇವರೆಲ್ಲರಿಗೂ ಎರಡನೇ ಅಲೆ ಪ್ರಾರಂಭಕ್ಕೂ ಮೊದಲೇ ಅಂದರೆ ಮಾರ್ಚ್‌ ಒಳಗಾಗಿ ಪ್ರತಿಯೊಬ್ಬರಿಗೂ ಕೋವಿಶೀಲ್ಡ್‌ ಲಸಿಕೆಯ ಎರಡೂ ಡೋಸ್‌ ನೀಡಲಾಗಿತ್ತು. ಪರಿಣಾಮ ಯಾರನ್ನೂ ಕೋವಿಡ್‌ಎರಡನೇ ಅಲೆ ಬಾಧಿಸಿಲ್ಲ ಎನ್ನುತ್ತಾರೆ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ.

‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅವರು, ಮಹಾನಗರ ಪಾಲಿಕೆ ವತಿಯಿಂದ ವಿಶೇಷ ಆರೋಗ್ಯ ಶಿಬಿರವನ್ನು ಆಯೋಜಿಸಿ 700 ಪೌರಕಾರ್ಮಿಕರಿಗೆ ಹಾಗೂ 120 ಪಾಲಿಕೆ ಸಿಬ್ಬಂದಿಗೆ ಲಸಿಕೆ ಹಾಕಿಸಲಾಗಿತ್ತು. ಅಲ್ಲದೇ, ಪ್ರತಿಯೊಬ್ಬರಿಗೂ ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಗಿತ್ತು ಎಂದು ಹೇಳಿದರು.

ಪೌರಕಾರ್ಮಿಕರಿಗೆಪ್ರತಿ ವಾರಕ್ಕೊಮ್ಮೆ ಹ್ಯಾಂಡ್‌ ಗ್ಲೌಸ್‌, ಸ್ಯಾನಿಟೈಸಜರ್‌, ಮಾಸ್ಕ್‌ ವಿತರಣೆ ಮಾಡಲಾಗುತ್ತಿತ್ತು. ಅಲ್ಲದೇ, ಈ ಮೊದಲೇ ನೀಡಿರುವ ಬೂಟ್‌ಗಳನ್ನು ಕಡ್ಡಾಯವಾಗಿ ಧರಿಸುವಂತೆ ಸೂಚಿಸಲಾಗಿತ್ತು ಎಂದು ತಿಳಿಸಿದರು.

ಲಾಕ್‌ಡೌನ್‌ ಕರ್ಫ್ಯೂ ಇದ್ದ ಕಾರಣ ಪೌರಕಾರ್ಮಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಉಚಿತವಾಗಿ ನಾಲ್ಕು ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಇಂದಿರಾ ಕ್ಯಾಂಟಿನ್‌ನಿಂದ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಕೆಲಸದ ಅವಧಿಯನ್ನು ಬೆಳಿಗ್ಗೆ 6ರಿಂದ 11ರ ವರೆಗೆ ಮಾತ್ರ ನಿಗದಿಗೊಳಿಸಲಾಗಿತ್ತು. ಜೊತೆಗೆ ಕೆಲಸ ಮುಗಿದ ಬಳಿಕ ಸ್ನಾನ ಮುಗಿಸಿಕೊಂಡು ಮನೆಗೆ ತೆರಳಲು ಅವಕಾಶ ಕಲ್ಪಿಸಿಕೊಡಲಾಗಿತ್ತು ಎಂದು ಹೇಳಿದರು.

ಕೋವಿಡ್‌ ಮೊದಲ ಅಲೆ ಸಂದರ್ಭದಲ್ಲಿ ಹೈಡ್ರಾಕ್ಷಿಕ್ಲೋರೊಕ್ವಿನ್‌(ಎಚ್‌ಸಿಐಎಸ್‌) ಮಾತ್ರೆಯನ್ನು ಕೊಡಿಸಲಾಗಿತ್ತು. ಪರಿಣಾಮ ಎರಡೂ ಅಲೆಯ ಸಂದರ್ಭದಲ್ಲಿ ಯಾವೊಬ್ಬ ಪೌರಕಾರ್ಮಿಕರ ಜೀವಕ್ಕೆ ಅಪಾಯವಾಗಿಲ್ಲ ಎಂದು ತಿಳಿಸಿದರು.

ಪಿಪಿಇ ಕಿಟ್‌ ಧರಿಸಿ ಸೋಂಕಿತರ ಮನೆ ಕಸ ಸಂಗ್ರಹ
ಪೌರಕಾರ್ಮಿಕರುಪಿಪಿಇ ಕಿಟ್‌ ಧರಿಸಿ, ಕೋವಿಡ್‌ ಪೀಡಿತರ ಮನೆಯಿಂದಲೂ ಕಸ ಸಂಗ್ರಹ ಮಾಡಿರುವುದು ಈ ಬಾರಿಯ ವಿಶೇಷವಾಗಿತ್ತು ಎಂದು ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ ತಿಳಿಸಿದರು.

ಕೋವಿಡ್‌ ಪೀಡಿತರ ಮನೆಯ ಕಸವನ್ನು ಸಂಗ್ರಹಿಸುವ ಮುನ್ನ ಕಸವನ್ನು ಪ್ಲಾಸ್ಟಿಕ್‌ ಬ್ಯಾಗ್‌ನಲ್ಲಿ ಪ್ಯಾಕ್‌ ಮಾಡಿಕೊಡುವಂತೆ ಮನೆಯವರಿಗೆ ತಿಳಿಸಲಾಗಿತ್ತು. ಆ ತ್ಯಾಜ್ಯದ ಪ್ಯಾಕ್‌ಗೆ ಸೋಡಿಯಂ ಹೈಪೋಕ್ಲೋರೈಡ್‌ ಸ್ಯಾನಿಟೈಸ್‌ ಮಾಡಿಸಿ ಪ್ರತ್ಯೇಕವಾಗಿ ಸಂಗ್ರಹ ಮಾಡಲಾಗುತ್ತಿತ್ತು ಎಂದು ಹೇಳಿದರು.

***

ಎಲ್ಲ ವಯಸ್ಸಿನ ಪೌರಕಾರ್ಮಿಕರು ಇದ್ದು, ಎಲ್ಲರಿಗೂ ಕೋವಿಡ್‌ ಲಸಿಕೆ ಎರಡು ಡೋಸ್‌ ಹಾಕಿಸಿದ ಪರಿಣಾಮ ಒಬ್ಬರಿಗೂ ತೊಂದರೆಯಾಗಿಲ್ಲ. ಕೋವಿಡ್‌ ತಡೆಗೆ ಲಸಿಕೆ ಶೇ 100ರಷ್ಟು ಪರಿಣಾಮಕಾರಿ ಎಂಬುದು ಸಾಬೀತಾಗಿದೆ
–ಶ್ರೀಹರ್ಷ ಶೆಟ್ಟಿ,ಆಯುಕ್ತ, ಮಹಾನಗರ ಪಾಲಿಕೆ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT