ಶನಿವಾರ, ನವೆಂಬರ್ 28, 2020
19 °C

ಸಿರಿಬಂದ ಕಾಲಕ್ಕೆ ಕರೆದು ದಾನವ ಮಾಡು

ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಪದ್ಮರಾಜ ಒಡೆಯರ ಹಿರೇಮಠ, ಬಸವನಬಾಗೇವಾಡಿ, ಜಯಪುರ ಜಿಲ್ಲೆ Updated:

ಅಕ್ಷರ ಗಾತ್ರ : | |

Prajavani

ನಾವು ಗಳಿಸಿದ ಸಂಪತ್ತನ್ನು ಪರರಿಗೆ ಮತ್ತು ಧರ್ಮದ ಕಾರ್ಯಕ್ಕೆ ಯಾವುದೇ ಫಲಾಪೇಕ್ಷೆ ಇಲ್ಲದೆ ದಾನ ಮಾಡುವುದೆ ಪುಣ್ಯ ಕಾರ್ಯ ಎಂದು ಮಹಾತ್ಮರು ಹೇಳಿದ್ದಾರೆ.

ನಾವೇನಾದರೂ ಗಳಿಸಿದ ಸಂಪತ್ತನ್ನು ಪರರಿಗೆ ದಾನ ಮಾಡದೇ ಹೋದರೆ ಆ ಸಂಪತ್ತಿಗೆ ಬೆಲೆ ಸಿಗುವುದಿಲ್ಲ. ಅದಕ್ಕಾಗಿ ಸರ್ವಜ್ಞನವರು  ‘ಸೊಡರೆಣ್ಣೆ ತೀರಿದರೆ ಕೊಡನೆತ್ತಿ ಹೊಯ್ಯುವರೇ? ಕೊಡಬೇಡ ಕೊಡದೆ ಇರಬೇಡ ಕೊಟ್ಟಿದ್ದು ಕೆಟ್ಟಿತೆನಬೇಡ, ಮುಂದೆ ಕಟ್ಟಿಹುದು ಬುತ್ತಿ, ಸರ್ವಜ್ಞ’ ಎಂದು ತಿಳಿಸಿದ್ದಾರೆ.

ಸಂಪತ್ತು ಶಾಶ್ವತವಾಗಿ ಯಾರಲ್ಲಿಯೂ ಉಳಿಯುವುದಿಲ್ಲ. ‘ಸಿರಿ ಎಂಬುದು ಸಂತೆಯ ಮಂದಿ ಕಂಡಯ್ಯಾ’ ಎಂದು ಶರಣರು ಹೇಳಿದ್ದಾರೆ. ಸಂತೆ ಮುಂಜಾನೆ ಕೂಡುತ್ತದೆ. ಮತ್ತೆ ಸಂಜೆ ಮುಗಿದು ಬಿಡುತ್ತದೆ. ಮುಂಜಾನೆ  ಬಂದಾಗ ವ್ಯಾಪಾರ ಮಾಡಿಕೊಂಡು ಬಿಡುವ ಹಾಗೆ ಭಗವಂತನು ಸಿರಿ ಸಂಪದವನ್ನು ಕೊಟ್ಟಾಗ ಅದನ್ನು ಸದುಪಯೋಗ ಮಾಡಿಕೊಂಡು ಜನಪರ ಕಾರ್ಯಗಳನ್ನು ಮಾಡಬೇಕು.

‘ಸಿರಿಬಂದ ಕಾಲದಲಿ, ಕರೆದು ದಾನವ ಮಾಡು ಪರಿಣಾಮವಕ್ಕೂ ಪದವಕ್ಕೂ ಕೈಲಾಸ ನೆರೆಮನೆಯಕ್ಕೂ ಸರ್ವಜ್ಞ’ ಎಂದು ತಿಳಿಸಿದ್ದಾರೆ.

ದಾನ, ಧರ್ಮ ಕಾರ್ಯಗಳಿಗೆ ಸದ್ ವಿನಿಯೋಗ ಮಾಡಬೇಕು. ಒಳ್ಳೆಯ ಕಾರ್ಯಗಳನ್ನು ಮಾಡುವುದರಿಂದ ನಮಗೆ ಭಗವಂತನ ಕೃಪೆಯಾಗುತ್ತದೆ. ಜೀವನವು ಸಂತೃಪ್ತಿ ಅನುಭವಿಸುತ್ತದೆ. ಒಮ್ಮೆ ಒಬ್ಬರಿಗೆ ಸಹಾಯವನ್ನು ಮಾಡಿನೋಡಬೇಕು.

ಸಹಾಯವನ್ನು ಯಾರಿಗೆ ಮಾಡಬೇಕು ಎನ್ನುವ ವಿಚಾರ ಬರುತ್ತದೆ. ನಿಜವಾದ ಸಹಾಯದ ಅವಶ್ಯಕತೆ ಇರುವವರಿಗೆ ವಿಚಾರ ಮಾಡಿ ಸಹಾಯ ಮಾಡಬೇಕಾಗುತ್ತದೆ. ನಾನು ದಾನ ಮಾಡಿದ್ದೇನೆ ಎನ್ನುವ ಭಾವ ನಮ್ಮಲ್ಲಿ ಬಂದರೆ ಅದು ಅಹಂಕಾರವಾಗುತ್ತದೆ. ಅದಕ್ಕೆ ಬಸವಣ್ಣನವರು ‘ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ ಏಡಿಸಿ ಕಾಡಿತ್ತು ಶಿವನ ಡಂಗುರ ಮಾಡಿದೆನೆನ್ನದಿರಾ ಲಿಂಗಕ್ಕೆ ಮಾಡಿದೆನೆನ್ನದಿರಾ ಜಂಗಮಕ್ಕೆ ಮಾಡಿದೆನೆಂಬುದು ಮನದಲಿಲದಿದ್ದಡೆ ಬೇಡಿದ್ದನೀವನು ಕೂಡಲಸಂಗಮದೇವ’ ಎಂದು ಬೋಧಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.