ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಕ್ಷೇತ್ರ ಟಿಕೆಟ್‌ ಮುಸ್ಲಿಮರಿಗೆ ಮೀಸಲು

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಭರವಸೆ
Last Updated 30 ನವೆಂಬರ್ 2022, 13:51 IST
ಅಕ್ಷರ ಗಾತ್ರ

ವಿಜಯಪುರ: ‘ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಕಾಂಗ್ರೆಸ್‌ ಟಿಕೆಟ್‌ ಅನ್ನು ಮುಸ್ಲಿಮರಿಗೆ ಆದ್ಯತೆ ಮೇರೆಗೆ ನೀಡಲಾಗುವುದು, ನಾನೇ ಚುನಾವಣೆ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಭರವಸೆ ನೀಡಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಜಯಪುರ ಕ್ಷೇತ್ರದಲ್ಲಿ ಈ ಬಾರಿ ಮುಸ್ಲಿಮರ ಬದಲು ಬೇರೆಯವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಲಾಗುವುದು ಎಂಬುದು ಊಹಾಪೂಹ, ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದಕ್ಕೆ ಕಿವಿಗೊಡುವ ಅಗತ್ಯವಿಲ್ಲ’ ಎಂದರು.

ಕ್ಷೇತ್ರ ಬಿಟ್ಟುಕೊಟ್ಟಿಲ್ಲ:

‘ಬಬಲೇಶ್ವರ ವಿಧಾನಸಭಾ ಕ್ಷೇತ್ರವನ್ನು ನನಗೆ ಯಾರೂ ಬಿಟ್ಟುಕೊಟ್ಟಿಲ್ಲ. ಬಿಟ್ಟುಕೊಡುವ ಪ್ರಶ್ನೆಯೂ ಉದ್ಭವಿಸಲ್ಲ. ಈ ಬಾರಿಯ ಚುನಾವಣೆಯಲ್ಲಿ ಬಬಲೇಶ್ವರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾನೇ ಸ್ಪರ್ಧಿಸುತ್ತೇನೆ. ಕನಿಷ್ಠ 50 ಸಾವಿರ ಮತಗಳ ಅಂತರದಿಂದ ನನ್ನ ಕ್ಷೇತ್ರದ ಜನರು ಗೆಲ್ಲಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಶಿವಾನಂದ ಪಾಟೀಲ ಅವರು ಬಬಲೇಶ್ವರ ಕ್ಷೇತ್ರಕ್ಕೆ ಅರ್ಜಿ ಸಲ್ಲಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಯಾವ ಕ್ಷೇತ್ರಕ್ಕೆ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು, ಅರ್ಜಿ ಸಲ್ಲಿಸಲು ಎಲ್ಲರಿಗೂ ಹಕ್ಕಿದೆ. ಯಾರಿಗೆ ಟಿಕೆಟ್‌ ನೀಡಬೇಕು ಎಂಬುದು ಪಕ್ಷದ ಹೈಕಮಾಂಡ್‌ ತೀರ್ಮಾನಿಸಲಿದೆ’ ಎಂದರು.

ದೇಶದಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡಿ, ಬೆಳಸಿದ ಪಕ್ಷ ಕಾಂಗ್ರೆಸ್‌ ಎಂಬ ಯತ್ನಾಳ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಈ ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟ ಪಕ್ಷ ಕಾಂಗ್ರೆಸ್, ದೇಶವನ್ನು ಕಟ್ಟಿ ಬೆಳೆಸಿರುವ ಪಕ್ಷ ಕಾಂಗ್ರೆಸ್‌. ಬ್ರಿಟಿಷರೊಂದಿಗೆ ಶಾಮೀಲಾಗಿರುವ ಪಕ್ಷ ಯಾವುದಾದರೂ ಇದ್ದರೆ ಅದು ಶಾಸಕ ಯತ್ನಾಳ ಅವರ ಪಕ್ಷ’ ಎಂದು ಆರೋಪಿಸಿದರು.

ಮುಗಿದ ಅಧ್ಯಾಯ:

ಮಹಾರಾಷ್ಟ್ರ, ಕರ್ನಾಟಕ ಗಡಿ ವಿವಾದ ಮುಗಿದ ಅಧ್ಯಾಯ. ಆದರೂ ಕೆಲವರು ಅನಾವಶ್ಯಕವಾಗಿ ಗಡಿ ವಿಷಯದಲ್ಲಿ ಕ್ಯಾತೆ ತೆಗೆಯುತ್ತಿದ್ದಾರೆ ಎಂದು ಹೇಳಿದರು.

ಮಹಾರಾಷ್ಟ್ರ ಸರ್ಕಾರ ನೀರಾವರಿ ಸೌಲಭ್ಯ, ರಸ್ತೆ, ಶಾಲೆ, ಸಾರಿಗೆ ಸೇರಿದಂತೆ ಮೂಲ ಸೌಲಭ್ಯ ಒದಗಿಸಿಲ್ಲ ಎಂದು ಆರೋಪಿಸಿದಕ್ಷಿಣ ಸೋಲಾಪುರ, ಅಕ್ಕಲಕೋಟ, ಜತ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕನ್ನಡಿಗರು ಈಗಾಗಲೇ ಕರ್ನಾಟಕ ಸೇರುವ ನಿರ್ಣಯ ಕೈಗೊಂಡಿದ್ದಾರೆ. ಕನ್ನಡ ಧ್ವಜ ಹಾರಿಸಿದ್ದಾರೆ. ಆ ಎಲ್ಲ ಪ್ರದೇಶಗಳು ಕರ್ನಾಟಕಕ್ಕೆ ಸೇರಬೇಕು ಎಂದು ಹೇಳಿದರು.

ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಚರ್ಚಿಸಲುಮುಖ್ಯಮಂತ್ರಿ ಅವರು ತಕ್ಷಣ ಸರ್ವಪಕ್ಷ ಸಭೆ ಕರೆಯಬೇಕು. ಕನ್ನಡ ನಾಡು, ನುಡಿ, ಜಲದ ವಿಷಯದಲ್ಲಿ ರಾಜ್ಯದಲ್ಲಿ ಯಾವುದೇ ಪಕ್ಷ ಬೇಧ ಇಲ್ಲ. ಎಲ್ಲ ಪಕ್ಷದವರೂ ಒಗ್ಗಟ್ಟಾಗಿದ್ದೇವೆ ಎಂದು ತಿಳಿಸಿದರು.

₹3.5 ಲಕ್ಷ ಕೋಟಿ ಸಾಲ:

ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ, ಭ್ರಷ್ಟಾಚಾರ ಮಿತಿಮೀರಿದೆ. 2019ರಿಂದ ಇಲ್ಲಿಯ ವರೆಗೆ ಬಿಜೆಪಿ ಸರ್ಕಾರ ₹3.5 ಲಕ್ಷ ಕೋಟಿ ಸಾಲ ಮಾಡಿದೆ ಎಂದು ಆರೋಪಿಸಿದರು.

ಬೆಂಗಳೂರಿನಲ್ಲಿ ನಡೆದಿರುವಂತೆ ವಿಜಯಪುರದಲ್ಲೂ ಮತದಾರರ ಪಟ್ಟಿಯಲ್ಲಿರುವ ಹೆಸರು ಡಿಲಿಟ್‌ ಆಗಿದೆ. ಈ ಬಗ್ಗೆ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು, ಮುಂಬರುವ ಚುನಾವಣೆ ಪಾರದರ್ಶಕವಾಗಿ ನಡೆಸಬೇಕು ಎಂದು ಆಗ್ರಹಿಸಿದರು.

***

ಬಿಜೆಪಿ ಶಾಸಕ ಯತ್ನಾಳ ಅವರೊಂದಿಗೆ ನನಗೆ ವೈಯಕ್ತಿಕ ಸ್ನೇಹ ಇದೆ. ರಾಜಕೀಯವಾಗಿ ನಾನು ಅವರಿಗೆ ಯಾವುದೇ ಸಹಾಯ ಮಾಡಿಲ್ಲ, ಮಾಡುವುದಿಲ್ಲ. ಕೆಲವರು ಅನಗತ್ಯವಾಗಿ ಅಪಪ್ರಚಾರ ಮಾಡುತ್ತಿದ್ದಾರೆ

–ಎಂ.ಬಿ.ಪಾಟೀಲ, ಅಧ್ಯಕ್ಷ, ಕೆಪಿಸಿಸಿ ಪ್ರಚಾರ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT