ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ| ಲೋಹದ ಹಕ್ಕಿ ಹಾರಾಟದ ಕನಸು ನನಸಾಗುವತ್ತ

ವಿಜಯಪುರ ನಗರದಲ್ಲಿ ವಿಮಾನ ನಿಲ್ದಾಣ ಸ್ಫಾಪನೆಗೆ ಸಚಿವ ಸಂಪುಟ ಒಪ್ಪಿಗೆ
Last Updated 9 ಜುಲೈ 2020, 14:43 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯ ಬಹುದಿನದ ಬೇಡಿಕೆಯಾಗಿದ್ದ ವಿಮಾನ ನಿಲ್ದಾಣ ಸ್ಥಾಪನೆಗೆ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ವಿಜಯಪುರ ನಗರದಿಂದ 15 ಕಿ.ಮೀ ದೂರದಲ್ಲಿರುವ ಬುರಣಾಪೂರ ಹಾಗೂ ಮದಭಾವಿ ಗ್ರಾಮಗಳ ಸುಮಾರು 727 ಎಕರೆ ಜಮೀನಿನಲ್ಲಿ ಸುಮಾರು ₹ 220 ಕೋಟಿ ವೆಚ್ಚದಲ್ಲಿ ಗ್ರೀನ್‌ ಪೀಲ್ಡ್‌ ದೇಶಿಯ ಪ್ರಯಾಣದ ವಿಮಾನ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ.

ವಿಶ್ವವಿಖ್ಯಾತ ಗೋಳಗುಮ್ಮಟ, ಆಲಮಟ್ಟಿ ಜಲಾಶಯ ಸೇರಿದಂತೆ ಪಾರಂಪರಿಕ ಸ್ಮಾರಕಗಳನ್ನು ಒಳಗೊಂಡಿರುವ ಹಾಗೂ ದ್ರಾಕ್ಷಿ, ಒಣದ್ರಾಕ್ಷಿ, ದಾಳಿಂಬೆ, ಲಿಂಬೆ ಸೇರಿದಂತೆ ತೋಟಗಾರಿಕೆ ಬೆಳೆಗಳ ರಫ್ತಿಗೆ ಹೆಸರಾಗಿರುವ ಜಿಲ್ಲೆಯ ಭವಿಷ್ಯದ ಬೆಳವಣಿಗೆಗೆ ಈ ವಿಮಾನ ನಿಲ್ದಾಣ ಹೊಸ ರೂಪ ನೀಡಲಿದೆ.

ಮೊದಲ ಹಂತದಲ್ಲಿ ಲೆವೆಲಿಂಗ್‌ ಗ್ರೌಂಡ್‌ ಫಾರ್‌ ರನ್‌ ವೇ, ಟ್ಯಾಕ್ಸಿ ವೇ, ಅಪ್ರೊನ್‌, ಪಾರ್ಕಿಂಗ್‌ ಪ್ರದೇಶ, ಟರ್ಮಿನಲ್‌ ಕಟ್ಟಡ, ರನ್‌ ವೇ ನಿರ್ಮಾಣ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ₹ 95 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಸಚಿವ ಸಂಪುಟ ಸಭೆಯಲ್ಲಿ ಪ್ರಾರಂಭಿಕ ಮಂಜೂರಾತಿ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಈ ವಿಮಾನ ನಿಲ್ದಾಣವನ್ನು ಲೋಕೋಪಯೋಗಿ ಇಲಾಖೆಯ ಮುಖಾಂತರ ಒಂದು ವರ್ಷದ ಅವಧಿಯೊಳಗೆ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

ಈ ವಿಮಾನ ನಿಲ್ದಾಣವನ್ನು ಉಡಾನ್‌ ಯೋಜನೆ ವ್ಯಾಪ್ತಿಗೊಳಪಡಿಸಿ, 72 ಆಸನಗಳುಳ್ಳ ಎ.ಟಿ.ಆರ್‌. ವಿಮಾನಗಳ ಕಾರ್ಯಾಚರಣೆಗಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಮುಂದಿನ ದಿನಗಳಲ್ಲಿ ಉದ್ಭವಿಸುವ ಬೇಡಿಕೆಗನುಗುಣವಾಗಿ ವಿಮಾನ ನಿಲ್ದಾಣವನ್ನು ಭವಿಷ್ಯದಲ್ಲಿ ಹಂತಹಂತವಾಗಿ ಮೇಲ್ದರ್ಜೆಗೇರಿಸಲಾಗುವುದು. ಎರಡನೇ ಹಂತದ ಬಾಕಿ ಉಳಿದ ಕಾಮಗಾರಿಗಳಾದ ಎ.ಟಿ.ಸಿ. ಮತ್ತು ಪೂರಕ ಕಟ್ಟಡಗಳು, ಇತರ ಏರ್‌ಸೈಡ್‌ ಕಾಮಗಾರಿಗಳನ್ನು ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

2010ರಲ್ಲಿ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲೇ ಸಾರ್ವಜನಿಕ ಖಾಸಗಿ ಸಹಭಾಗಿತ್ವದ(ಪಿಪಿಪಿ) ಅಡಿಯಲ್ಲಿ ಈ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿತ್ತು. ಅಲ್ಲದೇ, ನಿಲ್ದಾಣದ ಅಭಿವೃದ್ಧಿಗಾಗಿ ಮಾರ್ಗ್‌ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಈ ಸಂಬಂಧ 727 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು ಎಂದು ಅವರು ನೆನಪಿಸಿಕೊಂಡರು.

ನಮ್ಮ ಸರ್ಕಾರದ ಅವಧಿಯ ನಂತರ ಈ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಯು ನನೆಗುದಿಗೆ ಬಿದ್ದಿತ್ತು. ಇಷ್ಟೆಲ್ಲ ಪ್ರಕ್ರಿಯೆಯ ನಂತರ ರಾಜ್ಯ ಸರ್ಕಾರವು ಮಾರ್ಗ್‌ ಕಂಪನಿಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು 2014 ಅಕ್ಟೋಬರ್‌ನಲ್ಲಿ ರದ್ದುಪಡಿಸಿತ್ತು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT