ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ | ಆಲಮಟ್ಟಿ ಅಣೆಕಟ್ಟೆ ಸುರಕ್ಷಿತ

ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ; ಆತಂಕ, ಅಳುಕು ಬೇಡ
ಬಸವರಾಜ್‌ ಸಂಪಳ್ಳಿ/ಚಂದ್ರಶೇಖರ ಕೋಳೇಕರ
Published : 12 ಆಗಸ್ಟ್ 2024, 6:38 IST
Last Updated : 12 ಆಗಸ್ಟ್ 2024, 6:38 IST
ಫಾಲೋ ಮಾಡಿ
Comments

ವಿಜಯಪುರ: ತುಂಗಭದ್ರಾ ಅಣೆಕಟ್ಟೆಯ ಗೇಟ್ ತುಂಡಾಗಿರುವ ಹೊತ್ತಿನಲ್ಲಿ ಜಿಲ್ಲೆಯಲ್ಲಿರುವ ಆಲಮಟ್ಟಿಯ ಲಾಲ್‌ ಬಹದ್ದೂರ್‌ ಶಾಸ್ತ್ರಿ ಸಾಗರದ ಸುರಕ್ಷತೆ ಬಗ್ಗೆಯೂ ಒಂದಷ್ಟು ಆತಂಕ, ಅಳುಕು ಜನರ ಮನಸ್ಸಿನಲ್ಲಿ ಸುಳಿದಾಡಿದೆ.

‘ಆಲಮಟ್ಟಿ ಜಲಾಶಯ ಅತ್ಯಾಧುನಿಕ ತಂತ್ರಜ್ಞಾನ ಆಧರಿತವಾಗಿ ನಿರ್ಮಾಣವಾಗಿದ್ದು, ಸುರಕ್ಷತೆ ದೃಷ್ಟಿಯಿಂದ ಯಾವುದೇ ಆತಂಕ ಬೇಡ. ಇವುಗಳನ್ನು ಅಳವಡಿಸಿ ಕೇವಲ 25 ವರ್ಷಗಳಾಗಿದ್ದು, ಎಲ್ಲವೂ ಹೊಸದಿವೆ’ ಎನ್ನುತ್ತಾರೆ ತಾಂತ್ರಿಕ ನಿ‍ಪುಣರು.

ಪ್ರತಿಬಾರಿ ಕೆಬಿಜೆಎನ್ಎಲ್ ಮುಖ್ಯ ಎಂಜಿನಿಯರ್ ಅವರೇ ಮುಂದೆ ನಿಂತು ಗೇಟ್‌ಗಳ ನಿರ್ವಹಣೆಯ ಬಗ್ಗೆ ಮೇಲ್ವಿಚಾರಣೆ ನಡೆಸುತ್ತಾರೆ. ಗೇಟ್‌ಗಳ‌ ನಿರ್ವಹಣೆಗಾಗಿಯೇ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮುಖ್ಯಸ್ಥರಿರುವ ಒಂದು ಗೇಟ್‌ ಉಪವಿಭಾಗ ಕಚೇರಿಯೂ ಆಲಮಟ್ಟಿಯಲ್ಲಿದೆ. ಅದಕ್ಕಾಗಿ ಇಬ್ಬರು ಸಹಾಯಕ ಎಂಜಿನಿಯರ್, 30ಕ್ಕೂ ಹೆಚ್ಚು ತಾಂತ್ರಿಕ ನೈಪುಣ್ಯವುಳ್ಳ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಸ್ಥಳೀಯ ಕಾರ್ಮಿಕರು ಇದ್ದು, ಗೇಟ್ ನಿರ್ವಹಣೆಯಲ್ಲಿ ಕಾರ್ಯನಿರ್ವಹಿಸುತ್ತಾರೆ.

ಅಣೆಕಟ್ಟೆಯ ಸುರಕ್ಷತೆ ಮತ್ತು ತಂತ್ರಜ್ಞಾನದ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ, ದಶಕಗಳ ಕಾಲ ಆಲಮಟ್ಟಿ ಅಣೆಕಟ್ಟೆ ಗೇಟ್‌ಗಳನ್ನು ನಿರ್ವಹಣೆ ಮಾಡಿರುವ ಕಾರ್ಯನಿರ್ವಾಹಕ ಎಂಜಿನಿಯರ್‌ ಎಚ್‌.ಸಿ.ನರೇಂದ್ರ, ‘ತುಂಗಭದ್ರಾ ಜಲಾಶಯ ಅತ್ಯಂತ ಹಳೆಯ ಅಣೆಕಟ್ಟೆಯಾಗಿದೆ. ಅಲ್ಲಿ ಚೈನ್‌ ಸಿಸ್ಟಂ ಗೇಟ್‌ಗಳಿವೆ. ಆದರೆ, ಆಲಮಟ್ಟಿ ಅಣೆಕಟ್ಟೆಯಲ್ಲಿ ಹೈಡ್ರಾಲಿಕ್‌ ಸಿಸ್ಟ್‌ಂ ಗೇಟ್‌ಗಳನ್ನು ಅಳವಡಿಸಲಾಗಿದೆ’ ಎಂದು ಹೇಳಿದರು.

‘ಪವರ್‌ ಹೌಸ್‌ಗಳಲ್ಲಿ ಮಾತ್ರ ಹೈಡ್ರಾಲಿಕ್‌ ವ್ಯವಸ್ಥೆ ಇರುತ್ತದೆ. ಆಲಮಟ್ಟಿ ಅಣೆಕಟ್ಟೆಯಲ್ಲಿ ಹೈಡ್ರಾಲಿಕ್‌ ವ್ಯವಸ್ಥೆ ಅಳವಡಿಸಿರುವುದು ರಾಜ್ಯದಲ್ಲೇ ಮೊದಲು. ಹೊಸದಾಗಿ ನಿರ್ಮಾಣವಾಗುತ್ತಿರುವ ಬಹುತೇಕ ಅಣೆಕಟ್ಟೆಗಳಲ್ಲಿ ಇದೇ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಆಯಿಲ್‌ ಪ್ರಸರ್‌ ಮತ್ತು ಸಿಲಿಂಡರ್‌ಗಳಿಂದ ಕಾರ್ಯಾಚರಣೆ ನಡೆಯುತ್ತದೆ’ ಎಂದು ಹೇಳಿದರು.

‘ಆಲಮಟ್ಟಿ ಅಣೆಕಟ್ಟೆಯಲ್ಲಿ ಪ್ರತಿ ವರ್ಷ ಹೈಡ್ರಾಲಿಕ್‌ ಗೇಟ್‌ಗಳನ್ನು ಎರಡೆರಡು ಬಾರಿ ತಪಾಸಣೆ ಮಾಡಲಾಗುತ್ತದೆ. ಅಲ್ಲದೇ, ಮಳೆಗಾಲಕ್ಕೂ ಮೊದಲು ಎಲ್ಲ ಗೇಟ್‌ಗಳನ್ನು ಪರಿಶೀಲಿಸಿ, ಲೂಬ್ರಿಕೆಂಟ್‌ ಬಳಸಿ ನಿರ್ವಹಣೆ ಮಾಡಿ, ಅಣೆಕಟ್ಟೆ ಸುರಕ್ಷತಾ ವರದಿಯನ್ನು ಸರ್ಕಾರಕ್ಕೆ, ಸಿಡಬ್ಲ್ಯುಸಿಗೆ ಸಲ್ಲಿಸುತ್ತೇವೆ’ ಎಂದು ತಿಳಿಸಿದರು.

ಸ್ಟಾಪ್ಲಾನ್‌ ಗೇಟ್‌:

‘ಅಣೆಕಟ್ಟೆಯ ಮೇನ್‌ ಗೇಟ್‌ಗಳ ನಿರ್ವಹಣೆಗೆ ಅನುಕೂಲವಾಗುವಂತೆ ಸ್ಟಾಪ್ಲಾನ್‌ ಗೇಟ್‌ಗಳಿವೆ (ಅಣೆಕಟ್ಟೆಗೆ ಅಳವಡಿಸಿರುವ ಮೇನ್‌ ಗೇಟ್‌ಗಳ ಮೇಲಿನ ನೀರಿನ ಸಂಪೂರ್ಣ ಒತ್ತಡವನ್ನು ತಗ್ಗಿಸಿ, ನಿರ್ವಹಣೆ ಮಾಡಲು ಅನುಕೂಲವಾಗುವಂತೆ ಬಳಸುವುದೇ ಸ್ಟಾಪ್ಲಾನ್‌ ಗೇಟ್‌ಗಳು). ಆಲಮಟ್ಟಿಯಲ್ಲಿ ಅಂತಹ ಮೂರು ಸ್ಟಾಪ್ಲಾನ್‌ ಗೇಟ್‌ಗಳಿವೆ. ಎಂಥಹದೇ ಸಂದರ್ಭದಲ್ಲಿ ಸ್ಟಾಪ್ಲಾನ್‌ ಗೇಟ್‌ಗಳನ್ನು ಬಳಿಸಿ ಮೇನ್‌ ಗೇಟ್‌ಗಳನ್ನು ದುರಸ್ತಿ ಮಾಡಬಹುದಾಗಿದೆ’ ಎಂದರು.

‘ತುಂಗಭದ್ರಾದಂತೆ ಆಲಮಟ್ಟಿಯಲ್ಲಿ ಗೇಟ್‌ಗಳು ಒಡೆಯುವ ಸಾಧ್ಯತೆ ಬಹುತೇಕ ಇಲ್ಲ. ಆದರೂ ಕೈಮೀರಿದ ಘಟನೆಗಳು ಸಂಭವಿಸಿದರೆ ಯಾರೂ ಏನು ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದರು.

‘1998ರಲ್ಲಿ ಆಲಮಟ್ಟಿ ಅಣೆಕಟ್ಟೆ ನಿರ್ಮಾಣ ಪೂರ್ಣವಾಗಿದ್ದು, 2002ರಿಂದ ಗೇಟ್‌ ಬಂದ್ ಮಾಡಿ ಜಲಾಶಯದಲ್ಲಿ ನೀರು ನಿಲ್ಲಿಸಲಾಗುತ್ತಿದೆ. ಕಳೆದ 22 ವರ್ಷಗಳಿಂದ ಅಣೆಕಟ್ಟೆಯಲ್ಲಿ ಯಾವುದೇ ತೊಂದರೆ ಕಾಣಿಸಿಕೊಂಡಿಲ್ಲ’ ಎಂದು ತಿಳಿಸಿದರು.

‘ಡಿ.ಎನ್‌.ದೇಸಾಯಿ ನೇತೃತ್ವದ ಗೇಟ್‌ ಕಮಿಟಿ ಇತ್ತು. ಆ ಸಮಿತಿಯು ಗೇಟ್‌ ಅಳವಡಿಕೆ, ಅದರ ಸಾಮಾರ್ಥ್ಯ, ಭವಿಷ್ಯದ ಸಾಧ್ಯತೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿ, ಪರೀಕ್ಷೆಗೆ ಒಳಪಡಿಸಿ ಅಂತಿಮಗೊಳಿಸಿದೆ’ ಎಂದರು.

‘ಆಲಮಟ್ಟಿ ಅಣೆಕಟ್ಟೆಯಲ್ಲಿ ಹಿನ್ನೀರಿನ ಒತ್ತಡ ತಗ್ಗಿಸುವ ಉದ್ದೇಶದಿಂದ ಅರ್ಧ ಚಂದ್ರಾಕೃತಿಯ ಗೇಟ್‌ಗಳನ್ನು  ಅಳವಡಿಸಲಾಗಿದೆ. ಅಲ್ಲದೇ, ಬೇರೆ ಅಣೆಕಟ್ಟೆಗಳಿಗೆ ಹೋಲಿಸಿದರೆ ಆಲಮಟ್ಟಿ ಜಲಾಶಯದಲ್ಲಿ ನೀರಿನ ಸೋರಿಕೆ ನಗಣ್ಯವಾಗಿದೆ’ ಎಂದು ಹೇಳಿದರು.

ಆಲಮಟ್ಟಿ ಅಣೆಕಟ್ಟೆಯ ಗೇಟ್‌ಗಳನ್ನು ಪರಿಶೀಲಿಸುತ್ತಿರುವ ತಜ್ಞರು
ಆಲಮಟ್ಟಿ ಅಣೆಕಟ್ಟೆಯ ಗೇಟ್‌ಗಳನ್ನು ಪರಿಶೀಲಿಸುತ್ತಿರುವ ತಜ್ಞರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT